ಕೊಳ್ಳೇಗಾಲ: ತಾಲೂಕಿನ ಜಾಗೇರಿ ಸಮೀಪದ ಬೂದಗಟ್ಟೆ ದೊಡ್ಡಿ ರೈತ ಮುಖಂಡರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿರುವುದನ್ನು ಖಂಡಿಸಿ ಅಧಿಕಾರಿಗಳ ವಿರುದ್ಧ ಬಾರುಕೋಲು ಚಳವಳಿಯನ್ನು ರೈತ ಮುಖಂಡರು ಗುರುವಾರ ನಡೆಸಿದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತ ಮುಖಂಡರು ನಗರದ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಜಮಾವಣೆಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಡಾ.ಅಂಬೇಡ್ಕರ್, ಡಾ.ರಾಜ್‌ಕುಮಾರ್ ರಸ್ತೆ, ಐಬಿ ರಸ್ತೆ, ಆರ್ ಎಂಸಿ ರಸ್ತೆಯ ಮೂಲಕ ಉಪ ಅರಣ್ಯ ಸಂರಕ್ಷಣೆ ಅಧಿಕಾರಿಗಳ ಕಚೇರಿಗೆ ಬಂದು ಸೇರಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರೈತ ಮುಖಂಡರು ಸಮಸ್ಯೆಯನ್ನು ಆಲಿಸದೇ ಡಿಎಫ್ಒ ಸಂತೋಷ್ ಫಲಾಯಾನ ಮಾಡುವ ಮೂಲಕ ರೈತರಿಗೆ ದ್ರೋಹ ಎಸಗಿದ್ದಾರೆಂದು ಆರೋಪಿಸಿದರು.ಡಿ.12ರಂದು ಹನೂರು ತಾಲೂಕಿಗೆ ಮುಖ್ಯಮಂತ್ರಿಬರಲಿದ್ದು, ಅಂದು ಸಾವಿರಾರು ಸಂಖ್ಯೆಯಲ್ಲಿ ರೈತರು ಸೇರಿ ಸಮಸ್ಯೆ ಪರಿಹರಿಸುವಂತೆ ಧರಣಿ ನಡೆಸುವುದಾಗಿ ಹೇಳಿದರು.
ಡಿ.11ರಂದು ಜಿಲ್ಲಾ ಉಸ್ತುವಾರಿ ಸಚಿವ ಜಾಗೇರಿಗೆ ಆಗಮಿಸಲಿದ್ದು ಅಲ್ಲಿ ರೈತರ ಸಮಸ್ಯೆ ಪರಿಹರಿಸಬೇಕು. ಇಲ್ಲವಾದ ಪಕ್ಷದಲ್ಲಿ ಮುಖ್ಯಮಂತ್ರಿಗಳ ವಿರುದ್ಧವೇ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಚಳವಳಿಯಲ್ಲಿ ಉಪಾಧ್ಯಕ್ಷ ಮಹೇಶ್ ಪ್ರಭು,ರಾಜ್ಯ ಸಮಿತಿ ಸದಸ್ಯ ಪ್ರಸನ್ನ ಗೌಡ, ಮೈಸೂರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕುಮಾರ್, ಮುಖಂಡರಾದ ಸಿದ್ದರಾಜು, ಶೈಲೇಂದ್ರ, ಸಂತೋಷ್, ಬಸವರಾಜು, ರೈತ ಮುಖಂಡರು, ಮಹಿಳೆಯರು ಇದ್ದರು.