Advertisement

ಅಡ್ವಾಣಿಗೆ ತೀವ್ರ ಸಂಕಷ್ಟ: ಕ್ರಿಮಿನಲ್‌ ಸಂಚು ಆರೋಪ ಕೈಬಿಡದ ಕೋರ್ಟ್‌

02:16 PM May 30, 2017 | |

ಲಕ್ನೋ: 1992 ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ವಿಚಾರಣೆ ಮಂಗಳವಾರ ಇಲ್ಲಿನ ಸಿಬಿಐ ವಿಶೇಷ ಕೋರ್ಟ್‌ನಲ್ಲಿ ನಡೆದಿದ್ದು, ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಸೇರಿದಂತೆ ಬಿಜೆಪಿಗೆ ನಾಯಕರಿಗೆ ತೀವ್ರ ಸಂಕಷ್ಟ ಎದುರಾಗಿದೆ.

Advertisement

ಅಡ್ವಾಣಿ, ಕೇಂದ್ರದ ಮಾಜಿ ಸಚಿವ ಡಾ.ಮುರಳಿ ಮನೋಹರ ಜೋಶಿ, ಕೇಂದ್ರ ಸಚಿವೆ ಉಮಾ ಭಾರತಿ ಸೇರಿದಂತೆ ಎಲ್ಲಾ 12 ಪ್ರಮುಖ ಆರೋಪಿಗಳು ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ  ತಮ್ಮ ವಿರುದ್ಧ ಕ್ರಿಮಿನಲ್ ಸಂಚು ಆರೋಪವನ್ನು ದಾಖಲಿಸಬಾರದು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿ, ಕ್ರಿಮಿನಲ್‌ ಸಂಚು ರೂಪಿಸಿದ ಆರೋಪ ಹೊರಿಸಿ ತೀರ್ಪು ನೀಡಿದೆ. 

ಭಾರತೀಯ ದಂಡ ಸಂಹಿತೆ 120 ಬಿ (ಕ್ರಿಮಿನಲ್‌ ಸಂಚು ಆರೋಪದ ದಂಡನೆ) ಕಲಂ ಅನ್ವಯ ಲಕ್ನೋ ಸಿಬಿಐ ವಿಶೇಷ ಕೋರ್ಟ್‌ ಆರೋಪವನ್ನು ಹೊರಿಸಿದೆ. 

ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ತಮ್ಮ ಕಕ್ಷಿದಾರರು  ಯಾವುದೇ ಕ್ರಿಮಿನಲ್‌ ಸಂಚಿನಲ್ಲಿ ಭಾಗಿಯಾಗಿಲ್ಲ ಎಂಬ ಅಡ್ವಾಣಿ ಪರ ವಕೀಲರ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಕೋರ್ಟ್‌ ತೀರ್ಪಿನಿಂದಾಗಿ  ಬಿಜೆಪಿ ನಾಯಕರಿಗೆ ಸಂಕಷ್ಟ ಎದುರಾಗಿದ್ದು ಕ್ರಿಮಿನಲ್ ಸಂಚಿನ ಆರೋಪದಡಿಯಲ್ಲಿ ವಿಚಾರಣೆ ಎದುರಿಸಬೇಕಾಗಿದೆ.

ಜಾಮೀನು ಮಂಜೂರು 

Advertisement

ಬೆಳಗ್ಗೆ ಸಿಬಿಐ ವಿಶೇಷ ಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ  ಪ್ರಕರಣಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ಬಾಂಡ್‌ ಆಗಿ ತಲಾ 50 ಸಾವಿರ ರೂಪಾಯಿಗಳ ಶ್ಯೂರಿಟಿಯೊಂದಿಗೆ ವಿಶೇಷ ನ್ಯಾಯಮೂರ್ತಿ ಎಸ್‌.ಕೆ.ಯಾದವ್‌ ಅವರು ಜಾಮೀನು ಮಂಜೂರು ಮಾಡಿದ್ದರು.

ಅಡ್ವಾಣಿ, ಜೋಷಿ, ಉಮಾಭಾರತಿ ,ವಿನಯ್‌ ಕಟಿಯಾರ್‌, ಸಾದ್ವಿ ರಿತಂಬರಾ ಸೇರಿದಂತೆ ಪ್ರಮುಖ ಆರೋಪಿಗಳು ಕೋರ್ಟ್‌ಗೆ ಖುದ್ದು ಹಾಜರಾಗಿದ್ದರು. ಈ ವೇಳೆ ಕೋರ್ಟ್‌ ಆವರಣದಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿತ್ತು. 

1992ರ ಡಿ.6ರಂದು ನಡೆದ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸಕ್ಕೆ ಕ್ರಿಮಿನಲ್‌ ಸಂಚು ರೂಪಿಸಿದ ಆರೋಪ ಹೊತ್ತಿದ್ದ ಆಡ್ವಾಣಿ, ಮುರಳಿ ಮನೋಹರ್‌ ಜೋಷಿ, ಉಮಾಭಾರತಿ, ವಿನಯ್‌ ಕಟಿಯಾರ್‌, ಕಲ್ಯಾಣ್‌ ಸಿಂಗ್‌ ಹಾಗೂ ಇತರರನ್ನು ರಾಯ್‌ಬರೇಲಿಯ ಕೆಳಹಂತದ ನ್ಯಾಯಾಲಯವು ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ನಂತರ 2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ಕೂಡ ಎತ್ತಿಹಿಡಿದಿತ್ತು. ಅದನ್ನು ಪ್ರಶ್ನಿಸಿ ಸಿಬಿಐ 2011ರ ಫೆ.18ರಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಹಾಜಿ ಮಹಬೂಬ್‌ ಅಹ್ಮದ್‌(ದಿವಂಗತ) ಎಂಬವರೂ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next