Advertisement

ನನ್ನನ್ನು ಪರೀಕ್ಷಿಸಲು ಬಿವೈವಿ ಆಮಿಷ: ಅನ್ವರ್‌ ಮಾಣಿಪ್ಪಾಡಿ

12:44 AM Dec 17, 2024 | Team Udayavani |

ಮಂಗಳೂರು: ಕಾಂಗ್ರೆಸ್‌ನವರ 150 ಕೋಟಿ ರೂ. ಆಮಿಷದ ಬಗ್ಗೆ ವಿಜಯೇಂದ್ರ ಹೇಳಿದ್ದು ನಿಜ. ಆದರೆ ಅವರು ನಿಜಕ್ಕೂ ನನ್ನನ್ನು ಪರೀಕ್ಷೆ ಮಾಡಲು ಹಾಗೆ ಹೇಳಿದ್ದರು ಎಂದು ಅಲ್ಪಸಂಖ್ಯಾಕರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಹೇಳಿದ್ದಾರೆ. ತಮ್ಮ ಹೇಳಿಕೆ ಕುರಿತು ಸಚಿವ ಪ್ರಿಯಾಂಕ್‌ ಖರ್ಗೆ ಮಾಡಿರುವ ಆರೋಪದ ಕುರಿ ತಂತೆ ಮಂಗಳೂರಿನಲ್ಲಿ ಸುದ್ದಿಗಾರರಿಗೆ ಅವರು ಪ್ರತಿಕ್ರಿಯೆ ನೀಡಿದರು.

Advertisement

ವಿಜಯೇಂದ್ರ ಅವರು ಬಿಜೆಪಿ ಕಚೇರಿ ಯಲ್ಲಿ ಸಿಕ್ಕಿದಾಗ ಕಾಂಗ್ರೆಸ್‌ ಆಮಿಷದ ಬಗ್ಗೆ ಹೇಳಿದ್ದರು. “ಕಾಂಗ್ರೆಸ್‌ನವರು ಕೇಸ್‌ ಕ್ಲೋಸ್‌ ಮಾಡಲು ಕೋಟಿ ಕೊಡಲು ಸಿದ್ಧರಿದ್ದಾರಲ್ವಾ? ಅದನ್ನು ತೆಗೆದುಕೊಂಡು ನೀವು ಸುಮ್ಮನೆ ಇರಿ’ ಎಂಬುದಾಗಿ ವಿಜಯೇಂದ್ರ ಹೇಳಿದ್ದರು. “ನೀವು ಇಷ್ಟು ಸಮಯ ಹೋರಾಟ ಮಾಡಿ ಕಷ್ಟದಲ್ಲಿ ಇದ್ದೀರಿ. ಹಾಗಾಗಿ ಏನಾದರೂ ಆಗುತ್ತದೆ’ ಎಂದಿದ್ದರು. ಆಗ ನಾನು ಕಷ್ಟದಲ್ಲಿದ್ದೆ, ಆಸ್ಪತ್ರೆ ಬಿಲ್‌ ಕಟ್ಟುವುದಕ್ಕೂ ನನ್ನ ಬಳಿ ಹಣ ಇರಲಿಲ್ಲ. ಇದನ್ನು ನೋಡಿ ವಿಜಯೇಂದ್ರ ನನಗೆ ಹಾಗೆ ಹೇಳಿದ್ದರು. ಆದರೆ ಆಗ ನನಗೆ ಸಿಟ್ಟು ಬಂತು, ನಾನು ಅವರಿಗೆ ಬೈದೆ. ಆದರೆ ಅವರು ನನ್ನನ್ನು ಪರೀಕ್ಷೆ ಮಾಡಲು ಹಾಗೆ ಹೇಳಿದ್ದು ಎಂಬುದು ಆಮೇಲೆ ಗೊತ್ತಾಯಿತು ಎಂದು ಮಾಣಿಪ್ಪಾಡಿ ಸ್ಪಷ್ಟಪಡಿಸಿದರು.

ಅನಂತರ ವಿಜಯೇಂದ್ರ ಅವರೇ, “ಕೇಸ್‌ ಕ್ಲೋಸ್‌ ಮಾಡುವುದು ಬೇಡ, ಟೈಟ್‌ ಮಾಡೋಣ’ ಎಂದಿದ್ದರು. ಅವರೇನೂ ಆಮಿಷ ಒಡ್ಡಿದ್ದಲ್ಲ. ಬದಲಿಗೆ ಕಾಂಗ್ರೆಸ್‌ನವರ ಆಮಿಷದ ಬಗ್ಗೆ ಹೇಳಿದ್ದರು ಅಷ್ಟೇ. ಆದರೆ ನಾನು ಅದನ್ನು ಒಪ್ಪದೆ ಅವರಿಗೆ ಬೈದಿದ್ದೆ, ನನ್ನ ವರದಿಗೆ ತಡೆ ಉಂಟು ಮಾಡಿದ ಎಲ್ಲರಿಗೂ ನಾನು ಬೈದಿದ್ದೇನೆ. ನನ್ನ ವರದಿಯ ಭಯ ಇರುವುದು ಕಾಂಗ್ರೆಸ್‌ನವರಿಗೆ. ಇದರಲ್ಲಿ ಬಿಜೆಪಿಯವರ ಹೆಸರಿಲ್ಲ ಎಂದರು.

ಒತ್ತಡದಿಂದಾಗಿ
ಯೂಟರ್ನ್: ಡಿಕೆಶಿ
ಬೆಳಗಾವಿ: ವಕ್ಫ್ ಪ್ರಕರಣ ಸಂಬಂಧ ಸ್ವತಃ ಅನ್ವರ್‌ ಮಾಣಿಪ್ಪಾಡಿ ಅವರೇ ತಮಗೆ ಹಿಂದೆ ಆಮಿಷ ಒಡ್ಡಲಾಗಿತ್ತು ಎಂದು ಹೇಳಿರುವುದರ ಮೇಲೆ ನಾವು ಪ್ರತಿಕ್ರಿಯೆ ನೀಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ವಕ್ಫ್ ಮಂಡಳಿ ಕುರಿತ ವಿಪಕ್ಷಗಳ ಪ್ರಶ್ನೆಗಳಿಗೂ ಉತ್ತರ ನೀಡಲೂ ಸಿದ್ಧವಿರುವುದಾಗಿ ತಿಳಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಈ ಕುರಿತು ಪ್ರತಿಕ್ರಿಯಿಸಿ ರಾಜಕೀಯ ಒತ್ತಡದಿಂದಾಗಿ ಅನ್ವರ್‌ ಮಾಣಿಪ್ಪಾಡಿ ಅವರು ಯೂಟರ್ನ್ ತೆಗೆದುಕೊಂಡಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next