Advertisement
ಉಡುಪಿ: ಪರ್ಕಳ ಪರಿಸರದ ಅಗ್ರಹಾರದ ದೇವಸ್ಥಾನದ ಚಾವಡಿಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗಾಗಿ ಜರ್ಮನಿ ಮಿಷನರಿಗಳಿಂದ ಸ್ಥಾಪಿತ ಪರ್ಕಳ ಬಾಸೆಲ್ ಮಿಶನ್ ಹಿ.ಪ್ರಾಥಮಿಕ ಕನ್ನಡ ಶಾಲೆಗೆ 116 ವರ್ಷದ ಸಂಭ್ರಮ.
ಬೆಳ್ಳಂಪಳ್ಳಿ, ಪರ್ಕಳ, ಕಬ್ಯಾಡಿ, ಸಣ್ಣಕ್ಕಿಬೆಟ್ಟು, ಶೆಟ್ಟಿಬೆಟ್ಟು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಶೇ. 98ರಷ್ಟು ಮಂದಿ ಈ ಶಾಲೆಯ ಹಳೆ ವಿದ್ಯಾರ್ಥಿಗಳೇ ಆಗಿದ್ದಾರೆ. 1925ರ ಸಂದರ್ಭದಲ್ಲಿ ಸುಮಾರು 1,000 ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು. ಈ ಶಾಲೆಯ ಹಳೆ ವಿದ್ಯಾರ್ಥಿಗಳಾದ ಡಾ| ವಿ. ಸುರೇಂದ್ರ ಶೆಟ್ಟಿ, ಪ್ರೊ| ವೈಸ್ ಚಾನ್ಸಲರ್ ಮಾಹೆ ಯೂನಿವರ್ಸಿಟಿ ಮಣಿಪಾಲ ಹಾಗೂ ಡಾ| ಜಗದೀಶ್ ಶೆಟ್ಟಿಗಾರ್ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಕೇಂದ್ರ ಆರ್ಥಿಕ ತಜ್ಞರಾಗಿ ಸೇವೆಸಲ್ಲಿಸಿದ್ದರು.
Related Articles
ಜರ್ಮನಿ ಮಿಷನರಿಗಳು ಆರ್ಥಿಕ ಕಾರಣದಿಂದ 1952ರಲ್ಲಿ ಪರ್ಕಳದ ಶಾಲೆಯನ್ನು ಮುಚ್ಚಲು ಮುಂದಾಗಿದ್ದರು. ಈ ಸಂದರ್ಭ ಮಿಷನರಿ ರೆ| ರೊಸೆಲ್ ಜಾಕೋಬ್ ಅವರು ಅಂದಿನ ಮುಖ್ಯ ಶಿಕ್ಷಕರಾಗಿದ್ದ ರಾಜೀವ ಕೋಟ್ಯಾನ್ ಅವರಿಗೆ ಶಾಲೆಯನ್ನು ಹಸ್ತಾಂತರಿಸಿದರು. 1965ರಲ್ಲಿ ಶಾಲೆಯ ಆಡಳಿತ ಮಂಡಳಿ , ಊರಿನವರ ಸಹಕಾರದಿಂದ ಶಾಲೆಗೆ ಹೊಸ ಕಟ್ಟಡ ನಿರ್ಮಿಸಿ ಶಾಲೆಗೆ ಬಾಸೆಲ್ ಮಿಶನ್ ಹಿ.ಪ್ರಾ. ಶಾಲೆಯೆಂದು ಮರುನಾಮಕರಣ ಮಾಡಲಾಯಿತು. ಕಳೆದ 67 ವರ್ಷದಿಂದ ರಾಜೀವ ಕೋಟ್ಯಾನ್ ಅವರ ಕುಟುಂಬ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಪ್ರಸ್ತುತ ಶಾಲೆಯಲ್ಲಿ ಸುಮಾರು 120 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಸರಕಾರದ 2 ಶಿಕ್ಷಕರು ಹಾಗೂ ಗೌರವ ಶಿಕ್ಷಕರಾಗಿ 5 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ.
Advertisement
ಮಣಿಪಾಲದ ಹೃದಯ ಭಾಗದಲ್ಲಿರುವ ಪರ್ಕಳ ಬಿಎಂ ಹಿ.ಪ್ರಾ.ಶಾಲೆ ನಾನು ಸೇರಿದಂತೆ ಸುತ್ತಮುತ್ತಲ್ಲಿನ ಪ್ರದೇಶ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ನನ್ನ ತಂದೆ ರಾಜೀವ ಕೋಟ್ಯಾನ್ ಅವರ “ಎಲ್ಲರಿಗೂ ಶಿಕ್ಷಣ’ ನೀಡಬೇಕು ಎನ್ನುವ ಕನಸು ನನಸು ಮಾಡುವ ಪ್ರಯತ್ನದಲ್ಲಿ ಇದ್ದೇನೆ. ಇದಕ್ಕೆ ಪೂರಕವಾಗಿ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಸಹಾಯ ಮಾಡುತ್ತಿದ್ದಾರೆ.-ವಿನಯ ಸರೋಜ ಕುಮಾರಿ,
ಹಳೆವಿದ್ಯಾರ್ಥಿ ಹಾಗೂ ಬಿಎಂಶಾಲೆ ಆಡಳಿತ ಮಂಡಳಿ ಅಧ್ಯಕ್ಷೆ ಪರ್ಕಳ ಬಿಎಂ ಹಿ.ಪ್ರಾ.ಶಾಲೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿದೆ. ಅವರೆಲ್ಲರೂ ಇಂದು ಸಮಾಜದ ವಿವಿಧ ಸ್ತರಗಳಲ್ಲಿ ಉನ್ನತ ಸ್ಥಾನದಲ್ಲಿ ಇದ್ದಾರೆ.
-ಹರೀಶ್ ಶೇರಿಗಾರ್, ಮುಖ್ಯೋಪಾಧ್ಯಾಯ ಬಿಎಂಶಾಲೆ, ಪರ್ಕಳ -ತೃಪ್ತಿ ಕುಮ್ರಗೋಡು