Advertisement

ಪಕ್ಷಕ್ಕೆ ಮುಜುಗರ ತರುವ ವಿಷಯಕ್ಕೆ ನನ್ನ ಸಮ್ಮತಿಯಿಲ್ಲ: ಅಭಿಮಾನಿಗಳಿಗೆ ವಿಜಯೇಂದ್ರ ಮನವಿ

01:21 PM Oct 04, 2021 | Team Udayavani |

ಬೆಂಗಳೂರು: ರಾಜ್ಯದ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪಚುನಾವಣೆಯ ಪಕ್ಷದ ಉಸ್ತುವಾರಿಗಳ ಪಟ್ಟಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಸರಿಲ್ಲದಿರುವುದು ಹಲವು ಗುಮಾನಿಗಳಿಗೆ ಕಾರಣವಾಗಿತ್ತು. ಈ ಕುರಿತಂತೆ ವಿಜಯೇಂದ್ರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿ.ಎಲ್.ಸಂತೋಷ್ ಸೇರಿದಂತೆ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯೇಂದ್ರ ಟ್ವೀಟ್ ಮಾಡಿ, ಪಕ್ಷಕ್ಕೆ ಮುಜುಗರ ತರುವ ಯಾವುದೇ ವಿಷಯಕ್ಕೂ ನನ್ನ ಸಮ್ಮತಿಯಿಲ್ಲ ಎಂದಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯೇಂದ್ರ ಯಡಿಯೂರಪ್ಪ, “ಉಪಚುನಾವಣೆ ಘೋಷಣೆಯಾಗಿರುವ ಎರಡು ಕ್ಷೇತ್ರಗಳ ಉಸ್ತುವಾರಿಗಳ ಪಟ್ಟಿಯಲ್ಲಿ ನನ್ನ ಹೆಸರಿಲ್ಲ ಎನ್ನುವ ಕಾರಣಕ್ಕೆ ಕೆಲವು ಅಭಿಮಾನಿಗಳು, ಕಾರ್ಯಕರ್ತರು ಪಕ್ಷದ ಹಿರಿಯ ನಾಯಕರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಖಂಡಿತಾ ಸರಿಯಲ್ಲ, ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ” ಎಂದಿದ್ದಾರೆ.

ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವುದೂ ಸೇರಿದಂತೆ ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸಲು ನಾನು ಕಟಿ ಬದ್ಧನಾಗಿದ್ದೇನೆ. ಪಕ್ಷದ ಗೆಲುವೇ ನಮಗೆ ಮುಖ್ಯ, ಇನ್ನ್ಯಾವುದೂ ಅಲ್ಲ. ಭಿನ್ನಾಭಿಪ್ರಾಯದ ಧ್ವನಿಗಳಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡುತ್ತದೆ, ವಿಪಕ್ಷಗಳಿಗೆ ಪರೋಕ್ಷ ನೆರವು ನೀಡಿದಂತಾಗುತ್ತದೆ ಎಂದಿದ್ದಾರೆ.

ಪಕ್ಷದ ತೀರ್ಮಾನದಂತೆ, ನಮ್ಮ ಎಲ್ಲ ನಾಯಕರ ಮಾರ್ಗದರ್ಶನದಲ್ಲಿ, ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ನಾವು ಕಾರ್ಯನಿರ್ವಹಿಸೋಣ. ಪಕ್ಷಕ್ಕೆ ಮುಜುಗರ ತರುವ ಯಾವುದೇ ವಿಷಯಕ್ಕೂ ನನ್ನ ಸಮ್ಮತಿಯಿಲ್ಲ. ನಮ್ಮ ಎಲ್ಲಾ ಪ್ರಯತ್ನಗಳನ್ನೂ ಪಕ್ಷದ ಹಿತ ಮತ್ತು ಗೆಲುವಿಗಾಗಿಯೇ ವಿನಿಯೋಗಿಸೋಣ ಎಂದು ವಿಜಯೇಂದ್ರ ಮನವಿ ಮಾಡಿದ್ದಾರೆ.

Advertisement

ಇದನ್ನೂ ಓದಿ:ವಿಜಯೇಂದ್ರಗೆ ಸಿಗದ ಚುನಾವಣೆ ಉಸ್ತುವಾರಿ: ಬಿ.ಎಲ್.ಸಂತೋಷ್ ವಿರುದ್ಧ ಬೆಂಬಲಿಗರ ಆಕ್ರೋಶ

Advertisement

Udayavani is now on Telegram. Click here to join our channel and stay updated with the latest news.

Next