ಬೇಲೂರು: ಪುರಾತತ್ವ ಇಲಾಖೆ ಅಧಿಕಾರಿಗಳು ಮತ್ತು ದೇವಾಲಯದ ಆಡಳಿತ ಮಂಡಳಿ ಸಿಬ್ಬಂದಿ ಬೇಜವ್ದಾರಿಯಿಂದ ಚನ್ನಕೇಶವ ದೇವಾಲಯದ ಒಳಾಂಗಣ ಕಲ್ಯಾಣ ಮಂಟಪದಲ್ಲಿ ಖಾಸಗಿ ವ್ಯಕ್ತಿಗಳು ಮಗುವಿನ ನಾಮಕರಣ ಮಾಡಿರುವುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.
ಚನ್ನಕೇಶವಸ್ವಾಮಿ ದೇಗುಲದ ಒಳಾಂಗಣ ಕಲ್ಯಾಣಮಂಟಪದಲ್ಲಿ ಕೇಶವನ ಕಲ್ಯಾಣೋತ್ಸವ ಹೊರತು ಪಡಿಸಿ, ಯಾವುದೇ ಶುಭ ಕಾರ್ಯಗಳನ್ನು ನಡೆಸಬಾರದು ಎಂದಿದ್ದರೂ, ದೇಗುಲದ ಆಡಳಿತ ಮಂಡಳಿ ಮತ್ತು ಪುರಾತತ್ವ ಇಲಾಖೆಯ ಅನುಮತಿ ಇಲ್ಲದೆ ತೊಟ್ಟಿಲು ಶಾಸ್ತ್ರದೊಂದಿಗೆ ನಾಮಕರಣ ಮಾಡಿರುವುದು ಭಕ್ತರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ತರೀಕೆರೆ ಮೂಲದ ರಾಜಣ್ಣ ಕುಟುಂಬ ವರ್ಗದವರು ತಮ್ಮ ಮೊಮ್ಮಗನ ನಾಮಕರಣವನ್ನು ಯಾವುದೇ ಅನುಮತಿ ಪಡೆಯದೆ ದೇಗುಲದ ಕಲ್ಯಾಣಮಂಟಪದಲ್ಲಿ ನಾಮಕರಣ ಶಾಸ್ತ್ರ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಪುರಾತತ್ವ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿ ಗೌತಮ್, ಇಲ್ಲಿ ಖಾಸಗಿ ವ್ಯಕ್ತಿಗಳು ಯಾವುದೇ ಕಾರ್ಯಕ್ರಮ ನಡೆಸಬಾರದು ಎಂಬ ನಿಯಮವಿದ್ದರೂ ಅನುಮತಿ ಇಲ್ಲದೆ ದೇಗುಲದ ಒಳಾಂಗಣ ಕಲ್ಯಾಣ ಮಂಟಪದಲ್ಲಿ ತೊಟ್ಟಿಲು ಶಾಸ್ತ್ರ ನಡೆಸಿದ್ದು ತಪ್ಪು, ಈ ಬಗ್ಗೆ ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.