ಲಕ್ನೋ: ದ್ವೇಷ ಭಾಷಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ರಾಮ್ ಪುರ್ ಕೋರ್ಟ್ ಗುರುವಾರ (ಅಕ್ಟೋಬರ್ 27) ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಅಜಂ ಖಾನ್ ದೋಷಿ ಎಂದು ಆದೇಶ ನೀಡಿ, ಮೂರು ವರ್ಷ ಜೈಲುಶಿಕ್ಷೆ ವಿಧಿಸಿದೆ.
ಇದನ್ನೂ ಓದಿ:ರೋಹಿತ್ ಬಳಗದ ಗೆಲುವಿನ ನಾಗಾಲೋಟ: ನೆದರ್ಲ್ಯಾಂಡ್ ವಿರುದ್ಧ ಸುಲಭ ಜಯ
2019ರಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಐಎಎಸ್ ಅಧಿಕಾರಿ ಆಂಜನೇಯ ಕುಮಾರ್ ಸಿಂಗ್ ವಿರುದ್ಧ ಅಜಂ ಖಾನ್ ಪ್ರಚೋದನಕಾರಿ ಹೇಳಿಕೆ ನೀಡಿದ್ದರು ಎಂದು ಎಫ್ ಐಆರ್ ದಾಖಲಾಗಿತ್ತು.
ಪ್ರಕರಣದಲ್ಲಿ ದೋಷಿಯಾಗಿರುವ ಅಜಂ ಖಾನ್ ಗೆ ಐಪಿಸಿ ಸೆಕ್ಷನ್ ಪ್ರಕಾರ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಒಂದು ವೇಳೆ ಅಜಂ ಖಾನ್ ಗೆ ಎರಡು ಅಥವಾ ಅದಕ್ಕಿಂತ ಹೆಚ್ಚು ಶಿಕ್ಷೆಗೆ ಒಳಗಾದರೆ ಖಾನ್ ವಿಧಾನಸಭೆಯ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು. ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಸುಮಾರು 90 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ವಂಚನೆ ಪ್ರಕರಣವೊಂದರಲ್ಲಿ ಈಗಾಗಲೇ ಸುಪ್ರೀಂಕೋರ್ಟ್ ಅಜಂ ಖಾನ್ ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ನಂತರ ಖಾನ್ ಜೈಲಿನಿಂದ ಬಿಡುಗಡೆಗೊಂಡಿರುವುದಾಗಿ ವರದಿ ತಿಳಿಸಿದೆ.