Advertisement

ಬಡವರ ದನಿಯಾಗಿದ್ದ ಬಿ.ಎಂ.ಪಾಟೀಲ: ದೇವೇಗೌಡ ಬಣ್ಣನೆ

03:30 PM Jul 28, 2017 | |

ವಿಜಯಪುರ: ನಾಲ್ಕು ದಶಕಗಳ ಹಿಂದೆ ನನ್ನ ರಾಜಕೀಯ ಒಡನಾಡಿಗಳಲ್ಲಿ ಪ್ರಮುಖರಾಗಿದ್ದ ಮಾಜಿ ಸಚಿವ ದಿ| ಬಿ.ಎಂ. ಪಾಟೀಲ ಬಡವರ ಧ್ವನಿಯಾಗಿದ್ದರು. ಅವರು ಹಾಗೂ ನನ್ನ ಮಧ್ಯೆ ಕೆಲ ವಿಷಯದಲ್ಲಿ ತಾತ್ವಿಕ ಭಿನ್ನತೆ ಇದ್ದರೂ ನಮ್ಮಿಬ್ಬರ ಮಧ್ಯೆ ರಾಜಕಾರಣ ಮೀರಿದ ರಾಜಕೀಯ ಸಂಬಂಧ ಇತ್ತು ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಬಣ್ಣಿಸಿದರು. 

Advertisement

ನಗರದ ಬಿಎಲ್‌ಡಿಇ ವೈದ್ಯಕೀಯ ವಿವಿಯ ಗ್ರಂಥಾಲಯ ಸಭಾಂಗಣದಲ್ಲಿ ಚಿಂತನ-ಸಾಂಸ್ಕೃತಿಕ ಬಳಗದಿಂದ ಗುರುವಾರ ಏರ್ಪಡಿಸಲಾಗಿದ್ದ ಜ್ಞಾನದಾಸೋಹಿ ಶ್ರೀ ಬಂಥನಾಳ ಶಿವಯೋಗಿಗಳು, ದಾನ ಚಿಂತಾಮಣಿ ಬಂಗಾರೆಮ್ಮ ಸಜ್ಜನ, ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಹಾಗೂ ಮಾಜಿ ಸಚಿವ ದಿ| ಬಿ.ಎಂ. ಪಾಟೀಲ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿಅವರು ಪ್ರಧಾನ ಭಾಷಣ ಮಾಡಿದರು. ದಿ| ಬಿ.ಎಂ. ಪಾಟೀಲ ವಿಜಯಪುರ ಜಿಲ್ಲೆಯ ಮಟ್ಟಿಗೆ ಅಭಿವೃದ್ಧಿ ಹರಿಕಾರ ಎನಿಸಿದ್ದರು. ಇದೀಗ ಅವರ ಮಗ ಜಲಸಂಪನ್ಮೂಲ ಸಚಿವನಾಗಿ ಜಿಲ್ಲೆಯಲ್ಲಿ ಕೆರೆ ತುಂಬಿಸುವ 
ಮಹತ್ವದ ಕಾರ್ಯ ಮಾಡುವ ಮೂಲಕ ತಂದೆ ಕನಸು ನನಸಾಗಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. 

ದಿ| ಬಿ.ಎಂ. ಪಾಟೀಲ ಅವರು ವಿಜಯಪುರ ಜಿಲ್ಲೆಗೆ ನೀರಾವರಿ ಯೋಜನೆ ರೂಪಿಸುವ ಮಹತ್ವಾಕಾಂಕ್ಷೆ ಹೊಂದಿದ್ದರು. ಇದೇ ಕಾರಣಕ್ಕೆ ನಾನು ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ಈ ಭಾಗದ ಸಮಸ್ಯೆಗಳ ಕುರಿತು ನನಗೆ ಮನವರಿಕೆ ಮಾಡಿಕೊಟ್ಟರು. ಈ ಜಿಲ್ಲೆಗೆ ಭೇಟಿ ನೀಡಿದಾಗ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಪದೇ ಪದೇ ಚರ್ಚಿಸುತ್ತಿದ್ದರು. ಅವರೊಂದಿಗೆ ನಾನು ಕಳೆದ ಕ್ಷಣಗಳು ಇಂದಿಗೂ ಕಣ್ಮುಂದಿವೆ ಎಂದು ಸ್ಮರಿಸಿದರು.

ನಾನು ಮತ್ತು ಅವರು ಪಕ್ಷ ಕಟ್ಟುವ ಸಂದರ್ಭದಲ್ಲಿ, ಸಚಿವನಾಗಿದ್ದ ಸಂದರ್ಭದಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡಿದ ನೆನಪು ಹಸಿರಾಗಿದೆ. ಅವರು ಪಕ್ಷ ಬಿಡುವ ಸಂದರ್ಭ ಬಂದಾಗ ನಾವು ಒಟ್ಟಿಗೆ ಬೆಂಗಳೂರಿನಲ್ಲಿ ಕುಳಿತು ಊಟ ಮಾಡಿದ್ದೆವು. ಪಕ್ಷ ಬಿಟ್ಟರೂ ಸಹ ನಮ್ಮ ರಾಜಕೀಯದ ಆಚೆಗಿನ ಬಾಂಧವ್ಯಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಅದರ ಪರಿಣಾಮವೇ ಇಂದು ಅವರ ಸ್ಮರಣಾ ಕಾರ್ಯಕ್ರಮದಲ್ಲಿ ಸಂತಸದಿಂದ ಪಾಲ್ಗೊಂಡು ನನ್ನ ಅನುಭವ  ಹಂಚಿಕೊಂಡಿದ್ದೇನೆ ಎಂದರು.

ಈ ಭಾಗದಲ್ಲಿ ಧಾರ್ಮಿಕ, ಶೈಕ್ಷಣಿಕ ಕ್ರಾಂತಿ ಮಾಡಿದ ಬಂಥನಾಳ ಶ್ರೀಗಳು, ಬಸವಾದಿ ಶರಣದ ವಚನ ಸಾಹಿತ್ಯ ಸಂರಕ್ಷಣೆಗೆ ಬದುಕನ್ನೇ ಮುಡಿಪಾಗಿಟ್ಟ ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ, ಸಮಾಜಕ್ಕೆ ಶಿಕ್ಷಣದ ಬೀಜ ಬಿತ್ತಲು ಅಮೂಲ್ಯ ಆಸ್ತಿಯನ್ನೇ ಧಾರೆ ಎರೆದ ದಾನಚಿಂತಾಮಣಿ
ಬಂಗಾರೆಮ್ಮ ಸಜ್ಜನ, ಮಾಜಿ ಸಚಿವ ಬಿ.ಎಂ. ಪಾಟೀಲ ಅವರ ಸರಳ ವ್ಯಕ್ತಿತ್ವದ ಪರಿಶುಭ್ರ ರಾಜಕೀಯ ಇಂದಿನ ನಮಗೆಲ್ಲ ಆದರ್ಶ ಎಂದು ಹೇಳಿದರು. ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಜಲಸಂಪನ್ಮೂಲ ಸಚಿವ ಹಾಗೂ ಬಿಎಲ್‌ಡಿಇ ಸಂಸ್ಥೆ ಅಧ್ಯಕ್ಷ ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಿಎಲ್‌ಡಿಇ ಸಂಸ್ಥೆ ಉಪಾಧ್ಯಕ್ಷ ಬಿ.ಆರ್‌. ಪಾಟೀಲ ಲಿಂಗದಳ್ಳಿ ಇದ್ದರು.  ಕಲಾವಿದ ಬಸವರಾಜ ಹಿರೇಮಠ ಪ್ರಾರ್ಥಿಸಿದರು. ಡಾ| ವಿ.ಡಿ. ಐಹೊಳ್ಳಿ ನಿರೂಪಿಸಿದರು.

Advertisement

ಸಮಾಜಮುಖೀ ಮಹಾತ್ಮರನ್ನು ಸ್ಮರಿಸುವುದೇ ಧರ್ಮ  
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸಮಾಜಮುಖೀ ಸೇವಾ ಕಾರ್ಯ ಮಾಡುವ ವ್ಯಕ್ತಿಗಳು ಸಮಾಜದಿಂದ ಸದಾ ಸ್ಮರಣಾರ್ಹರಾಗಿರುತ್ತಾರೆ. ಉತ್ತಮ ಕೆಲಸ ಮಾಡಿದ ಮಹಾತ್ಮರನ್ನು ಸ್ಮರಿಸುವ ಮೂಲಕ ನಾವು 
ಸಂತೋಷಪಡುವುದೇ ಧರ್ಮ ಎಂದು ಹೇಳಿದರು.

ಶಿವಯೋಗದ ಸೌರಭವನ್ನು ಬಂಥನಾಳ ಶಿವಯೋಗಿಗಳು ಪಸರಿಸಿದರೆ, ದಾನ ಚಿಂತಾಮಣಿ ಬಂಗಾರೆಮ್ಮ ಸಜ್ಜನ ಜ್ಞಾನ ಪ್ರಸಾರಕ್ಕಾಗಿ ಶಿಕ್ಷಣ ಸಂಸ್ಥೆಗೆ ಆಸ್ತಿಯನ್ನೇ ದಾನವಾಗಿ ನೀಡಿದರು. ನುಡಿದಂತೆ ನಡೆದ ಶರಣರ ವಚನ ಸಾಹಿತ್ಯ ಸಂಗ್ರಹಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಡಾ| ಫ.ಗು.
ಹಳಕಟ್ಟಿ ಅವರು ವಚನ ಪಿತಾಮಹ ಎಂದು ಕರೆಸಿಕೊಂಡು ತಾವುಕೂಡ ಶರಣರಾದರು. ರಾಜಕೀಯ ಜೀವನದಲ್ಲಿ ಪರಿಶುದ್ಧ ಜೀವನ ನಡೆಸಿದ ದಿ| ಬಿ.ಎಂ.ಪಾಟೀಲ ಅವರು ಮಹಾತ್ಮರ ಸಾಲಿಗೆ ಸೇರಿದರು ಎಂದು ವಿಶ್ಲೇಷಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next