ನ್ಯೂಯಾರ್ಕ್: ಕೈಯಲ್ಲಿ ಹೆಚ್ಚುವರಿ ಬೆರಳುಗಳು, ಎರಡು ಕುತ್ತಿಗೆ ಅಥವಾ ಜೋಡಿದ ದೇಹ ಹೊಂದಿದ ಸಯಾಮಿ ಅವಳಿಗಳ ಬಗ್ಗೆ ನಾವು ಕೇಳಿದ್ದೇವೆ. ಆದರೆ ಎರಡು ಬಾಯಿ ಹೊಂದಿದ ಮಗು!
ಊಹೂಂ! ಇದು ಅಪರೂಪದಲ್ಲೇ ಅಪರೂಪ. ಅದೂ ಕಳೆದೊಂದು ಶತಮಾನದಲ್ಲೇ ಬೆರಳೆಣಿಕೆಯಷ್ಟು.
ಅಮೆರಿಕದ ದಕ್ಷಿಣ ಕೆರೊಲಿನಾದ ಕಾರ್ಲ್ಸ್ಟನ್‌ನಲ್ಲಿ ಆ ಮಗುವಿಗಿದ್ದಿದ್ದು ಎರಡು ಬಾಯಿ. 6 ತಿಂಗಳ ಆ ಹೆಣ್ಣುಮಗುವಿಗೆ ಹುಟ್ಟುವಾಗಲೇ 0.8 ಇಂಚಿನ ಎರಡನೇ ಬಾಯಿ ಇತ್ತು. ಆಕೆಯ ತಾಯಿ ಗರ್ಭವತಿಯಾದ 28ನೇ ವಾರದಲ್ಲಿ ಮಗುವಿಗೆ ಎರಡು ಬಾಯಿಗಳು ಸೃಷ್ಟಿಯಾಗಿರುವುದು ಪತ್ತೆಯಾಗಿತ್ತು.
ಈ ಎರಡನೇ ಬಾಯಿಯಿಂದಾಗಿ ಮಗುವಿಗೆ ಯಾವುದೇ ಅಪಾಯವಿರಲಿಲ್ಲ. ಆಕೆ ಆಹಾರ, ಉಸಿರಾಟ ಎಲ್ಲವನ್ನೂ ಸರಿಯಾಗಿ ಮಾಡುತ್ತಿದ್ದಳು ಮತ್ತು ಎರಡನೇ ಬಾಯಿಗೆ ಮತ್ತು ಸಾಮಾನ್ಯ ಬಾಯಿಗೆ ಯಾವುದೇ ಆಂತರಿಕ ಸಂಪರ್ಕವೂ ಇರಲಿಲ್ಲ. ಆದರೆ ಇದರಿಂದಾಗಿ ಇದ್ದ ಸಮಸ್ಯೆಯೆಂದರೆ ಆ ಮಗುವಿನ ಮುದ್ದು ಮುಖದ ಸೌಂದರ್ಯಕ್ಕೆ ಪ್ರಮುಖವಾಗಿ ಧಕ್ಕೆಯಾಗಿತ್ತು. ಅಲ್ಲದೇ ಬಾಯಿಯ ಜೊಲ್ಲನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗದೇ ಇರುವುದು ಸಮಸ್ಯೆಯಾಗಿತ್ತು.
ಅಚ್ಚರಿಯೆಂದರೆ ಆ ಪುಟ್ಟ ಎರಡನೇ ಬಾಯಿಯಲ್ಲಿ ಸಣ್ಣದಾದ ಹಲ್ಲು ನಾಲಗೆ ಎಲ್ಲವೂ ಇತ್ತು.
ಆದ್ದರಿಂದ ವೈದ್ಯರು ಶಸ್ತ್ರ ಚಿಕಿತ್ಸೆಗೆ ಉದ್ದೇಶಿಸಿದ್ದು ಎರಡನೇ ಬಾಯಿಯನ್ನು ತೆಗೆದಿದ್ದಾರೆ. ಇನ್ನು ಆರು ತಿಂಗಳಲ್ಲಿ ಮಗುವಿನ ಮುಖ ಸಾಮಾನ್ಯದಂತೆ ಆಗಲಿದೆ ಎಂದು ಹೇಳಿದ್ದಾರೆ. ಜತೆಗೆ ಇದರಿಂದ ಭವಿಷ್ಯದಲ್ಲಿ ಮಗುವಿಗೆ ಯಾವುದೇ ಸಮಸ್ಯೆಯಿಲ್ಲ ಎಂದೂ ಹೇಳಿದ್ದಾರೆ.
ವೈದ್ಯರ ಹೇಳಿಕೆ ಪ್ರಕಾರ ಇಂತಹ ಸಮಸ್ಯೆ ಮನುಷ್ಯರಲ್ಲಿ ಅತಿ ಕಡಿಮೆ. ಕೋಳಿಗಳು, ಕುರಿ, ಬೆಕ್ಕು ಇತ್ಯಾದಿ ಪ್ರಾಣಿಗಳಲ್ಲಿ ಎರಡು ಬಾಯಿಯ ಸಂರಚನೆ ಕೆಲವೊಮ್ಮೆ ಕಂಡುಬರುತ್ತದೆ. ಮುಖವನ್ನು ರೂಪಿಸುವ ಪ್ರೊಟೀನ್‌ಗಳಲ್ಲಿ ಸಂಕೇತದ ಸಮಸ್ಯೆಗಳಿಂದಾಗಿ ಗರ್ಭದಲ್ಲಿ ಇಂತಹ ಅಚಾತುರ್ಯ ಘಟಿಸುತ್ತದೆ ಎನ್ನಲಾಗಿದೆ. ಈ ಮೊದಲು 2004ರಲ್ಲಿ ದೊಡ್ಡ ಬಾಯಿ, ಎರಡು ಪ್ರತ್ಯೇಕ ಮೂಗು ಇದ್ದ ಮಗು ಜನಿಸಿತ್ತು. ಆ ಮಗು ಬದುಕುವುದು ಅಸಾಧ್ಯ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರೂ, ಇದೀಗ ಆತನಿಗೆ 17 ವರ್ಷವಾಗಿದೆ.