ಬೆಂಗಳೂರು: ವಲಸಿಗ ರಿಂದಲೇ ಬಿಜೆಪಿ ಸರಕಾರ ಬಂದಿದ್ದು, ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಜತೆ ಮಾತನಾಡುವುದಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಗುರುವಾರ ಬೆಂಗಳೂರಿನ ಆರೆಸ್ಸೆಸ್ ಕಚೇರಿಗೆ ಭೇಟಿ ನೀಡಿ, ಮುಖಂಡ ಮುಕುಂದ್ ಅವರನ್ನು ಭೇಟಿ ಮಾಡಿ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ಸಚಿವ ಸಂಪುಟ ರಚನೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ವರಿಷ್ಠರಿಗೆ ಬಿಟ್ಟಿದ್ದು, ವಲಸಿಗರ ವಿಷಯ ಹೊರತುಪಡಿಸಿ ಸಂಪುಟ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದರು.ಮುಖ್ಯಮಂತ್ರಿಯಾಗಿ ಬಸವರಾಜ್‌ಬೊಮ್ಮಾಯಿಯವರು ಮೊದಲ ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಗಣಪತಿ ಹಬ್ಬದ ಬಳಿಕ ಜಿಲ್ಲಾ ಪ್ರವಾಸ :
ಬಹಳ ದಿನಗಳ ಬಳಿಕ ಸಂಘದ ಹಿರಿಯರ ಭೇಟಿ, ಮಾಡಿ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿದ್ದೇನೆ. ಗಣಪತಿ ಹಬ್ಬದ ಬಳಿಕ ಪ್ರತಿ ಜಿಲ್ಲೆಗೆ ಪಕ್ಷ ಸಂಘಟನೆಗಾಗಿ ಭೇಟಿ ನೀಡಿ ಕಾರ್ಯಕರ್ತರ ಜತೆ ಸಭೆ, ಸಮರ್ಥರಿಲ್ಲದ ಕಡೆ ಅಭ್ಯರ್ಥಿಗಳ ಆಯ್ಕೆಗೆ ಆದ್ಯತೆ ನೀಡಲಾಗುವುದು. ರಾಜ್ಯವಿಡೀ ಪ್ರವಾಸ ಮಾಡಿ ಮುಂದಿನ ಚುನಾವಣೆಯಲ್ಲಿ 135-150 ಸ್ಥಾನ ಗೆದ್ದು ಅಧಿಕಾರಕ್ಕೆ ಬರುವ ಸಂಕಲ್ಪ ಹೊಂದಿದ್ದೇನೆ. ನಾಳೆ ಗುಂಡ್ಲುಪೇಟೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ ರವಿ ಕುಟುಂಬಸ್ಥರನ್ನು ಭೇಟಿಯಾಗುತ್ತೇನೆ ಎಂದರು.