Advertisement

Mandya ಮುಖಂಡರ ಜತೆಗೆ ಬಿ.ವೈ.ವಿಜಯೇಂದ್ರ ಸಭೆ; ಮುನಿಸು ಮರೆಯುವಂತೆ ಮನವಿ

08:14 PM Mar 26, 2024 | Team Udayavani |

ಬೆಂಗಳೂರು : ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಜಿಲ್ಲೆಯ ಬಿಜೆಪಿ ಮುಖಂಡರ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿದ್ದು, ಮತ್ತೊಮ್ಮೆ ಮೋದಿಗಾಗಿ ಮುನಿಸು ಮರೆಯುವಂತೆ ಮನವಿ ಮಾಡಿದ್ದಾರೆ.

Advertisement

ಖಾಸಗಿ ಹೊಟೇಲ್‌ನಲ್ಲಿ ಮಾಜಿ ಸಚಿವ ನಾರಾಯಣಗೌಡ, ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ, ಸಚ್ಚಿದಾನಂದ ಸೇರಿದಂತೆ ಪ್ರಮುಖ ನಾಯಕರ ಜತೆಗೆ ವಿಜಯೇಂದ್ರ ಚರ್ಚೆ ನಡೆಸಿದ್ದು, ಬುಧವಾರ ಮಂಡ್ಯ ಹಾಗೂ ಮೈಸೂರಿನಲ್ಲಿ ಪ್ರಮುಖ ನಾಯಕರನ್ನು ಭೇಟಿ ಮಾಡಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಪ್ರಯತ್ನ ನಡೆಸಲಿದ್ದಾರೆ.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವಿಜಯೇಂದ್ರ, “ಎರಡು ಪಕ್ಷ ಒಟ್ಟಾಗಿ ಕೆಲಸ ಮಾಡಬೇಕು, ರಾಜ್ಯದ 28ಕ್ಕೆ 28 ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ನರೇಂದ್ರ ಮೋದಿಯವರನ್ನು ಮತ್ತೆ ಮತ್ತೂಮ್ಮೆ ಪ್ರಧಾನಿಯಾಗಿ ಮಾಡಬೇಕೆಂಬುದು ನಮ್ಮೆಲ್ಲರ ಉದ್ದೇಶ. ನಾರಾಯಣ ಗೌಡರು ಸೇರಿದಂತೆ ಪ್ರತಿಯೊಬ್ಬರ ಜತೆ ಮಾತನಾಡಿದ್ದೇನೆ. ಮಂಡ್ಯದಲ್ಲಿ ತಳಮಟ್ಟದಲ್ಲಿ ಬಿಜೆಪಿಯ ದೊಡ್ಡ ಕಾರ್ಯಕರ್ತರ ಪಡೆಯೇ ಇದೆ. ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಪಕ್ಷ ಬಿಡುವುದಿಲ್ಲ : ನಾರಾಯಣ ಗೌಡ ಪಕ್ಷ ಬಿಡುತ್ತಾರೆಯೇ ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದಕ್ಕಾಗಿ ನಾರಾಯಣಗೌಡರು ಎಂಥ ತ್ಯಾಗ ಮಾಡಿದ್ದರು ಎಂಬುದು ನಮಗೆಲ್ಲರಿಗೂ ಗೊತ್ತು. ಯಾವುದೇ ಕಾರಣಕ್ಕೂ ಅವರು ಪಕ್ಷ ತ್ಯಜಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎರಡು ದಿನದೊಳಗೆ ಸುಮಲತಾ ಭೇಟಿ
ಸಂಸದೆ ಸುಮಲತಾ ಅಂಬರೀಶ್‌ ಅವರ ಬಗ್ಗೆ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಇನ್ನೆರಡು ದಿನದಲ್ಲಿ ನಾನೇ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ವಿಜಯೇಂದ್ರ ತಿಳಿಸಿದ್ದಾರೆ. ಸುಮಲತಾ ಅವರ ಬಗ್ಗೆ ನಮಗೆಲ್ಲರಿಗೂ ಗೌರವವಿದೆ. ಕಳೆದ ಬಾರಿ ಬಿಜೆಪಿಯ ಎಲ್ಲ ಕಾರ್ಯಕರ್ತರು ಅವರ ಬೆಂಬಲಕ್ಕೆ ನಿಂತಿದ್ದರು. ನಾನು ಅವರ ಜತೆ ಮಾತನಾಡುತ್ತೇನೆ ಎಂದು ಹೇಳಿದರು.

Advertisement

ಈ ಸಲ ಸುಮಲತಾ ಅವರಿಗೆ ಟಿಕೆಟ್‌ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೆವು, ಅವರು ಸಹ ಟಿಕೆಟ್‌ ತಂದೇ ತರುತ್ತೇನೆ ಎಂಬ ವಿಶ್ವಾಸದಲ್ಲಿದ್ದರು. ಆದರೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಸುಮಲತಾ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ ಬಳಿಕ ಮುಂದೆ ಏನು ಮಾಡಬೇಕು ಎಂಬುದನ್ನು ತೀರ್ಮಾನಿಸುತ್ತೇನೆ.
-ನಾರಾಯಣಗೌಡ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next