Advertisement

ಕಪ್ಪಕ್ಕೆ ಮರುಜೀವ;ಸೀಡಿಯಲ್ಲಿ ಬಿಎಸ್‌ವೈ, ಅನಂತ್‌ಕುಮಾರ್‌ರದ್ದೇ ಧ್ವನಿ

08:31 AM Oct 09, 2017 | Team Udayavani |

ಬೆಂಗಳೂರು: ಹೈಕಮಾಂಡ್‌ಗೆ ಕಪ್ಪ ನೀಡಿರುವ ಕುರಿತಂತೆ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ್‌ ಕುಮಾರ್‌ ನಡುವೆ ಎಂಟು ತಿಂಗಳ ಹಿಂದೆ ನಡೆದಿದ್ದ ಮಾತುಕತೆಯ ಆಡಿಯೋ ಸೀಡಿ ಪ್ರಕರಣಕ್ಕೆ ಮರುಜೀವ ಬಂದಿದೆ.

Advertisement

ಆಡಿಯೋ ಸೀಡಿಯಲ್ಲಿ ಕೇಳಿಬಂದಿರುವ ಮಾತುಗಳು ಅವರಿಬ್ಬರದ್ದೇ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹೇಳಿದೆ. ಇದರಿಂದಾಗಿ ಈ ಪ್ರಕರಣದ ಕುರಿತು ಮತ್ತೆ ರಾಜಕೀಯ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗಿ, ಈ ವಿವಾದ ಚುನಾವಣಾ ಅಸ್ತ್ರವಾಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿವೆ. ಆದಾಯ ತೆರಿಗೆ ದಾಳಿ ವೇಳೆ ಕಾಂಗ್ರೆಸ್‌ ಹೈಕಮಾಂಡ್‌ಗೆ ಕಪ್ಪ ನೀಡಿರುವ ಕುರಿತ ಡೈರಿ ಪತ್ತೆಯಾಗಿರುವ ಬಗ್ಗೆ ಮತ್ತು ಆ ಕುರಿತಂತೆ ಆರೋಪ-ಪ್ರತ್ಯಾರೋಪಗಳ ವಿಚಾರದಲ್ಲಿ ಕಳೆದ ಫೆ. 12ರಂದು ನಡೆದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಅಕ್ಕ-ಪಕ್ಕ ಕುಳಿತಿದ್ದ ಯಡಿಯೂರಪ್ಪ ಮತ್ತು ಅನಂತಕುಮಾರ್‌ ಪರಸ್ಪರ ಮಾತನಾಡುತ್ತಿದ್ದರು. ಇದರ ಆಡಿಯೋ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್‌ ನಾಯಕರು, ತಮ್ಮ ಸರ್ಕಾರವಿದ್ದಾಗ ಬಿಜೆಪಿ ಹೈಕಮಾಂಡ್‌ಗೆ ಹಣ ನೀಡಲಾಗಿತ್ತು ಎಂದು ಸಚಿವ ಅನಂತ್‌ಕುಮಾರ್‌ ಮತ್ತು ಯಡಿಯೂರಪ್ಪ ಹೇಳುತ್ತಿರುವ ಅಂಶ ಈ ಮಾತಿನಲ್ಲಿ ಅಡಕವಾಗಿದೆ ಎಂದು ಆರೋಪಿಸಿದ್ದರು. 

ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಮತ್ತು ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ನೀಡಲಾಗಿತ್ತು. ಈ ಮಧ್ಯೆ, “ಸೀಡಿ’ ಕಟ್‌ ಅಂಡ್‌ ಪೇಸ್ಟ್‌ ಮಾಡಲಾಗಿದೆ. ನಾವು ಮಾಡಿದ ಆರೋಪದ ದಿಕ್ಕು ತಪ್ಪಿಸಲು ಈ ಯತ್ನ ನಡೆದಿದೆ. ನಾವು ಪಕ್ಷದ ಹೈಕಮಾಂಡ್‌ಗೆ ಹಣ ಕೊಟ್ಟ ಬಗ್ಗೆ ಮಾತಾಡಿಲ್ಲ ಎಂದು ಅನಂತಕುಮಾರ್‌ ಮತ್ತು ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು. ತಮ್ಮಲ್ಲಿ ಈಗಾಗಲೇ ದಾಖಲಾದ ದೂರಿಗೆ ಸಂಬಂಧಿಸಿದಂತೆ ಎಫ್ಐಅರ್‌ ದಾಖಲಿಸಿದ್ದ ಸೈಬರ್‌ ಕ್ರೈಂ ಪೊಲೀಸರು, ಬಹಿರಂಗವಾದ ಆಡಿಯೋದಲ್ಲಿದ್ದ ಧ್ವನಿಯ ಸತ್ಯಾಸತ್ಯತೆ ತಿಳಿಯಲು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದೀಗ  ವಿಧಿವಿಜ್ಞಾನ ಪರೀಕ್ಷಾ ಕೇಂದ್ರದ ಅಧಿಕಾರಿ ಶ್ರೀವಿದ್ಯಾ ಅವರು ವರದಿ ನೀಡಿದ್ದು, ಆಡಿಯೋ ಸೀಡಿಯಲ್ಲಿರುವುದು ಯಡಿಯೂರಪ್ಪ ಮತ್ತು ಅನಂತ್‌ಕುಮಾರ್‌ ಅವರದ್ದೇ ಧ್ವನಿ ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಸೈಬರ್‌ ಕ್ರೈಂ ವಿಭಾಗದ ಹಿರಿಯ ಅಧಿಕಾರಿಯೊಬ್ಬರು, ಆಡಿಯೋ ಸೀಡಿಯಲ್ಲಿರುವುದು
ಯಡಿಯೂರಪ್ಪ ಮತ್ತು ಅನಂತ್‌ಕುಮಾರ್‌ ಅವರ ಧ್ವನಿ ಎಂದು ಖಚಿತ ಪಡಿಸಿದ್ದಾರೆ. ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ
ತರಲಾಗುತ್ತದೆ. ಮುಂದಿನ ನಿರ್ಧಾರವನ್ನು ಅವರೇ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಪ್ರಕರಣದ ಕುರಿತಂತೆ ಎಸಿಬಿ ತನಿಖೆ ಕುರಿತು ಪ್ರತಿಕ್ರಿಯಿಸಿದ ಸೈಬರ್‌ ಕ್ರೈಂ ವಿಭಾಗದ ಅಧಿಕಾರಿಗಳು, ಈ ಕುರಿತು ನಾವೇನೂ ಹೇಳಲು ಸಾಧ್ಯವಿಲ್ಲ. ಮೇಲಧಿಕಾರಿಗಳು ನಿರ್ಧಾರ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಆಡಿಯೋ ಸೀಡಿಯಲ್ಲಿ ಇರುವ ಸಂಭಾಷಣೆ ಏನು?
ಅನಂತಕುಮಾರ್‌: ನೀವು ಇದ್ದಾಗ ಕೊಟ್ಟಿದ್ದೀರಿ. ನೀವು ಇದ್ದಾಗ ಕೇಂದ್ರಕ್ಕೆ ಕೊಟ್ಟಿದ್ದೀರಿ. ನಾನೂ ಕೊಟ್ಟಿದೀನಿ. ನಾನು ಕೊಟ್ಟಿಲ್ಲಾ ಅಂತ ಎಲ್ಲಿ ಹೇಳ್ತಿದ್ದೀನಿ. ಆದರೆ, ಸಾವಿರ ಕೋಟಿ ಕೊಟ್ಟಿಲ್ಲಾಂತಾರಲ್ಲಾ… ಎಷ್ಟು ಕೊಟ್ಟಿದ್ದೀನಿ ಅಂತ ಯಾರೋ ಹೇಳಿಬಿಡ್ತಾರಾ? ಅಂದ್ರೆ, ಕೊಟ್ಟಿರೋದನ್ನು ಒಪ್ಕೊಂಡಂಗಾಯ್ತಲ್ಲ?
ಯಡಿಯೂರಪ್ಪ: ಕೊಟ್ಟಿರ್ತಾರೆ… ಬರ್ಕೊಂಡು ಇಟ್ಟುಕೊಳ್ತಾರಾ?
ಅನಂತಕುಮಾರ್‌: ಹರಳು ಬೀಸಿದ್ರೆ ಹತ್ಕೊಳ್ಳತ್ತೆ. ಸಾವಿರ ಕೋಟಿ ಕೊಟ್ಟಿಲ್ಲಾಂತ ಯಾವನೂ ಒಪ್ಕೊಳ್ಳೋಲ್ಲ. ಕೊಟ್ಟಿದ್ದಾನೆ ಅಂತಾನೇ ತಿಳ್ಕೊತಾರೆ. 
ಯಡಿಯೂರಪ್ಪ: ಡೈರಿ ಆಚೆ ಬರಲಿ ಇರಿ..
ಅನಂತಕುಮಾರ್‌: ಎಲೆಕ್ಷನ್‌ ತನಕಾ ಉತ್ತರಾ ಕೊಡ್ತಾ ತಿರ್‌ಗ್‌ಬೇಕಾಗತ್ತೆ. ತಿರ್‌ಗ್ಲಿ

Advertisement
Advertisement

Udayavani is now on Telegram. Click here to join our channel and stay updated with the latest news.

Next