Advertisement

ಬಾಬ್ರಿ ವಿವಾದ ದೀರ್ಘ ಇತಿಹಾಸ; ಎರಡು ದಶಕಗಳ ಕಾಲ ವಾದ, ಪ್ರತಿವಾದ

02:29 PM Sep 30, 2020 | Nagendra Trasi |

ಲಖನೌ: 28 ವರ್ಷಗಳ ಬಳಿಕ ದೇಶದ ವಿವಾದಿತ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹೊರ ಬಿದ್ದಿದ್ದು, ಎಲ್ಲಾ ಆರೋಪಿಗಳನ್ನು ನಿರ್ದೋಷಿಗಳೆಂದು ಸಿಬಿಐ ವಿಶೇಷ ಕೋರ್ಟ್‌ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿಯೇ ಪ್ರಕರಣ ಪ್ರಾರಂಭವಾದಾಗಿನಿಂದ ನಡೆದಿದ್ದೇನು ಎಂಬುದರ ಮಾಹಿತಿ ಇಲ್ಲಿದೆ.

Advertisement

ಡಿ.6, 1992ರಂದು ಬಾಬ್ರಿ ಮಸೀದಿ ಧ್ವಂಸ

1992ರ ಡಿಸೆಂಬರ್‌ 6ರಂದು ನಿಗದಿಯಾಗಿದ್ದ ಕರಸೇವೆಯಲ್ಲಿ ಭಾಗವಹಿಸಲು ದೇಶಾದ್ಯಂತ ವಿವಿಧೆಡೆಯಿಂದ ಬರುವ ಎಲ್ಲರಿಗೂ ಹೈಕೋರ್ಟ್‌ ಅನುಮತಿ ನೀಡಿತ್ತು. ಅಯೋಧ್ಯೆಯನ್ನು ತಲುಪಬಹುದಾದ ಕರಸೇವಕರ ಸಂಖ್ಯೆಯನ್ನು ನ್ಯಾಯಾಲಯ ನಿರ್ಧರಿಸಲಿಲ್ಲ. ಡಿ.6ರಂದು ಬಾಬ್ರಿ ಮಸೀದಿಯನ್ನು ಕರಸೇವಕರು ಧ್ವಂಸಗೊಳಿಸಿದ್ದರು. ಈ ಪ್ರಕರಣದ ಮೊದಲ ಎಫ್ಐಆರ್‌ ಅನ್ನು ರಾಮ ಜನ್ಮಭೂಮಿ ಪೊಲೀಸ್‌ ಠಾಣೆಯಲ್ಲಿ 6.15ಕ್ಕೆ ದಾಖಲಿಸಲಾಗಿದ್ದು, ಇದರಲ್ಲಿ ಲಕ್ಷಾಂತರ ಕರಸೇವಕರನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ. ಆದರೆ, ಅದರಲ್ಲಿ ಯಾರೊಬ್ಬರ ಹೆಸರನ್ನೂ ನಿರ್ದಿಷ್ಟವಾಗಿ ದಾಖಲಿಸಿಲ್ಲ.

2ನೇ ಬಾರಿ ಎಫ್ಐಆರ್‌ ಮೊದಲ ಎಫ್ಐಆರ್‌ ದಾಖಲಿಸಿದ 10 ನಿಮಿಷಗಳ ನಂತರ, ಮತ್ತೊಂದನ್ನು 6.25ಕ್ಕೆ ನೋಂದಾಯಿಸಲಾಗಿದೆ, ಆಗ ರಾಮ ಜನ್ಮಭೂಮಿ ಪೊಲೀಸ್‌ ಠಾಣೆಯ ಉಸ್ತುವಾರಿ ಗಂಗಾ ಪ್ರಸಾದ್‌ ತಿವಾರಿ ಅವರ ದೂರಿನ ಮೇರೆಗೆ ಈ ಎಫ್ಐಆರ್‌ ದಾಖಲಿಸಲಾಗಿತ್ತು. ಎರಡನೇ ಎಫ್ಐಆರ್‌ನಲ್ಲಿ ರಾಜಕೀಯದ ಅಂಶವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು.

Advertisement

ಎರಡನೇ ಎಫ್ಐಆರ್‌ ಅನ್ನು ಸ್ಥಳೀಯ ಪೊಲೀಸರಿಗೆ ತನಿಖೆಗಾಗಿ ಹಸ್ತಾಂತರಿಸಲಾಯಿತು. ಆದರೆ, ಪ್ರಕರಣವನ್ನು ಎರಡನೇ ದಿನ ಸಿಬಿ– ಸಿಐಡಿ ತನಿಖೆಗೆ ವರ್ಗಾಯಿಸಲಾಯಿತು. ನಂತರ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ ರಾಜೀನಾಮೆ ನೀಡಿದರು. ಆನಂತರ ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. ಪ್ರಕರಣದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿದ ಸಿಬಿ-ಸಿಐಡಿ ಪ್ರಕರಣದ ಚಾರ್ಜ್‌ಶೀಟ್‌ ಸಲ್ಲಿಸಿತ್ತು.

2 ದಶಕಗಳವರೆಗೆ ನಡೆದ ವಾದ-ಪ್ರತಿವಾದ ಇಡೀ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿದ ಬಳಿಕ ತನಿಖೆ ಆರಂಭಿಸಿದ ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ 49 ಜನರ ವಿರುದ್ಧ ನ್ಯಾಯಾಲಯದಲ್ಲಿ ಚಾರ್ಜ್‌ ಶೀಟ್‌ ಸಲ್ಲಿಸಿತು. ಪ್ರಕರಣದ ವಿಚಾರಣೆ, ವಾದ-ಪ್ರತಿವಾದ ಹೀಗೆ ಸುದೀರ್ಘ‌ ಎರಡು ದಶಕಗಳವರೆಗೆ ನಡೆದಿದ್ದು,  ರಾಯ್‌ ಬರೇಲಿ ಮತ್ತು ಲಖನೌ ಸ್ಥಳಗಳಲ್ಲಿ  ಈ ಪ್ರಕರಣದ ವಿಚಾರಣೆ ನಡೆಸಲಾಗಿದೆ.

ಇದನ್ನೂ ಓದಿ:ಬಾಬ್ರಿ ಪ್ರಕರಣ; ಅಂತಿಮ ತೀರ್ಪು ನೀಡಿ ಸೇವೆಯಿಂದ ಜಡ್ಜ್ ಎಸ್.ಕೆ.ಯಾದವ್ ನಿವೃತ್ತಿ

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಕಿರುನೋಟ

* 1992ರ ಡಿಸೆಂಬರ್‌ 6ರಂದು ಬಾಬ್ರಿ ಮಸೀದಿ ರಚನೆಯನ್ನು ನೆಲಸಮಗೊಳಿಸಿದ ನಂತರ, ಫೈಜಾಬಾದ್‌ನಲ್ಲಿ ಒಂದೇ ದಿನದಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಮೊದಲ ಎಫ್ಐಆರ್‌ ಹೆಸರು ಸೂಚಿಸದ ಲಕ್ಷಾಂತರ ಕರಸೇವಕರ ವಿರುದ್ಧ ದಾಖಲಾಗಿದೆ. ಎರಡನೆಯ ಎಫ್ಐಆರ್‌ ಲಾಲ್‌ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್‌ ಜೋಶಿ, ಬಾಳಾ ಠಾಕ್ರೆ, ಉಮಾ ಭಾರತಿ ಮತ್ತು ಇತರರು ಸೇರಿದಂತೆ 49 ಜನರ ವಿರುದ್ಧ ದಾಖಲಾಗಿತ್ತು.

* 1993ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಿ ಆದೇಶ ಮಾಡಲಾಯಿತು. ಬಳಿಕ ತನಿಖೆ ನಡೆಸಿದ ಸಿಬಿಐ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರನ್ನು ಆರೋಪಿಗಳೆಂದು ಹೆಸರಿಸಿದ ಪ್ರಕರಣವನ್ನು ರಾಯ್‌ ಬರೇಲಿ ನ್ಯಾಯಾಲಯದಲ್ಲಿ ಮತ್ತು ಲಕ್ಷಾಂತರ ಕರಸೇವಕರು ಆರೋಪಿಗಳೆಂದು ಉಲ್ಲೇಖಿಸಲಾಗಿದ್ದ ಇನ್ನೊಂದು ಪ್ರಕರಣವನ್ನು ಲಖನೌ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ಅದೇ ವರ್ಷ ಅಕ್ಟೋಬರ್‌ ತಿಂಗಳಲ್ಲಿ, ಸಿಬಿಐ ಎರಡೂ ಪ್ರಕರಣಗಳನ್ನು ವಿಲೀನಗೊಳಿಸಿ ಚಾರ್ಜ್‌ಶೀಟ್‌ ಅನ್ನು ಸಲ್ಲಿಸಿತು. ಇದರಲ್ಲಿ ಲಾಲ್‌ ಕೃಷ್ಣ ಅಡ್ವಾಣಿ ಸೇರಿದಂತೆ ಇತರ ನಾಯಕರು ಬಾಬ್ರಿ ಮಸೀದಿ ಧ್ವಂಸಕ್ಕೆ ಕ್ರಿಮಿನಲ್‌ ಪಿತೂರಿ ನಡೆಸಿದ್ದಾರೆ ಎಂದು ಆರೋಪ ಹೊರಿಸಲಾಗಿತ್ತು.

* 1996ರಲ್ಲಿ ಉತ್ತರ ಪ್ರದೇಶ ಸರ್ಕಾರ ಎರಡೂ ಪ್ರಕರಣಗಳನ್ನು ಜತೆಯಾಗಿ ವಿಚಾರಣೆ ನಡೆಸುವ ಕುರಿತಂತೆ ಅಧಿಸೂಚನೆ ಹೊರಡಿಸಿತು. ಅದರ ನಂತರ, ಲಖನೌದ ಸಿಬಿಐ ವಿಶೇಷ ನ್ಯಾಯಾಲಯವು ಈ ಪ್ರಕರಣದಲ್ಲಿ ಕ್ರಿಮಿನಲ್‌ ಪಿತೂರಿಯ ಪರಿಚ್ಚೇದವನ್ನು ಸೇರಿಸಿತು. ಇದನ್ನು ಆರೋಪಿಗಳಾದ ಲಾಲ್‌ ಕೃಷ್ಣ ಅಡ್ವಾಣಿ ಮತ್ತು ಇತರರು ನ್ಯಾಯಾಲಯದಲ್ಲಿ ಪ್ರಶ್ನಿಸಿದರು.

* ಮೇ 4, 2001ರಂದು ವಿಶೇಷ ಸಿಬಿಐ ನ್ಯಾಯಾಲಯ ಅಡ್ವಾಣಿ ಮತ್ತು ಇತರರ ವಿರುದ್ಧದ ಕ್ರಿಮಿನಲ್‌ ಪಿತೂರಿಯ ಆರೋಪವನ್ನು ತೆಗೆದುಹಾಕಿತು.

* 2003ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸುದೀರ್ಘ‌ ವಿಚಾರಣೆ ನಡೆಸಿದ್ದ ಸಿಬಿಐ ಚಾರ್ಜ್‌ ಶೀಟ್‌ ಸಲ್ಲಿಸಿತು. ಎಲ್.ಕೆ.ಆಡ್ವಾಣಿ ವಿರುದ್ಧ ಸಾಕಷ್ಟು ಪುರಾವೆಗಳಿಲ್ಲ ಎಂದು ರಾಯ್‌ ಬರೇಲಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ವಿಷಯದಲ್ಲಿ, ಹೈಕೋರ್ಟ್‌ ಮಧ್ಯ ಪ್ರವೇಶಿಸಿದ ಬಳಿಕ ಕ್ರಿಮಿನಲ್‌ ಪಿತೂರಿಯ ಆರೋಪದ ಜತೆಗೆ ಅಡ್ವಾಣಿ ಮತ್ತು ಇತರರ ವಿರುದ್ಧದ ವಿಚಾರಣೆ ಮುಂದುವರೆಯಿತು.

ಇದನ್ನೂ ಓದಿ:ಬಾಬ್ರಿ ಪ್ರಕರಣ: ಆರೋಪಿಗಳ ಖುಲಾಸೆಗೆ ನ್ಯಾಯಾಧೀಶರು ನೀಡಿರುವ 5 ಪಾಯಿಂಟ್ಸ್

* ಲಾಲ್‌ ಕೃಷ್ಣ ಅಡ್ವಾಣಿ ಮತ್ತು ಇತರರ ವಿರುದ್ಧ ಕ್ರಿಮಿನಲ್‌ ಪಿತೂರಿ ಆರೋಪವನ್ನು ಅಲಹಾಬಾದ್‌ ಹೈಕೋರ್ಟ್‌ 2010ರ ಮೇ 23ರಂದು ಕೈಬಿಟ್ಟಿತು. ಇದನ್ನು ಪ್ರಶ್ನಿಸಿ 2012ರಲ್ಲಿ ಸಿಬಿಐ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತು. ಬಳಿಕ ಸುಪ್ರೀಂಕೋರ್ಟ್‌ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳ ವಿರುದ್ಧದ ಕ್ರಿಮಿನಲ್‌ ಪಿತೂರಿಯ ಆರೋಪವನ್ನು ಎತ್ತಿ ಹಿಡಿಯಿತು. ಜತೆಗೆ, ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಲು ಸಿಬಿಐಗೆ ಸೂಚನೆ ನೀಡಿತು.

* ಏಪ್ರಿಲ್‌ 2017ರಲ್ಲಿ ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ ಸಿಬಿಐನ ವಿಶೇಷ ನ್ಯಾಯಾಲಯಕ್ಕೆ ಎರಡು ವರ್ಷಗಳಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿತು. ಬಳಿಕ ಈ ಪ್ರಕರಣವನ್ನು ರಾಯ್‌ ಬರೇಲಿ ಮತ್ತು ಲಖನೌದಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ಆದರೆ, ಸುಪ್ರೀಂಕೋರ್ಟ್‌ ಎರಡೂ ಪ್ರಕರಣಗಳನ್ನು ವಿಲೀನಗೊಳಿಸಲು ಮತ್ತು ಲಖನೌದಲ್ಲಿ ಪ್ರಕರಣದ ವಿಚಾರಣೆ ನಡೆಸುವಂತೆ ಆದೇಶಿಸಿ ವಿಚಾರಣೆಯನ್ನು ಪೂರ್ಣಗೊಳಿಸಲು ಕಟ್ಟಪ್ಪಣೆ ಮಾಡಿತು.

* ಈ ಹಿನ್ನಲೆಯಲ್ಲಿ ಮೇ 21, 2017ರಿಂದ, ಪ್ರಕರಣದ ದೈನಂದಿನ ವಿಚಾರಣೆ ಪ್ರಾರಂಭವಾಯಿತು. ಎಲ್ಲ ಆರೋಪಿಗಳ ಹೇಳಿಕೆಗಳನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ, ಲಾಲ್‌ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ್‌ ಜೋಶಿ ಸೇರಿದಂತೆ ಅನೇಕ ಆರೋಪಿಗಳು ತಮ್ಮ ಹೇಳಿಕೆಗಳನ್ನು ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ದಾಖಲಿಸಲಿದ್ದಾರೆ.

* ಅನಂತರ 31ರೊಳಗೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತನಿಖೆ ಪೂರ್ಣಗೊಳಿಸಲು ಮೇ 8, 2020ರಂದು ಸುಪ್ರೀಂಕೋರ್ಟ್‌ ಹೊಸ ಆದೇಶಿಸಿತು. ಆದರೆ, ಕೋವಿಡ್ ವ್ಯಾಪಕ ಹರಡುವಿಕೆ ದೃಷ್ಟಿಯಿಂದ ವಿಚಾರಣೆಗೆ ನಿಗದಿಪಡಿಸಿದ್ದ ಅಂತಿಮ ದಿನಾಂಕವನ್ನು ಸೆ.30ಕ್ಕೆ ವಿಸ್ತರಿಸಲಾಯಿತು.

* ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಯಾದವ್‌ ಅವರು ಸೆಪ್ಟಂಬರ್‌ 1, 2020ರಂದು ಎಲ್ಲಾ ಆರೋಪಿಗಳು, ಸಾಕ್ಷಿಗಳು ಮತ್ತು ವಾದ – ಪ್ರತಿವಾದಗಳನ್ನು ಆಲಿಸಿದ ಬಳಿಕ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದರು. ಅನಂತರ ಸೆಪ್ಟಂಬರ್‌ 2ರಂದು ತೀರ್ಪು ಬರೆಯಲು ಪ್ರಾರಂಭಿಸಿದರು. ಈ ಐತಿಹಾಸಿಕ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಸೆ.30ರಂದು ಪ್ರಕಟಿಸಲಾಗುವುದೆಂದು ಸುರೇಂದ್ರ ಯಾದವ್‌ ಸೆಪ್ಟೆಂಬರ್‌ 16ರಂದು ಪ್ರಕಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next