ಹರಿದ್ವಾರ : ಖ್ಯಾತ ಯೋಗ ಗುರು ಬಾಬಾ ರಾಮ್‌ದೇವ್ ಅವರು ಯೋಗ, ಆಯುರ್ವೇದ ಬಳಿಕ ಹೊಸದೊಂದು ಕ್ಷೇತ್ರಕ್ಕೆ ಮುನ್ನುಗ್ಗಿದ್ದಾರೆ – ಅದೆಂದರೆ ಭದ್ರತಾ ಉದ್ಯಮ ಕ್ಷೇತ್ರ.
ವರದಿಗಳ ಪ್ರಕಾರ ಬಾಬಾ ರಾಮ್‌ದೇವ್ ಅವರು ಕಳೆದ ಜು.10ರಂದು ಪರಾಕ್ರಮ ಸುರಕ್ಷಾ ಪ್ರೈವೇಟ್ ಲಿಮಿಟೆಡ್ ಎಂಬ ಭದ್ರತಾ ಸೇವೆಗಳನ್ನು ಪೂರೈಸುವ ಉದ್ಯಮ ಸಂಸ್ಥೆಯೊಂದನ್ನು ಆರಂಭಿಸಿದ್ದಾರೆ.
ರಾಮ್ ದೇವ್ ಅವರು ಈ ವಿಷಯವನ್ನು ಟ್ವಿಟರ್‌ನಲ್ಲಿ ತಾವೇ ಖುದ್ದು ದೃಢಪಡಿಸಿದ್ದಾರೆ.
“ಜನರನ್ನು ಸ್ವಂತಕ್ಕಾಗಿ ಮತ್ತು ದೇಶದ ಭದ್ರತೆಗಾಗಿ ಸಿದ್ಧಗೊಳಿಸುವುದು ನಮ್ಮ ಉದ್ದೇಶ. ಇದಕ್ಕಾಗಿ ನಾವು ಪರಾಕ್ರಮ ಸುರಕ್ಷಾ ಎಂಬ ಭದ್ರತಾ ಸಂಸ್ಥೆಯನ್ನು ಹುಟ್ಟುಹಾಕಿದ್ದೇವೆ’ ಎಂದು ಬಾಬಾ ರಾಮ್‌ದೇವ್ ಅವರು ಹೇಳಿಕೆಯೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಪರಾಕ್ರಮ ಸುರಕ್ಷಾ ತರಬೇತಿ ಕಾರ್ಯಕ್ಕೆಂದು ಬಾಬಾ ರಾಮ್ ದೇವ್ ಅವರು ನಿವೃತ್ತ ಪೊಲೀಸ್ ಮತ್ತು ಸೇನಾಧಿಕಾರಿಗಳನ್ನು ನೇಮಿಸಿಕೊಂಡಿದ್ದಾರೆ. ವರ್ಷಾಂತ್ಯದೊಳಗೆ ಪರಾಕ್ರಮ ಸುರಕ್ಷಾ ಭದ್ರತಾ ಸಂಸ್ಥೆ ಕಾರ್ಯಾರಂಭಿಸಲಿದೆ. ಹರಿದ್ವಾರದ ಪತಂಜಲಿ ಸಂಕೀರ್ಣದಲ್ಲಿ ತರಬೇತಿ ಕೆಲಸ ನಡೆಯುತ್ತದೆ ಎಂದು ಬಾಬಾ ಹೇಳಿದ್ದಾರೆ.
ಬಾಬಾ ರಾಮ್‌ದೇವ್ ಅವರ ಆಯುರ್ವೇದ ಮತ್ತು ಎಫ್ಎಂಸಿಜಿ ಉದ್ಯಮವು 2016ರಲ್ಲಿ 1,100 ಕೋಟಿ ರೂ. ವಹಿವಾಟು ನಡೆಸಿದೆ. 25,600 ಕೋಟಿ ರೂ. ಸಂಪತ್ತು ಹೊಂದಿರುವ ಪತಂಜಲಿ ಸಂಸ್ಥೆಯ ಸಿಇಓ ಆಚಾರ್ಯ ಬಾಲಕೃಷ್ಣ ಅವರು ಭಾರತದ 25ನೇ ಅತ್ಯಂತ ಸಿರಿವಂತ ವ್ಯಕ್ತಿ ಎನಿಸಿದ್ದಾರೆ.