Advertisement

ಬಚಗಾಂವ್‌ ಹೆಂಡದಂಗಡಿ ಮುಚ್ಚಲು ಆಗ್ರಹ

04:50 PM Oct 05, 2018 | Team Udayavani |

ಶಿರಸಿ: ರೇಶನ್‌ ಅಂಗಡಿಗೆಂದು ಸಹಿ ಪಡೆದು ಮದ್ಯದಂಗಡಿ ಮಾಡಲಾಗಿದೆ. ಗ್ರಾಪಂನ ಪರವಾನಗಿ ಪಡೆಯದೇ ಅಶಾಂತಿ ನಿರ್ಮಾಣಕ್ಕೆ ಕಾರಣವಾಗುವ ಹೆಂಡದಂಗಡಿ ಆರಂಭಿಸಲಾಗಿದೆ. ವಾರದೊಳಗೆ ಮುಚ್ಚದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂಬ ಎಚ್ಚರಿಕೆ ತಾಲೂಕಿನ ದೊಡ್ನಳ್ಳಿ ಗ್ರಾಪಂ ವ್ಯಾಪ್ತಿಯ ಬಚಂಗಾವ್‌ನಲ್ಲಿ ವ್ಯಕ್ತವಾಗಿದೆ.

Advertisement

ಗುರುವಾರ ಬಚಗಾಂವ್‌ನಲ್ಲಿ ಸಭೆ ಸೇರಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಹಿಂದೂ ಮುಸ್ಲಿಂ ಸಂಘಟನೆಗಳ, ಸ್ತ್ರೀ ಶಕ್ತಿ, ಗ್ರಾಮ ಅರಣ್ಯ ಸಮಿತಿಗಳ ಪ್ರಮುಖರು ಒಕ್ಕೊರಲಿನಿಂದ ಗ್ರಾಮಕ್ಕೆ ಶರಾಬು ಅಂಗಡಿ ಬೇಡ ಎಂಬ ಹಕ್ಕೊತ್ತಾಯ ಮಾಡಿದರು.

ಪೇಟೆಯಿಂದಲೂ ಹಣ ಉಳಿಯುತ್ತದೆ ಎಂಬ ಕಾರಣಕ್ಕೆ ಇಲ್ಲಿ ಬಂದು ಮದ್ಯ ಸೇವನೆ ಮಾಡುವ ಘಟನೆಗಳು ಶುರುವಾಗಿದೆ. ಬಚಗಾಂವ್‌ ಅರಣ್ಯ ಭಾಗದಲ್ಲೂ ಮದ್ಯದ ಬಾಟಲಿಗಳೂ ಬೀಳುತ್ತಿವೆ. ಮಕ್ಕಳು, ಮಹಿಳೆಯರಿಗೂ ಗ್ರಾಮದಲ್ಲಿ ಸಂಚಾರ ಮಾಡುವುದು ಆತಂಕವಾಗಿದೆ. ಅರೇಕೊಪ್ಪ, ಹಿತ್ಲಗದ್ದೆ, ಬಸಳೆಕೊಪ್ಪ, ಕಸದಗುಡ್ಡೆ, ಲಿಡ್ಕರ್‌ ಕಾಂಪ್ಲೆಕ್ಸ್‌, ಶ್ರೀಗಂಧ ಸಂಕೀರ್ಣ, ಹಂಚಿನಕೇರಿ, ಕಾಳೆಹೊಂಡ, ಶ್ರೀನಗರ ಸೇರಿದಂತೆ ಹತ್ತಾರು ಊರಿನ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.

ಜಿಪಂ ಸದಸ್ಯೆ ಉಷಾ ಹೆಗಡೆ ಮಾತನಾಡಿ, ಗ್ರಾಮದಲ್ಲಿ ಮದ್ಯದಂಗಡಿ ಸ್ಥಾಪಿಸಲು ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ನಿರಪೇಕ್ಷಣಾ ಪತ್ರ ಪಡೆಯದೆ, ಜನಪ್ರತಿನಿಧಿಗಳಿಗೂ ಮಾಹಿತಿ ನೀಡಿಲ್ಲ. ಗ್ರಾಮಸ್ಥರಿಗೆ ಬೇಡವಾದ ಮದ್ಯದಂಗಡಿಯನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಂಡು ವಾರದೊಳಗೆ ಬಂದ್‌ ಮಾಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇಲ್ಲಿನ ಸಾವಿರಕ್ಕೂ ಅಧಿಕ ಕುಟುಂಬಗಳ ಜನರು ನಗರ ಪ್ರದೇಶಗಳಿಗೆ ತೆರಳಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ನೂರಾರು ಮಹಿಳೆಯರು ಹತ್ತಿರದ ಕೈಗಾರಿಕಾ ಸಂಕೀರ್ಣಕ್ಕೆ ಮುಂಜಾನೆ ಕೆಲಸಕ್ಕೆ ತೆರಳಿ ಸಂಜೆ ವೇಳೆಗೆ ಊರಿಗೆ ಆಗಮಿಸುತ್ತಾರೆ. ರಸ್ತೆಯಂಚಿನಲ್ಲಿಯೆ ಹಾಗೂ ಗ್ರಾಮಕ್ಕೆ ಹೊಂದಿಕೊಂಡೆ ಮದ್ಯದಂಗಡಿ ಆರಂಭಿಸಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಇದು ಗ್ರಾಮಸ್ಥರ ಆರಂಭದ ಹೋರಾಟವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಿದ್ದೇವೆ ಎಂದರು.

Advertisement

ರೇಣುಕಾಂಬಾ ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ವೀಣಾ ಮಡಿವಾಳ, ನಗರ ಭಾಗಗಳಲ್ಲಿ ಕುಳಿತು ಮದ್ಯ ಸೇವನೆಗೆ ಅವಕಾಶ ಇಲ್ಲದಿರುವ ಕಾರಣ ದ್ವಿಚಕ್ರ ವಾಹನಗಳಲ್ಲಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿಯೇ ಸಾರಾಯಿ ಪಡೆದುಕೊಂಡು ಹತ್ತಿರದ ಅರಣ್ಯ ಪ್ರದೇಶಗಳಲ್ಲಿ, ಹೊಳೆಯಂಚಿನಲ್ಲಿ, ಸೇತುವೆ, ರಸ್ತೆಗಳ ಪಕ್ಕದಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೊಡ್ನಳ್ಳಿ ಗ್ರಾಪಂ ಸದಸ್ಯ ನಾಗರಾಜ ಮಡಿವಾಳ, ನಗರದಿಂದ ತೀರ ಹತ್ತಿರದಲ್ಲಿದ್ದರೂ ಗಾಮೀಣ ಬದುಕು ನಡೆಸಿಕೊಂಡು ಜೀವನ ನಿರ್ವಹಣೆ ಮಾಡುತ್ತ ಬಂದ ಗ್ರಾಮ ನಮ್ಮದು. ಆದರೆ ಏಕಾಏಕಿ ಬಚಗಾಂವ್‌ ಗ್ರಾಮದಲ್ಲಿ ಎಂ.ಎಸ್‌.ಐ.ಎಲ್‌ ಮದ್ಯದಂಗಡಿ ತೆರೆದು ಗ್ರಾಮದ ಶಾಂತಿ ಕದಡುವಂತೆ ಮಾಡಿದೆ ಎಂದರು. ಆರೇಕೊಪ್ಪ ಮಸೀದಿ ಪ್ರಮುಖ ಅಬ್ದುಲ್‌ ಜಬ್ಟಾರ್‌, ಸ್ತ್ರೀಶಕ್ತಿ ಸಂಘದ ವನಜಾಕ್ಷಿ ಗೌಡ, ಆರೇಕೊಪ್ಪ ಪ್ರಾಥಮಿಕ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಹಸನ್‌ ಖಾನ್‌, ವಿದ್ಯಾಧರ ನಾಯ್ಕ ಉಪಸ್ಥಿತರಿದ್ದರು.

ಪಡಿತರ ಬೇಕು ಎಂದರೆ 5 ಕಿಮೀ ಹೋಗಬೇಕು. ಎಣ್ಣೆಗೆ 5 ಹೆಜ್ಜೆ!. ಇದು ಗ್ರಾಮಸ್ಥರ ಅಳಲು. ಎಣ್ಣೆ ಅಂಗಡಿ ಬದಲು ರೇಶನ್‌ ಅಂಗಡಿ ಆರಂಭಿಸಲಿ.
 ಉಷಾ ಹೆಗಡೆ, ಜಿ.ಪಂ ಸದಸ್ಯೆ

ನಮ್ಮ ಧ್ವನಿಗೆ ಸರಕಾರ ಮನ್ನಣೆ ನೀಡಿ ಅಂಗಡಿ ವಾಪಸ್‌ ಒಯ್ಯದೇ ಇದ್ದರೆ ಹೋರಾಟ ಆರಂಭಿಸುತ್ತೇವೆ. ಯಾವುದೇ ಕಾರಣಕ್ಕೂ ಇಂಥ ಸೌಲಭ್ಯ ನಮ್ಮ ಊರಿಗೆ ಬೇಡ.
 ಅಬ್ದುಲ್‌ ಜಬಾರ್‌, ಮಸೀದಿ ಪ್ರಮುಖ

Advertisement

Udayavani is now on Telegram. Click here to join our channel and stay updated with the latest news.

Next