ಹೊಸದಿಲ್ಲಿ: ಅಯೋಧ್ಯೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಪ್ಟೆಂಬರ್ 30ರೊಳಗೆ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡಬೇಕೆಂದು ಲಕ್ನೋ ಸಿಬಿಐ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಸೇರಿದಮಥೆ ಹಲವರು ವಿರುದ್ಧ ಪ್ರಕರಣ ದಾಖಲಾಗಿದ್ದು, ಲಕ್ನೋ ಸಿಬಿಐ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.
ಈ ಹಿಂದೆ ಆಗಸ್ಟ್ 31ರ ಒಳಗೆ ತೀರ್ಪು ನೀಡಬೇಕೆಂದು ಹೇಳಲಾಗಿತ್ತು. ಆದರೆ ವಿಶೇಷ ಮನವಿ ಕಾರಣದಿಂದ ನ್ಯಾ. ನವೀನ್ ಸಿನ್ಹಾ ಮತ್ತು ನ್ಯಾ. ಇಂದಿರಾ ಬ್ಯಾನರ್ಜಿ ಅವರನ್ನು ಒಳಗೊಂಡ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ಸಪ್ಟೆಂಬರ್ 30ರ ಒಳಗೆ ಮುಗಿಸಲು ಹೆಚ್ಚುವರಿ ಅವಧಿ ವಿಸ್ತರಿಸಿ ಗಡುವು ನೀಡಿದೆ. ವಿಚಾರಣೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಗಡುವು ನಿಗದಿ ಪಡಿಸಿದ ನಾಲ್ಕನೇ ಪ್ರಕರಣ ಇದಾಗಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಆರು ರಾಜಕೀಯ ಪಕ್ಷಗಳ ಮೈತ್ರಿ: ಏನಿದು ಹೊಸ ಬೆಳವಣಿಗೆ?
1992 ರಲ್ಲಿ ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಿಜೆಪಿ ನಾಯಕರು ವಿಚಾರಣೆ ಎದುರಿಸಿತ್ತಿದ್ದಾರೆ. ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು (ಸೆಕ್ಷನ್ 153 ಎ), ರಾಷ್ಟ್ರೀಯ ಏಕೀಕರಣದ ಮೇಲೆ ಪರಿಣಾಮ ಬೀರುವ ಹೇಳಿಕೆಗಳನ್ನು ನೀಡುವುದು (ಸೆಕ್ಷನ್ 153 ಬಿ) ಅಥವಾ ಸಾರ್ವಜನಿಕ ಕಿಡಿಗೇಡಿತನಕ್ಕೆ (ಸೆಕ್ಷನ್ 505) ಸೇರಿದಂತೆ ಭಾರತೀಯ ಅಪರಾಧ ಸಂಹಿತೆ (ಐಪಿಸಿ) ಅಡಿಯಲ್ಲಿ ವಿವಿಧ ಅಪರಾಧಗಳಿಗೆ ಅವರ ಮೇಲೆ ಆರೋಪ ಹೊರಿಸಲಾಗಿದೆ.