Advertisement

ಬಾಬರಿ ಮಸೀದಿ ಧ್ವಂಸ ಪ್ರಕರಣ: ಆಡ್ವಾಣಿಗೆ ಬಂತೇ ಸಂಕಷ್ಟ?

03:45 AM Mar 07, 2017 | Team Udayavani |

ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಆಡ್ವಾಣಿ ಅವರಿಗೆ ಸಂಕಷ್ಟ ಎದುರಾಗಲಿದೆಯೇ? ಆಡ್ವಾಣಿ, ಮುರಳಿ ಮನೋಹರ್‌ ಜೋಷಿ, ಉಮಾಭಾರತಿ ಸೇರಿದಂತೆ 13 ಮಂದಿ ಮತ್ತೂಮ್ಮೆ ವಿಚಾರಣೆ ಎದುರಿಸಬೇಕಾಗಿದೆಯೇ?

Advertisement

ಇಂತಹದೊಂದು ಸುಳಿವನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಮಸೀದಿ ಧ್ವಂಸ ಪ್ರಕರಣದಲ್ಲಿ ಆಡ್ವಾಣಿ ಹಾಗೂ ಇತರರ ವಿರುದ್ಧದ ಆರೋಪಗಳನ್ನು ತಾಂತ್ರಿಕ ಕಾರಣಗಳಿಗಾಗಿ ಕೈಬಿಟ್ಟಿರುವುದನ್ನು ಒಪ್ಪಲಾಗದು ಎಂದು ನ್ಯಾ. ಪಿ.ಸಿ.ಘೋಷ್‌ ಮತ್ತು ನ್ಯಾ.ಆರ್‌.ಎಸ್‌. ನಾರಿಮನ್‌ ಅವನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ. ಜತೆಗೆ, ಬಾಬರಿ ಮಸೀದಿ ಧ್ವಂಸಕ್ಕೆ ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಆಡ್ವಾಣಿ (89) ಹಾಗೂ ಇತರರ ವಿರುದ್ಧ ವಿಚಾರಣೆ ನಡೆಸಬೇಕೇ, ಬೇಡವೇ ಎಂಬ ಕುರಿತ ಆದೇಶವನ್ನು ಮಾ.22ರಂದು ಹೊರಡಿಸುವುದಾಗಿ ಹೇಳಿದೆ.

ಸುಪ್ರೀಂ ಮೆಟ್ಟಿಲೇರಿದ್ದ ಸಿಬಿಐ: 1992ರ ಡಿ.6ರಂದು ನಡೆದ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸಕ್ಕೆ ಕ್ರಿಮಿನಲ್‌ ಸಂಚು ರೂಪಿಸಿದ ಆರೋಪ ಹೊತ್ತಿದ್ದ ಆಡ್ವಾಣಿ, ಮುರಳಿ ಮನೋಹರ್‌ ಜೋಷಿ, ಉಮಾಭಾರತಿ, ವಿನಯ್‌ ಕಟಿಯಾರ್‌, ಕಲ್ಯಾಣ್‌ ಸಿಂಗ್‌ ಹಾಗೂ ಇತರರನ್ನು ರಾಯ್‌ಬರೇಲಿಯ ಕೆಳಹಂತದ ನ್ಯಾಯಾಲಯವು ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ನಂತರ 2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ಕೂಡ ಎತ್ತಿಹಿಡಿದಿತ್ತು. ಅದನ್ನು ಪ್ರಶ್ನಿಸಿ ಸಿಬಿಐ 2011ರ ಫೆ.18ರಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಹಾಜಿ ಮಹಬೂಬ್‌ ಅಹ್ಮದ್‌(ದಿವಂಗತ) ಎಂಬವರೂ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು. ಕರಸೇವಕರ ವಿರುದ್ಧ ದಾಖಲಾಗಿರುವ ಮಸೀದಿ ಧ್ವಂಸದ ಪ್ರಮುಖ ಪ್ರಕರಣವು ಲಖನೌ ವಿಚಾರಣಾ ನ್ಯಾಯಾಲಯದಲ್ಲಿ ಇನ್ನೂ ವಿಚಾರಣಾ ಹಂತದಲ್ಲಿದೆ.

ಮರು ವಿಚಾರಣೆಯ ಸುಳಿವು: ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, “ಆಡ್ವಾಣಿ ಮತ್ತಿತರರ ವಿರುದ್ಧದ ಕ್ರಿಮಿನಲ್‌ ಸಂಚು ಆರೋಪ ಕೈಬಿಟ್ಟಿರುವುದನ್ನು ಒಪ್ಪಲಾಗದು. ಸಂಚು ಮಾಡಿದ ಆರೋಪವನ್ನು ಸೇರಿಸಿ 9 ಮಂದಿಯ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಲು ನಾವು ನಿಮಗೆ(ಸಿಬಿಐ) ಅವಕಾಶ ಕಲ್ಪಿಸುತ್ತೇವೆ. ಅಲ್ಲದೆ, ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ಜಂಟಿಯಾಗಿ ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸುತ್ತೇವೆ,’ ಎಂದಿದೆ. ಸುಪ್ರೀಂನ ಈ ಆದೇಶದಿಂದಾಗಿ, ಲಕ್ನೋ ಮತ್ತು ರಾಯ್‌ಬರೇಲಿಯ ನ್ಯಾಯಾಲಯಗಳಲ್ಲಿರುವ ಪ್ರತ್ಯೇಕ ಪ್ರಕರಣಗಳನ್ನು ಯಾವುದಾದರೂ ಒಂದೇ ವಿಚಾರಣಾ ನ್ಯಾಯಾಲಯ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

ವಕೀಲರ ಆಕ್ಷೇಪ: ಸುಪ್ರೀಂ ಕೋರ್ಟ್‌ನ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡ್ವಾಣಿ ಪರ ವಕೀಲರು, “ಪ್ರಕರಣದಲ್ಲಿ ಸಂಚು ಆರೋಪವನ್ನು ಮರುಸೇರ್ಪಡೆಗೊಳಿಸಿದರೆ, ರಾಯ್‌ಬರೇಲಿಯ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದ ಎಲ್ಲ 183 ಮಂದಿ ಸಾಕ್ಷಿಗಳನ್ನೂ ನಾವು ಮತ್ತೆ ಹಾಜರುಪಡಿಸಬೇಕಾಗುತ್ತದೆ,’ ಎಂದರು. ಆದರೆ, ಇವರ ವಾದವನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಳ್ಳಲಿಲ್ಲ.

Advertisement

ಬಾಬರಿ ಮಸೀದಿ ಧ್ವಂಸ ವಿಚಾರದಲ್ಲಿ ಎರಡು ರೀತಿಯ ಪ್ರಕರಣಗಳು ದಾಖಲಾಗಿವೆ. ಒಂದು ರಾಮಕಥಾ ಕುಂಜ್‌ನಲ್ಲಿದ್ದ ಆಡ್ವಾಣಿ ಹಾಗೂ ಇತರೆ ಬಿಜೆಪಿ ನಾಯಕರ ವಿರುದ್ಧವಾದರೆ, ಮತ್ತೂಂದು ಮಸೀದಿಯನ್ನು ನೆಲಸಮಗೊಳಿಸಿದ ಲಕ್ಷಾಂತರ ಕರಸೇವಕರ ವಿರುದ್ಧ. ಈ ಪೈಕಿ ಶಿವಸೇನೆ ಸ್ಥಾಪಕ ಬಾಳಠಾಕ್ರೆ ಅವರೂ ಆರೋಪಿ ಸ್ಥಾನದಲ್ಲಿದ್ದರು. ಅವರ ನಿಧನದ ನಂತರ ಆರೋಪಿಗಳ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿತ್ತು.

ಏನಿದು ಪ್ರಕರಣ?
ಅಯೋಧ್ಯೆಯಲ್ಲಿರುವ 16ನೇ ಶತಮಾನದ, ಮೊಘಲರ ಆಳ್ವಿಕೆ ಕಾಲದ ಪುರಾತನ ಮಸೀದಿಯನ್ನು ವಿಶ್ವ ಹಿಂದೂ ಪರಿಷತ್‌(ವಿಎಚ್‌ಪಿ)ನ ಕರಸೇವಕರು 1992ರ ಡಿಸೆಂಬರ್‌ 6ರಂದು ನೆಲಸಮಗೊಳಿಸಿದ್ದರು. ಮಸೀದಿ ಇರುವ ಜಾಗವೇ ಶ್ರೀರಾಮನ ಜನ್ಮಭೂಮಿ ಎನ್ನುವುದು ಕರಸೇವಕರ ವಾದವಾಗಿತ್ತು. ಮಸೀದಿ ಧ್ವಂಸದ ವೇಳೆ ಬಿಜೆಪಿ ಹಿರಿಯ ನಾಯಕರಾದ ಎಲ್‌.ಕೆ.ಆಡ್ವಾಣಿ ಹಾಗೂ  ಮುರಳಿ ಮನೋಹರ್‌ ಜೋಷಿ ಅವರು ಸ್ಥಳದಲ್ಲೇ ಇದ್ದರು. ಬಾಬರಿ ಮಸೀದಿಯ ಧ್ವಂಸವು ಸ್ವತಂತ್ರ ಭಾರತದಲ್ಲಾದ ಅತಿದೊಡ್ಡ ಘಟನೆಗಳಲ್ಲೊಂದು. ಮಸೀದಿ ನೆಲಕ್ಕುರುಳುತ್ತಿದ್ದಂತೆಯೇ ದೇಶಾದ್ಯಂತ ಕೋಮು ದಳ್ಳುರಿ ಆರಂಭವಾಗಿ, ನೂರಾರು ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದರು.

ಆಡ್ವಾಣಿ ವಿರುದ್ಧದ ಆರೋಪಗಳು
– ಕ್ರಿಮಿನಲ್‌ ಸಂಚು
– ವರ್ಗಗಳ ನಡುವೆ ವೈರತ್ವಕ್ಕೆ ಉತ್ತೇಜನ
– ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ
– ಸಾರ್ವಜನಿಕ ಶಾಂತಿ ಹಾಳುಮಾಡುವಂಥ ಸುಳ್ಳು ಹೇಳಿಕೆಗಳು, ವದಂತಿಗಳ ರವಾನೆ

Advertisement

Udayavani is now on Telegram. Click here to join our channel and stay updated with the latest news.

Next