ಮೈಸೂರು: ಸಂಸದ ಬಿ. ಶ್ರೀರಾಮುಲು ಸೋಮವಾರ ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೂರಳ್ಳಿ, ಎಲಚಗೆರೆ, ಕೂಗಲೂರು, ಕಸುವಿನಹಳ್ಳಿ, ಏಚಗುಂಡ್ಲ, ಮಸಗೆ, ಹರತಲೆ, ಅರಿಯೂರು, ಹಾಡ್ಯ, ಹಾಡ್ಯದ ಹುಂಡಿ, ಹೊಸವೀಡು, ಕೊತ್ತನಹಳ್ಳಿ, ಸಿಂಧುವಳ್ಳಿ, ಹುರ ಮುಂತಾದ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಪರ ಪ್ರಚಾರ ನಡೆಸಿದರು.
ಸೂರಳ್ಳಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಈ ಹಿಂದೆ ಹಲವು ಪಕ್ಷಗಳಲ್ಲಿ ಹಂಚಿಹೋಗಿದ್ದ ನಾಯಕ ಜನಾಂಗ ಇದೀಗ ಬಿಜೆಪಿಯಡಿ ಒಂದಾಗಿದ್ದು ಬದಲಾವಣೆಯ ಪರ್ವ ದೆಡೆಗೆ ಮುಖ ಮಾಡಿದೆ, ನಾನು ಈ ಹಿಂದೆ ಬೇರೆ ಪಕ್ಷದಲ್ಲಿದ್ದಾಗ ನಾಯಕ ಸಮುದಾಯ ಆ ಪಕ್ಷಕ್ಕೆ ಬೆಂಬಲ ನೀಡಿತ್ತು. ಆದರೆ ಇದೀಗ ನಾನು ಬಿಜೆಪಿಗೆ ಬಂದಿರುವುದರಿಂದ ನಾಯಕ ಜನಾಂಗದ ಶೇ.80 ರಷ್ಟು ಜನರು ಬಿಜೆಪಿಗೆ ಸೇರಿದ್ದಾರೆ.
ನರೇಂದ್ರ ಮೋದಿ ನಾಯಕತ್ವದಲ್ಲಿ ನಂಬಿಕೆಯಿಟ್ಟು, ಯಡಿಯೂರಪ್ಪರನ್ನು ಬೆಂಬಲಿಸುವ ಉದ್ದೇಶದಿಂದ ಇಂಥ ಬೆಳವಣಿಗೆ ನಡೆದಿದೆ. ನಾಯಕ ಸಮುದಾಯ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಪರಿವರ್ತನೆ ಕಾಣಲು ಮತ್ತು ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲು ಇಂಥ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಮೋದಿ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಪಾಲಿಸುತ್ತಿದ್ದಾರೆ. ಮಹರ್ಷಿ ವಾಲ್ಮೀಕಿ ರಾಮಾಯಣದ ಮೂಲಕ ಇಡೀ ಲೋಕಕ್ಕೆ ಮಾರ್ಗದರ್ಶನ ಮಾಡಿದಂತೆ ಮೋದಿ ದೇಶಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ತಳವಾರ ಮತ್ತು ಪರಿವಾರ ಸಮುದಾಯದವರು ಶೈಕ್ಷಣಿಕ ಸೌಲಭ್ಯಗಳನ್ನು ಪಡೆಯಲು ಅನುಕೂಲ ವಾಗುವಂತೆ ಪ.ಜಾತಿಯ ಪ್ರಮಾಣ ಪತ್ರ ಕೊಡಿಸುವಂತೆ ಬೇಡಿಕೆಯಿದೆ. ಈ ಬೇಡಿಕೆ ಈಡೇರಿಸಲು ತಾವು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಶ್ರಮಿಸುವುದಾಗಿ ತಿಳಿಸಿದ ಶ್ರೀರಾಮುಲು, ಈ ಉಪ ಚುನಾವಣೆಗಳಲ್ಲಿ ಬಿಜೆಪಿ ಅ¸Âರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.