ಹೊಸದಿಲ್ಲಿ: ಹಿರಿಯ ಐಪಿಎಸ್ ಅಧಿಕಾರಿ ಕೊಡಗಿನ ಮನೆಯಪಂಡ ಅಯ್ಯಪ್ಪ ಗಣಪತಿ ಅವರನ್ನು ರಾಷ್ಟ್ರೀಯ ಭದ್ರತಾ ದಳದ (ಎನ್‌ಎಸ್‌ಜಿ) ಮಹಾ ನಿರ್ದೇ ಶಕರನ್ನಾಗಿ (ಡೈರೆಕ್ಟರ್ ಜನರಲ್) ನೇಮಕ ಮಾಡಲಾಗಿದೆ. ಕನ್ನಡಿಗರಾದ ಅದರಲ್ಲೂ ಕೊಡಗು ಜಿಲ್ಲೆಯ ಐಪಿಎಸ್ ಅಧಿಕಾರಿಯೊಬ್ಬರು ಈ ಹುದ್ದೆಗೆ ಏರಿರುವುದು ಇದೇ ಮೊದಲು ಎನ್ನಲಾಗಿದೆ.
ಎಂ.ಎ. ಗಣಪತಿ ಅವರು ಈ ಮೊದಲು ನಾಗರಿಕ ವಿಮಾನಯಾನದ (ಭದ್ರತಾ ವಿಭಾಗ) ಮಹಾ ನಿರ್ದೇಶಕರಾಗಿ ಕರ್ತವ್ಯದಲ್ಲಿದ್ದರು. 1986ನೇ ಸಾಲಿನ ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಗಣಪತಿ ಅವರು 2024ರ ಫೆಬ್ರವರಿ 29ರಂದು ಸೇವೆಯಿಂದ ನಿವೃತ್ತಿಯಾ ಗಲಿದ್ದು, ಅಲ್ಲಿಯವರೆಗೆ ಎನ್‌ಎಸ್‌ಜಿಯ ಮಹಾ ನಿರ್ದೇಶಕರಾಗಿ ಕರ್ತವ್ಯದಲ್ಲಿ ಮುಂದುವರಿಯಲಿದ್ದಾರೆ.
ದಕ್ಷಿಣ ಕೊಡಗಿನ ಕುಂದ ಗ್ರಾಮದ ಮನೆಯಪಂಡ ಅಪ್ಪಯ್ಯ (ವಿಠಲ ಲಾಯರ್) ಪ್ರೇಮಲತಾ (ನಿವೃತ್ತ ಶಿಕ್ಷಕಿ) ದಂಪತಿಯ ಪುತ್ರರಾಗಿರುವ ಗಣಪತಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕುಂದ ಗ್ರಾಮದಲ್ಲಿ ಪೂರ್ಣಗೊಳಿಸಿದ್ದು ಚೆನ್ನೈಯ ಕ್ರಿಶ್ಚಿಯನ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪದವಿ ಪಡೆದಿದ್ದಾರೆ. ಬಳಿಕ ಸ್ನಾತಕೋತ್ತರ ಪದವಿಯನ್ನು ದಿಲ್ಲಿಯ ಜೆ.ಎನ್.ಯು. ವಿ.ವಿ.ಯಲ್ಲಿ ಪಡೆದುಕೊಂಡಿದ್ದಾರೆ.
1999ರಲ್ಲಿ ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ)ಯಲ್ಲೂ ಸೇವೆ ಸಲ್ಲಿಸಿದ್ದ ಎಂ.ಎ.ಗಣಪತಿ, ತಮ್ಮ 30 ವರ್ಷಗಳ ಸೇವೆಯಲ್ಲಿ ಸೋನೆಬಾಂದ್ರಾ, ಮೊರಾದಾಬಾದ್ ನಗರ ಮತ್ತು ಹಾರ್‌ದೋಯಿ ಸೇರಿದಂತೆ ಉತ್ತರ ಭಾರತದ ಆಯಕಟ್ಟಿನ ಮತ್ತು ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ದಕ್ಷತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಈ ಅತ್ಯುನ್ನತ ಸೇವೆಗಾಗಿ ಅವರು ರಾಷ್ಟ್ರಪತಿಗಳ ವಿಶೇಷ ಸೇವಾ ಪದಕವನ್ನು ಪಡೆದಿದ್ದಾರೆ.
ಡಿಜಿಎಂಒ ಆಗಿ ಬಿ.ಎಸ್. ರಾಜು
ಕಾಶ್ಮೀರದಲ್ಲಿ ಉಗ್ರರನ್ನು ಹೆಡೆಮುರಿ ಕಟ್ಟಿದ ಅಧಿಕಾರಿ ಲೆ|ಜ| ಬಿ.ಎಸ್. ರಾಜು ಅವರನ್ನು ಮಿಲಿಟರಿ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕ (ಡಿಜಿಎಂಒ) ಹುದ್ದೆಗೆ ನೇಮಕ ಮಾಡಲಾಗಿದೆ. ಇದಕ್ಕೂ ಪೂರ್ವದಲ್ಲಿ ಲೆ|ಜ| ಬಿ.ಎಸ್. ರಾಜು, ಜಮ್ಮು ಮತ್ತು ಕಾಶ್ಮೀರದಲ್ಲಿರುವ 15 ಕಾರ್ಪ್ಸ್ ನ ಕಾರ್ಯತಂತ್ರ ಅಧಿಕಾರಿಯಾಗಿದ್ದರು.