Advertisement

ಶಿಕ್ಷಕರ ನೇಮಕಾತಿಗೆ ಸಿಇಟಿ ಪರೀಕ್ಷೆ: ಸಚಿವ ನಾಗೇಶ್‌

07:39 PM Nov 03, 2021 | Team Udayavani |

ಸುಬ್ರಹ್ಮಣ್ಯ : ಕಳೆದ ಎರಡು ವರ್ಷ ಕೋವಿಡ್‌ನಿಂದಾಗಿ ಶಿಕ್ಷಕರ ನೇಮಕಾತಿ ಆಗದ ಕಾರಣ ರಾಜ್ಯಾದ್ಯಂತ ಶಿಕ್ಷಕರ ಕೊರತೆ ತಲೆದೋರಿದೆ. ಈ ಹಿಂದೆ ಸುಮಾರು 10 ಸಾವಿರ ಶಿಕ್ಷಕರ ನೇಮಕಾತಿಗಾಗಿ ಟಿಇಟಿ ಮತ್ತು ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಕೇವಲ 3 ಸಾವಿರ ಮಂದಿ ಮಾತ್ರ ತೇರ್ಗಡೆ ಹೊಂದಿದ್ದರು. ಈ ಕಾರಣದಿಂದ ತತ್‌ಕ್ಷಣವೇ ಮತ್ತೆ 5 ಸಾವಿರ ಶಿಕ್ಷಕರ ನೇಮಕಾತಿ ಮಾಡಲು ಸಿಇಟಿ ಪರೀಕ್ಷೆ ನಡೆಸಿ ಶಿಕ್ಷಕರ ಆಯ್ಕೆ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

Advertisement

ಸುಬ್ರಹ್ಮಣ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಅಭ್ಯುದಯಕ್ಕೆ ಪೂರಕವಾಗಿದ್ದು ಮುಂದಿನ 2022-2023ರ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ, 3ನೇ ತರಗತಿ ಮತ್ತು 9 ನೇ ತರಗತಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆರಂಭದಲ್ಲಿ ಅನುಷ್ಠಾನಗೊಳಿಲಾಗುವುದು ಎಂದರು.

ಕೋವಿಡ್‌-19ನ ನಂತರ ಶಾಲೆಗಳು ಆರಂಭವಾಗಿದ್ದು ವಿದ್ಯಾರ್ಥಿಗಳು ಬಹಳ ಸಂತೋಷ ಮತ್ತು ಲವಲವಿಕೆಯಿಂದ ಶಾಲೆಗೆ ಬರುತ್ತಿದ್ದಾರೆ. ರಾಜ್ಯದ ಅನೇಕ ಶಾಲೆಗಳಲ್ಲಿ 100ಕ್ಕೆ ಶೇಕಡಾ 100ರಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ಸರಕಾರಿ ಶಾಲೆಯತ್ತ ಮಕ್ಕಳು
ಕೊರೊನಾ ಅನಂತರ ಮಕ್ಕಳು ಖಾಸಗಿ ಶಾಲೆಗಳಿಂದ ಸರಕಾರಿ ಶಾಲೆಗಳತ್ತ ಹೆಜ್ಜೆ ಇಡುತ್ತಿದ್ದಾರೆ. ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳಲ್ಲಿ ಮಕ್ಕಳ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಇದೀಗ ಅನುದಾನಿತ ಶಾಲೆಗಳಲ್ಲಿ ಹೆಚ್ಚಿನ ಮಕ್ಕಳು ಸೇರ್ಪಡೆಯಾಗುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.

ಇದನ್ನೂ ಓದಿ : ಪಾದಚಾರಿ ಮತ್ತು ಟ್ರಾಕ್ಟರ್ ಗೆ ಬೈಕ್ ಸವಾರ ಢಿಕ್ಕಿ: ಸ್ಥಳದಲ್ಲೇ ಸಾವು

Advertisement

ಪಠ್ಯಗಳಲ್ಲಿ ಕಡಿತವಿಲ್ಲ
ಈ ವರ್ಷ ಪಠ್ಯಗಳನ್ನು ಕಡಿತಗೊಳಿಸುವ ಯಾವುದೇ ನಿರ್ಧಾರಗಳಿಲ್ಲ. ಪಠ್ಯ ಕಡಿತಗೊಳಿಸಿದರೆ ಮುಂದಿನ ವರ್ಷದ ಶಿಕ್ಷಣದ ಮೇಲೆ ತೀವ್ರವಾದ ಪರಿಣಾಮ ಬೀರುವ ಕಾರಣ ಈ ನಿರ್ಧಾರ ಮಾಡಲಾಗಿದೆ. ಉಪನ್ಯಾಸಕರು ಮತ್ತು ಶಿಕ್ಷಕರು ಈ ಬಾರಿ ವಿಶೇಷ ತರಗತಿಗಳನ್ನು ಮಾಡುವ ಮೂಲಕ ಪಠ್ಯವಸ್ತುಗಳನ್ನು ನಿಗದಿತ ಸಮಯದೊಳಗೆ ಮುಗಿಸುವಲ್ಲಿ ಶ್ರಮ ವಹಿಸಲಿದ್ದಾರೆ ಎಂದರು.

ಬಿಸಿಯೂಟ ಸೇರಿದಂತೆ ಮಕ್ಕಳಿಗೆ ದೊರಕಬೇಕಾದ ಸೌಲಭ್ಯಗಳನ್ನು ಆರಂಭಿಸಲಾಗಿದೆ. ಮುಂದೆ ಶಾಲೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗುವುದು. ಮಕ್ಕಳಿಗೆ ಕೋವಿಡ್‌-19 ವ್ಯಾಕ್ಸಿನ್‌ ನೀಡಲು ಪರೀಕ್ಷೆಗಳು ನಡೆಯುತ್ತಿವೆ. ವ್ಯವಸ್ಥಿತ ಪರೀಕ್ಷೆಗಳ ನಂತರ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್‌ ಅನ್ನು ನೀಡಲಾಗುವುದು ಎಂದರು.
ಈ ಸಂದರ್ಭ ಮೀನುಗಾರಿಕೆ ಸಚಿವ ಎಸ್‌.ಅಂಗಾರ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next