ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ತಾಯಿ ಆನೆ ತನ್ನ ಆರೋಗ್ಯದಲ್ಲಾದ ಏರುಪೇರಿನಿಂದ ಹೊಟ್ಟೆಯೊಳಗೆ ಮರಿ ಮೃತಪಟ್ಟಿದೆ.
ಉದ್ಯಾನದಲ್ಲಿ ಹತ್ತನೇ ಮರಿಗೆ ಜನ್ಮ ನೀಡಬೇಕಾಗಿದ್ದ ಹಿರಿಯ ಆನೆ ಸುವರ್ಣ ಎರಡು ದಿನಗಳಿಂದ ಹೆರಿಗೆ ನೋವು ಅನುಭವಿಸುತ್ತಿತ್ತು. ಇದನ್ನು ಕಂಡ ವೈದ್ಯರ ತಂಡ ಆನೆಯನ್ನು ಒಂದೆಡೆ ಕಟ್ಟಿಹಾಕಿ ದೇಹದಲ್ಲಿನ ಬದಲಾವಣೆಗಳನ್ನು ಗಮನಿಸಿದ್ದಾರೆ. ಹೊಟ್ಟೆಯೊಳಗಿನ ಮರಿಗೆ ಜನ್ಮ ನೀಡಲು ಹಿಂಸೆ ಪಡುತ್ತಿದ್ದನ್ನು ಕಂಡ ಸಿಬ್ಬಂದಿ ಕೂಡಲೇ ಹಿರಿಯ ಪಶುವೈದ್ಯಾಧಿಕಾರಿಗಳನ್ನು ಕರೆಯಿಸಿ ಸಲಹೆ ಪಡೆದಿದ್ದಾರೆ. ಆಗ ಹೊಟ್ಟೆಯೊಳಗೆ ಮರಿ ಮೃತಪಟ್ಟಿರುವುದು ತಿಳಿದು ಬಂದಿದೆ. ಮೃತಪಟ್ಟ ಮರಿ ಆನೆಯನ್ನು ಹೊರ ತೆಗೆಯಲು ವೈದ್ಯರು ಸಾಕಷ್ಟು ಹರಸಾಹಸಪಟ್ಟರು.
ಮೊದಲಿಗೆ ವೈದ್ಯರ ತಂಡ ಆನೆಗೆ ಅರವಳಿಕೆ ಇಂಜಕ್ಷನ್ ನೀಡಿತು. ಬಳಿಕ ತಾಯಿ ಆನೆಯ ಗುದದ್ವಾರದ ಭಾಗದಲ್ಲಿ ಕತ್ತರಿಸಿ ಮರಿಯನ್ನು ಹೊರ ತೆಗೆಯಿತು. ಕತ್ತರಿಸಿದ ಭಾಗದಲ್ಲಿ ಹೊಲಿಗೆ ಹಾಕಿ ಚಿಕಿತ್ಸೆ ನೀಡಲಾಗಿದೆ. ಮೃತಪಟ್ಟ ಮರಿ ಆನೆಯ ತೂಕ 150 ಕೆ.ಜಿ. ಇತ್ತು. ಇದನ್ನು ಹೊರ ತೆಗೆದಿದ್ದರಿಂದ ತಾಯಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ ಎಂದು ವೈದ್ಯರ ತಂಡ ತಿಳಿಸಿದೆ.
ಸುವರ್ಣ ಆನೆ ಸುಮಾರು 48 ವರ್ಷ ವಯಸ್ಸಾಗಿದ್ದು, ಇಲ್ಲಿವರೆಗೂ 9 ಮರಿಗಗಳಿಗೆ ಸಹಜವಾಗಿ ಜನ್ಮ ನೀಡಿದೆ. ಈ ಬಾರಿ ಹತ್ತನೇ ಮರಿಗೆ ಜನ್ಮ ನೀಡಬೇಕಿತ್ತು. ಹೊಟ್ಟೆಯೊಳಗೆ 23ರಿಂದ 24 ತಿಂಗಳ ಗರ್ಭ ಬೆಳವಣಿಗೆ ಆಗಿತ್ತು. ಕಳೆದ ಮೂರು ದಿನಗಳಿಂದ ಹೆರಿಗೆ ಲಕ್ಷಣ ಕಾಣಿಸಿಕೊಂಡಿತ್ತು. ಹೊಟ್ಟೆಯೊಳಗೆ ಮರಿ ಸುತ್ತಲು ಆವರಿಸಿರುವ ನೀರಿನ ಪೊದರ ಒಡೆದು ಹೋಗಿತ್ತು. ಹಾಗೂ ಮರಿ ಇದ್ದ ಚಿತ್ರಣ ಸಹಜ ಹೆರಿಗೆಗೆ ವಿರುದ್ಧವಾಗಿತ್ತು ಇದರಿಂದ ಹೊಟ್ಟೆಯೊಳಗೆ ಮರಿ ಮೃತಪಟ್ಟಿದೆ ಎಂದು ಇಲ್ಲಿನ ವೈದ್ಯಕೀಯ ತಂಡ ತಿಳಿಸಿದೆ.
Related Articles
ಆನೆಗಳಲ್ಲಿ ಇಂತಹ ಘಟನೆಗಳು ಅಪರೂಪ, ಇಂತಹ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಕಷ್ಟವಾಗುತ್ತದೆ. ಅದರೂ ನಮ್ಮ ವೈದ್ಯರ ತಂಡ ಹೊಟ್ಟೆಯೊಳಗಿದ್ದ ಮರಿಯನ್ನು ಹೊರ ತೆಗೆದು ತಾಯಿ ಆನೆ ಆರೋಗ್ಯ ಸುರಕ್ಷಿತವಾಗಿರುವಂತೆ ನೋಡಿಕೊಂಡಿದ್ದಾರೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಪನ್ವಾರ್ ತಿಳಿಸಿದ್ದಾರೆ.