ಕೊಪ್ಪಳ: ಮಂಗಳೂರು ಗೋಲಿಬಾರ್ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯ ಮಾಡಿದ್ದು, ನ್ಯಾಯಾಂಗ ತನಿಖೆ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗಲಭೆಯ ಹಿಂದೆ ಯಾರಿದ್ದಾರೆ ಎಂದು ತನಿಖೆ ಮಾಡಲಾಗುತ್ತಿದೆ. ಪೊಲೀಸರ ಮೇಲೆ ಅಲ್ಲಿನ ಸಂಘಟನೆಯವರು ಕಲ್ಲು ತೂರಾಟ ಮಾಡಿದ್ದಾರೆ. ಈ ಕುರಿತು ಕೆಲ ಸಿಸಿ ಟಿವಿ ವಿಡಿಯೋ ದೊರೆತಿವೆ. ಇಲ್ಲಿ ಪೊಲೀಸ್ ಇಲಾಖೆ ತಪ್ಪಿಲ್ಲ. ಗೃಹ ಸಚಿವರು ಈಗಾಗಲೇ ಸದನಲ್ಲಿ ಪ್ರಕರಣದ ಬಗ್ಗೆ ಉತ್ತರ ನೀಡಿದ್ದಾರೆ. ನ್ಯಾಯಾಂಗ ತನಿಖೆಯ ಅಗತ್ಯವಿಲ್ಲ ಎಂದರು.
ಕಾಂಗ್ರೆಸ್ ನಾಯಕರು ಪಿಎಫ್ಐ ಮತ್ತು ಎಸ್ ಡಿಪಿಐ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ. ಈ ಸಂಘಟನೆಯಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಮೇಲೆ ದಾಳಿಗಳಾಗಿವೆ ಎಂದರಲ್ಲದೆ ಸದನದಲ್ಲಿ ನೆರೆ ಹಾನಿಯಾಗಿರುವ ಬಗ್ಗೆ ಚರ್ಚೆ ಮಾಡುವುದನ್ನು ಕೈ ಬಿಟ್ಟು ಕಲಾಪ ಬಹಿಷ್ಕಾರ ಮಾಡಿ ಕಾಲಹರಣ ಮಾಡುತ್ತಿವೆ ಎಂದು ಕೈ ಪಕ್ಷದ ವಿರುದ್ದ ಆರೋಪಿಸಿದರು.
ಹುಬ್ಬಳ್ಲಿಯಲ್ಲಿ ಪಾಕಿಸ್ತಾನದ ಪರ ಘೋಷಣೆ ವಿಚಾರದ ಕುರಿತಂತೆ, ಆ ವಿದ್ಯಾರ್ಥಿಗಳ ಹಿಂದಿರುವವರ ಬಗ್ಗೆ ತನಿಖೆ ನಡೆಯುತ್ತಿದೆ. ಪೊಲೀಸ್ ಇಲಾಖೆ ಅವರನ್ನು ಬಂಧಿಸಿ ಬಿಡುಗಡೆ ಮಾಡಿ ಮತ್ತೆ ಬಂಧಿಸಿದ್ದು ಕೆಲವು ವಿಚಾರಣೆ ಸಂದರ್ಭದಲ್ಲಿ ಈ ರೀತಿ ನಡೆಯುತ್ತವೆ ಎಂದರು.
ಸಿದ್ದರಾಮಯ್ಯ ನ್ಯಾಯಾಂಗ ತನಿಖೆ ಕೇಳ್ತಿದ್ದಾರೆ. ಕಾಂಗ್ರೆಸ್ ಭಯೋತ್ಪಾದಕ ಚಟುವಟಿಕೆಗೆ ಬೆಂಬಲ ನೀಡುವ ಕೆಲಸ ಮಾಡುತ್ತಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕಾಂಗ್ರೆಸ್ ಹೀಗೆ ಮಾಡುತ್ತಿರಬಹುದು ಎಂದರಲ್ಲದೆ, ಕೆಲ ಬಿಜೆಪಿ ಶಾಸಕರು ಜಗದೀಶ ಶೆಟ್ಟರ್ ಮನೆಯಲ್ಲಿ ಸಭೆ ಮಾಡಿರೋದು ಸತ್ಯ. ಆಯಾ ಕ್ಷೇತ್ರದ ಅಭಿವೃದ್ದಿ ಹಾಗೂ ಅನುದಾನದ ಕುರಿತು ಚರ್ಚೆ ನಡೆದಿದೆ. ಬಜೆಟ್ ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಯೋಜನೆ ನೀಡುವ ಬಗ್ಗೆ ಚರ್ಚೆ ಆಗಿದೆ ಎಂದರು.
ಮರಿಯಮ್ಮನಹಳ್ಳಿ ಅಪಘಾತ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಆರ್. ಅಶೋಕ್ ಅವರ ಮಗ ಇಲ್ಲ. ಹೆಚ್ಚಿನ ಮಾಹಿತಿ ನನಗೆ ಗೊತ್ತಿಲ್ಲ ಎಂದರು.