ಬಂಟ್ವಾಳ: ಆಂಗ್ಲಭಾಷಾ ತರಬೇತಿ ಕಾರ್ಯಕ್ರಮ ಆಧುನಿಕ ಕಾಲದಲ್ಲಿ ಅವಶ್ಯವಾಗಿದೆ. ಆಂಗ್ಲ ಭಾಷೆಯ ಬಳಕೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಸಾರ್ವಜನಿಕರ ಜತೆ ಸಂಪರ್ಕ, ಉನ್ನತ ಮಟ್ಟದಲ್ಲಿ ಸಂಭಾಷಣೆ ಸುಲಭವಾಗುವುದು. 21ನೇ ಶತಮಾನದಲ್ಲಿ ವಿಶ್ವದ ಬಹುತೇಕ ದೇಶಗಳು ಆಂಗ್ಲ ಭಾಷೆಯನ್ನು ಬಳಕೆ ಮಾಡುತ್ತಿದ್ದು ನಮ್ಮ ವಿದ್ಯಾರ್ಥಿಗಳು ಅವರ ಜತೆಗೆ ಪೈಪೋಟಿ ನೀಡಬೇಕಾದರೆ ಆಂಗ್ಲ ಭಾಷಾ ಜ್ಞಾನ, ಸಂಭಾಷಣೆ ಅವಶ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಆ. 6ರಂದು ಬಿ. ಮೂಡ ಪ.ಪೂ. ಕಾಲೇಜಿನಲ್ಲಿ ಇಲಾಖೆಯ ಮೂಲಕ ಹಮ್ಮಿಕೊಂಡ ಆಂಗ್ಲ ಭಾಷಾ ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ಆಂಗ್ಲ ಭಾಷಾ ವ್ಯಾಕರಣ, ಮಾತನಾಡುವ ಕೌಶಲ ಉತ್ತಮಗೊಳಿಸುವ ಉದ್ದೇಶದಿಂದ ಇಂತಹ ತರಬೇತಿ ಉತ್ತಮ ವಾದುದು. ಪ.ಪೂ. ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮ ಹಾಕಿಕೊಂಡಿದೆ. ವಿದ್ಯಾರ್ಥಿಗಳು ಮುಂದಿನ ದಿನದಲ್ಲಿ ಪರೀಕ್ಷೆ ಧೈರ್ಯದಿಂದ ಎದುರಿಸಿ ಉತ್ತಮ ಫಲಿತಾಂಶ ಪಡೆಯಲು ಇದು ಸಹಕಾರಿ ಎಂದರು.
ತರಬೇತಿ ಕೇಂದ್ರ ನೋಡಲ್ ಅಧಿಕಾರಿ ಸರಸ್ವತಿ ಮಾತನಾಡಿ ಸರಕಾರದ ಸೂಚನೆಯಂತೆ ತರಬೇತಿ ಕಾರ್ಯಕ್ರಮ ಪ್ರತಿ ಭಾನುವಾರ ಆಯೋಜಿಸಿದೆ. ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಹಿತದೃಷ್ಟಿಯಿಂದ ಇನ್ನೆರಡು ಕಾಲೇಜುಗಳಲ್ಲಿ ತರಬೇತಿ ಕೇಂದ್ರಗಳನ್ನು ಆಯೋಜಿಸ ಬೇಕು ಎಂದವರು ಸಚಿವರಲ್ಲಿ ಮನವಿ ಮಾಡಿದರು.
ಪುರಸಭಾ ಸದಸ್ಯ ಜಗದೀಶ ಕುಂದರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸುಧಾಕರ ಮಡಿವಾಳ, ಇಂದಿರಾ ಚಂದಪ್ಪ, ಉಮೇಶ್ ಬೋಳಂತೂರು ಮತ್ತಿತರರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ನಿವೃತ್ತ ಬ್ಯಾಂಕ್ ಅಧಿಕಾರಿ ಚಂದ್ರಶೇಖರ ರಾವ್ ಅವರನ್ನು ಸಮ್ಮಾನಿಸಲಾಯಿತು.
ತರಬೇತಿ ಸಂಯೋಜಕ ದಾಮೋದರ ಇ. ವಂದಿಸಿದರು. ಉಪನ್ಯಾಸಕ ಅಬ್ದುಲ್ ರಜಾಕ್ ಸ್ವಾಗತಿಸಿ, ನಿರ್ವಹಿಸಿದರು.