Advertisement

ಭತ್ತದ ಕೃಷಿಯಲ್ಲಿ ಅಜೋಲಾ

10:46 PM Sep 21, 2019 | mahesh |

ಏಕರೂಪದ ಬೆಳೆ ಪದ್ಧತಿಯಿಂದಾಗಿ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಬಹುತೇಕ ಭತ್ತ ಬೆಳೆಯುವ ಪ್ರದೇಶದ ಮಣ್ಣು ಹಾಳಾಗಿದೆ. ಇದರ ಪುನಃಶ್ಚೇತನಕ್ಕಾಗಿ ರೈತರು ಹೆಚ್ಚು ಸಾವಯವ ಪದಾರ್ಥ ಬಳಸುವುದು ಅನಿವಾರ್ಯ. ಬೇರೆಲ್ಲಾ ಸಾವಯವ ಪದಾರ್ಥಗಳಿಗೆ ಹೋಲಿಸಿದಲ್ಲಿ ಭತ್ತದ ಗದ್ದೆಯಲ್ಲಿ ಉತ್ತಮವಾಗಿ ಬೆಳೆಯಬಲ್ಲ ಸ್ಥಿರೀಕರಿಸುವ ಶಕ್ತಿ ಹೊಂದಿರುವ ಅಜೋಲಾ ಬೆಳೆಸಿದರೆ ಉತ್ತಮ.

Advertisement

ಅಜೋಲಾ ನೀರಿನ ಮೇಲೆ ಬೆಳೆಯಬಲ್ಲ ಝರಿ ಸಸ್ಯ. ಇದರ ಕಾಂಡ ಮತ್ತು ಎಲೆಗಳು ಚಿಕ್ಕದಾಗಿದ್ದು ಒಂದರ ಮೇಲೊಂದು ಹೊಂದಿಸಿ ಕೊಂಡಂತಿರುತ್ತದೆ. ಈ ಸಸ್ಯ ಎಂಬ ನೀಲಿ ಹಸಿರು ಪಾಚಿಯು ವಾಯು ಮಂಡಲದಲ್ಲಿರುವ ಸಾರಜನಕವನ್ನು ಹೀರಿ ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿದೆ. ಇದರ ಬೆಳವಣಿಗೆಗೆ ಬಿಸಿಲೂ ಅಗತ್ಯ. ಫ‌ಲವತ್ತಾದ ಮಣ್ಣು, ಹರಿಯುವ ನೀರಿನಲ್ಲಿ ಇದು ಹುಲುಸಾಗಿ ಬೆಳೆಯುತ್ತದೆ. ಇದನ್ನು ಭತ್ತದ ಗದ್ದೆಯಲ್ಲಿ ಬೆಳೆಯುವುದರಿಂದ ಭತ್ತಕ್ಕೆ ಸಾಕಷ್ಟು ಹಸಿರೆಲೆ ಗೊಬ್ಬರ ದೊರೆಯುವುದಲ್ಲದೆ ಬೆಳೆಗೆ ಅಗತ್ಯ ಪೋಷ ಕಾಂಶವೂ ದೊರೆಯುತ್ತದೆ ಹಾಗೂ ಕಳೆ ನಿಯಂತ್ರಿಸಲೂ ಸಹಕಾರಿ.

ತಳಿಗಳು: ರಾಜ್ಯದಲ್ಲಿ ಪಿನ್ನಾಟ ಹಾಗೂ ಅಜೋಲಾ ಮೈಕ್ರೋಫಿಲ್ಲಾ ಎಂಬ ತಳಿಗಳನ್ನು ಮಲೆನಾಡಿನಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಾರೆ. ಈ ತಳಿಗಳ ಜತೆ ಸಹಜೀವನ ನಡೆಸುತ್ತಿರುವ ನೀಲಿ ಹಸಿರು ಪಾಚಿಗಳೆಂದರೆ ಅನಾಬಿನಾ, ನಾಸ್ಟಾಕ್‌, ಫ್ಲೆಕೋನಿಮಾ, ಅಸಿಲೇಟೋರಿಯಾ ಇತ್ಯಾದಿ.

ಬೆಳೆಸುವ ಕ್ರಮ
ಸಣ್ಣ ಮಡಿಯಲ್ಲಿ ಬೆಳೆಸುವುದು: ಗದ್ದೆಯಲ್ಲಿ ಬೆಳೆಸುವ ಮೊದಲು ಸಣ್ಣ ಮಡಿಯಲ್ಲಿ ಇದನ್ನು ಬೆಳೆಸಬೇಕು. ಒಂದು ಎಕರೆ ಪ್ರದೇಶಕ್ಕೆ ಬಿತ್ತನೆಯಾಗಿ ಬೆಳೆಸಲು 40 ಚದರಡಿ ಗಾತ್ರದ 3-4 ಮಡಿಗಳು ಅಗತ್ಯ. ಇದನ್ನು ಬೆಳೆಸುವುದಕ್ಕೆ ಮೊದಲು 40 ಚದರಡಿ ಪ್ರದೇಶಕ್ಕೆ 0.5 ಕಿ.ಗ್ರಾಂ ಸೂಪರ್‌ ಪಾಸ್ಪೇಟ್‌, 0.5 ಕಿ.ಗ್ರಾಂ ಬೂದಿ, 120 ಗ್ರಾಂ ಪೊಟ್ಯಾಶಿಯಂ ಸಲ್ಫೆàಟ್‌, 40 ಗ್ರಾಂ ಸೋಡಿಯಂ ಮಾಲಿಬ್ಡೆಟ್‌ ಮಣ್ಣಿನಲ್ಲಿ ಸೇರಿಸಿ 2-3 ಇಂಚು ನೀರು ನಿಲ್ಲಿಸಬೇಕು. ಇದರ ಬದಲಾಗಿ 24 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರ, 400 ಗ್ರಾಂ ಸೂಪರ್‌ ಪಾಸೆ#àಟ್‌ನ್ನು ಬಳಸಬಹುದು. ಅನಂತರ 8 ಕಿ.ಗ್ರಾಂ ಅಜೋಲಾ ಸಸ್ಯವನ್ನು ಈ ಪ್ರದೇಶದಲ್ಲಿ ಹರಡಿ ನೀರಿನ ಎತ್ತರ 2-3 ಅಂಗುಲಗಳಿಗಿಂತ ಕಡಿಮೆಯಾಗದಂತೆ ಎಚ್ಚರವಹಿಸಬೇಕು. ಅನಂತರ ಎರಡು ವಾರಗಳಲ್ಲಿ 8 ಕಿ.ಗ್ರಾಂ ಅಜೋಲಾ ಸುಮಾರು 120 ಕಿ.ಗ್ರಾಂಗಳಷ್ಟಾಗುತ್ತವೆ.

ಗದ್ದೆಯಲ್ಲಿ ಬೆಳೆಸುವ ಕ್ರಮ: ನಾಟಿ ಮಾಡಿದ ಸುಮಾರು 20 ದಿನಗಳ ಮೊದಲು ಎಕರೆಗೆ 30 ಕಿ.ಗ್ರಾಂ ಸೂಪರ್‌ ಪಾಸ್ಪೇಟ್‌, 20 ಕಿ.ಗ್ರಾಂ ಬೂದಿ, 4 ಕಿ.ಗ್ರಾಂ ಪೊಟ್ಯಾಶಿಯಂ ಸಲ್ಫೆàಟ್‌, 100 ಗ್ರಾಂ ಸೋಡಿಯಂ ಮಾಲಿಬ್ಡೆಟ್‌ ಮಣ್ಣಿನಲ್ಲಿ ಸೇರಿಸಬೇಕು. ಅನಂತರ 2ರಿಂದ 3 ಇಂಚು ನೀರು ನಿಲ್ಲಿಸಬೇಕು. ಇದಕ್ಕೆ ಬದಲಾಗಿ ಎಕರೆಗೆ 2,000-2,500 ಕಿ.ಗ್ರಾಂ ದನದ ಸೆಗಣಿ, 14 ಕಿ.ಗ್ರಾಂ ಸೂಪರ್‌ ಪಾಸ್ಪೇಟ್‌ ಉಪಯೋಗಿಸಬಹುದು. ಅನಂತರ ಈ ಪ್ರದೇಶಕ್ಕೆ ಸಸಿಮಡಿಯಲ್ಲಿ ಬೆಳೆಸಿದ 300 ಕಿ.ಗ್ರಾಂ ಅಜೋಲಾ ಹರಡಿದಾಗ ಇದು ಸುಮಾರು 3 ವಾರಗಳಲ್ಲಿ 4,000ದಿಂದ 4,800 ಕಿ.ಗ್ರಾಂಗಳಷ್ಟಾಗುತ್ತದೆ.

Advertisement

ದ್ರವ್ಯರಾಶಿ ಹೆಚ್ಚಿರಬೇಕು
ಅಜೋಲಾ ಬೆಳವಣಿಗೆ ಹೆಚ್ಚಾಗಬೇಕಾದರೆ ಭತ್ತದ ಗದ್ದೆಗೆ ನಾವು ಬೀಜರೂಪದಲ್ಲಿ ಒದಗಿಸುವ ಅಜೋಲಾ ದ್ರವ್ಯರಾಶಿ ಹೆಚ್ಚಿರಬೇಕು. ಆದ್ದರಿಂದ ರೈತರು ನಾಟಿ ಮಾಡುವ ಮೊದಲೇ ಅಂದರೆ ಸಸಿ ಮಡಿ ತಯಾರಿಸುವ ಸಮಯದಲ್ಲೇ ಇದರ ಮಡಿಯನ್ನು ತಯಾರಿಸಿಕೊಂಡು ಸುಮಾರು 1 ಎಕರೆಗೆ ಬೇಕಾದ 200-300 ಕೆ.ಜಿ.ಯಷ್ಟು ಅಜೋಲಾ ತಯಾರಿಸಿಕೊಂಡಿರಬೇಕು. ಒಂದು ವೇಳೆ ರೈತರಿಗೆ ಅಜೋಲಾ ಬೆಳೆಯಲು ಮೂರು ವಾರಗಳಲ್ಲಿ ಕಾಲಾವಕಾಶವಿಲ್ಲದಿದ್ದರೆ ಭತ್ತದ ಪೈರನ್ನು ಮೊದಲು ನಾಟಿ ಮಾಡಿ ಪೈರಿನ ಸಾಲುಗಳ ಮಧ್ಯದಲ್ಲಿ ಅಜೋಲಾವನ್ನು ಗದ್ದೆಯಲ್ಲಿ ಹರಡಿದರೆ ಅದು ಪೈರಿನ ಜತೆ ಬೆಳೆಯುತ್ತದೆ.

ಬಳಸುವ ಕ್ರಮಗಳು
ನಾಟಿಗೆ ಮೊದಲು ನೀರು ಬಸಿದು ತೆಗೆದು ಅಜೋಲಾವನ್ನು ಮಣ್ಣಿನಲ್ಲಿ ಸೇರಿಸಿ ಶಿಫಾರಸು ಮಾಡಿದ ಸಾರಜನಕಗಳಲ್ಲಿ ಶೇ. 25ರಷ್ಟನ್ನು ನೀಡಬೇಕು. ಅನಂತರ ಪೂರ್ತಿ ರಂಜಕ, ಪೊಟ್ಯಾಶ್‌ ಗೊಬ್ಬರಗಳನ್ನು ಕೊಟ್ಟು ಮಣ್ಣಿನಲ್ಲಿ ಸೇರಿಸಬೇಕು. ಭತ್ತ ನಾಟಿ ಮಾಡಿದ ಎರಡು ವಾರದ ವೇಳೆಗೆ ಅಲ್ಪಸ್ವಲ್ಪ ಅಜೋಲಾ ಬೆಳೆದು ಸುಮಾರು 1,000 ಕಿ.ಗ್ರಾಂಗಳಷ್ಟಾಗುತ್ತದೆ.

ಜಾನುವಾರುಗಳಿಗೆ ಹೀಗೆ ನೀಡಿ
ಅಜೋಲಾವನ್ನು ಜಾನುವಾರುಗಳಿಗೆ ನೀಡುವ ಮೊದಲು ಸೆಗಣಿ ವಾಸನೆ ನಿವಾರಿಸಲು ಅದನ್ನು ಶುದ್ಧವಾಗಿ ತೊಳೆಯಬೇಕು. ಇದನ್ನು ಅವುಗಳಿಗೆ ನೀಡುವ ಮುನ್ನ ನಿತ್ಯ ಆಹಾರದಲ್ಲಿ ಶೇ. 5ರಿಂದ 10ರಷ್ಟು ಅಜೋಲಾದಿಂದ ಪೂರೈಸಬೇಕು. ಮೊದಲು ಜಾನುವಾರುಗಳು ನಿರಾಕರಿಸಿದರೂ ಕ್ರಮೇಣ ಸೇವಿಸಲು ಶುರು ಮಾಡುತ್ತವೆೆ. ಅಭ್ಯಾಸವಾಗುವವರೆಗೆ ಹಿಂಡಿ ಅಥವಾ ದಾಣಿಯ ಜತೆ ಮಿಶ್ರ ಮಾಡಿ ತಿನ್ನಿಸುವುದು ಸೂಕ್ತ. ಆರು ತಿಂಗಳು ಮೀರಿದ ಕರುಗಳಿಗೆ ಮಾತ್ರ ಇದನ್ನು ನೀಡಬಹುದು. ಕೋಳಿ, ಕುರಿ, ಆಡು, ಮೊಲ, ಮೀನು, ಹಂದಿಗೂ ಹಸಿಯಾದ ಅಜೋಲಾವನ್ನು ಆಹಾರವಾಗಿ ನೀಡಬಹುದು.

ಉಪಯೋಗಗಳು
1 ಅಜೋಲಾ ಭತ್ತದ ಕೃಷಿಗೆ ಅಗತ್ಯವಾಗಿ ಬೇಕಾದ ಸಾರಜನಕ, ರಂಜಕ, ಪೊಟ್ಯಾಶ್‌ ಮತ್ತು ಇತರ ಪೋಷಕಾಂಶಗಳನ್ನು ಪೂರೈಸುತ್ತದೆ.
2 ಅಜೋಲಾಕ್ಕೆ ತ್ವರಿತವಾಗಿ ಬೆಳೆಯುವ ಶಕ್ತಿಯಿದ್ದು ಇದೊಂದು ಉತ್ತಮವಾದ ಹಸಿರೆಲೆ ಗೊಬ್ಬರವಾಗಿದೆ. ಇದರಿಂದ ಭತ್ತದ ಇಳುವರಿ ಶೇ. 10ರಿಂದ 15ರಷ್ಟು ಹೆಚ್ಚಳವಾಗುತ್ತದೆ.
3 ಕಾಂಪೋಸ್ಟ್‌ ಗೊಬ್ಬರ ತಯಾರಿಕೆಯಲ್ಲಿ ಅಜೋಲಾ ಮಿಶ್ರಣ ಮಾಡಿದರೆ ಗೊಬ್ಬರದಲ್ಲಿರುವ ಪೌಷ್ಟಿಕತೆ ಹೆಚ್ಚಳವಾಗುತ್ತದೆ.
4 ಅಜೋಲಾದಲ್ಲಿ ಶೇ. 30ರಷ್ಟು ಪ್ರೋಟೀನ್‌ ಪ್ರಮಾಣ ಇರುವುದರಿಂದ ಸಾಕುಪ್ರಾಣಿಗಳಾದ ದನಕರು, ಕೋಳಿಗಳಿಗೆ ಆಹಾರವಾಗಿ ನೀಡಬಹುದು.

  ಜಯಾನಂದ ಅಮೀನ್‌ ಬನ್ನಂಜೆ

Advertisement

Udayavani is now on Telegram. Click here to join our channel and stay updated with the latest news.

Next