Advertisement

ಮಹಿಳೆಯರ ಆರೋಗ್ಯ ಚಿಕಿತ್ಸೆಗೆ “ಆಯುಷ್ಮತಿ ಕ್ಲಿನಿಕ್‌’

11:22 PM Mar 26, 2023 | Team Udayavani |

ಉಡುಪಿ: ಮಹಿಳೆಯರ ಆರೋಗ್ಯ ಚಿಕಿತ್ಸೆಗಾಗಿ ಆಯುಷ್ಮತಿ ಕ್ಲಿನಿಕ್‌ ರಾಜ್ಯಾದ್ಯಂತ ಆರಂಭಗೊಂಡಿದೆ.

Advertisement

ಮಹಿಳೆಯರಿಗೆ ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಲು ಅವಕಾಶ ಕಲ್ಪಿಸುವುದು. ಹದಿಹರೆಯದ ಹೆಣ್ಣುಮಕ್ಕಳಿಗೆ ದೈಹಿಕ ಬದಲಾವಣೆ, ನೈರ್ಮಲ್ಯ ಮತ್ತು ಸಂತಾನೋತ್ಪತ್ತಿ ಕುರಿತು ಅರಿವು ಮೂಡಿಸುವುದು ಮತ್ತು ಆಪ್ತ ಸಮಾಲೋಚನೆ ನಡೆಸುವುದು. 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಅಸಾಂಕ್ರಾಮಿಕ ರೋಗಗಳ ತಪಾಸಣೆ ನಡೆಸುವುದು. ರೆಫ‌ರಲ್‌ ಸೇವೆ ಒದಗಿಸುವುದು ಈ ಆಯುಷ್ಮತಿ ಕ್ಲಿನಿಕ್‌ನ ಪ್ರಮುಖ ಉದ್ದೇಶವಾಗಿದೆ.

ಲಭ್ಯವಿರುವ ಸೇವೆಗಳು
ಕ್ಲಿನಿಕ್‌ನಲ್ಲಿ ಪ್ರತೀ ದಿನ ಒಬ್ಬ ತಜ್ಞ ವೈದ್ಯರ ಸೇವೆ ಲಭ್ಯವಿದೆ. ಸೋಮವಾರ ಫಿಸಿಶಿಯನ್‌, ಮಂಗಳವಾರ ಮೂಳೆ ಮತ್ತು ಕೀಲು ತಜ್ಞರು, ಬುಧವಾರ ಶಸ್ತ್ರಚಿಕಿತ್ಸಾ ತಜ್ಞರು, ಗುರುವಾರ ಮಕ್ಕಳ ತಜ್ಞರು, ಶುಕ್ರವಾರ ಸ್ತ್ರೀರೋಗ ತಜ್ಞರು, ಶನಿವಾರ ಇತರ ತಜ್ಞರು (ಕಿವಿ, ಮೂಗು, ಗಂಟಲು, ಚರ್ಮ, ನೇತ್ರ) ತಪಾಸಣೆ ನಡೆಸಲಿದ್ದಾರೆ. ಆಪ್ತ ಸಮಾಲೋಚನೆ ಕೂಡ ಲಭ್ಯವಿದ್ದು, ಋತುಚಕ್ರ ಸಂಬಂಧಿ ಹಾಗೂ ಋತುಚಕ್ರ ನೈರ್ಮಲ್ಯ, ಕುಟುಂಬ ಕಲ್ಯಾಣ ಯೋಜನೆಗಳು, ಅಸಾಂಕ್ರಾಮಿಕ ರೋಗಗಳು, ಸಂತಾನೋತ್ಪತ್ತಿ ಅಂಗಗಳ ಸೋಂಕು/ಲೈಂಗಿಕ ಸೋಂಕುಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು, ಹದಿಹರೆಯದ ಸಮಸ್ಯೆಗಳು, ಮುಟ್ಟು ನಿಲ್ಲುವ ಸಮಯದ ಸವåಸ್ಯೆಗಳು, ಪೌಷ್ಟಿಕಾಂಶದ ಕೊರತೆಗಳ ಬಗ್ಗೆ ವೈದ್ಯರಿಂದ ಸೂಕ್ತ ಸಲಹೆ ಸೂಚನೆಗಳನ್ನು ಪಡೆಯಬಹುದಾಗಿದೆ. ಲ್ಯಾಬ್‌ ಪರೀಕ್ಷೆಗಳ ಸೇವೆ ಮತ್ತು ಉಚಿತ ಔಷಧಗಳು ದೊರೆಯುತ್ತವೆ.

ಉಡುಪಿ: ಇಂದು ಉದ್ಘಾಟನೆ
ಮಾ. 27ರ ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿಯವರು, ಕೇಂದ್ರ ಮತ್ತು ರಾಜ್ಯದ ಆರೋಗ್ಯ ಸಚಿವರು ವರ್ಚುವಲ್‌ ಆಗಿ ಉದ್ಘಾಟಿಸಲಿದ್ದು, ಉಡುಪಿ ಅಲಂಕಾರ್‌ ಚಿತ್ರಮಂದಿರ ಬಳಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ಮತಿ ಕ್ಲಿನಿಕ್‌ನಲ್ಲಿ ಕಾರ್ಯಕ್ರಮ ನೇರ ಪ್ರಸಾರಗೊಳ್ಳಲಿದೆ. ಈ ಕ್ಲಿನಿಕ್‌ ಬೆಳಗ್ಗೆ 9ರಿಂದ ಸಂಜೆ 4.30ರ ವರೆಗೆ ತೆರೆದಿರುತ್ತದೆ.

ಮಂಗಳೂರಿನಲ್ಲಿ ನಾಲ್ಕು ಕ್ಲಿನಿಕ್‌
ಮಂಗಳೂರಿನಲ್ಲಿ ನಾಲ್ಕು ಆಯುಷ್ಮತಿ ಕ್ಲಿನಿಕ್‌ಗಳು ಆರಂಭಗೊಳ್ಳಲಿವೆ. ಪಡೀಲ್‌ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಉದ್ಘಾಟನೆ ನಡೆಯಲಿದ್ದು, ಮೇಯರ್‌ ಜಯಾನಂದ ಅಂಚನ್‌, ಉಪಮೇಯರ್‌ ಪೂರ್ಣಿಮಾ, ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌., ಸಿಇಒ ಡಾ| ಕುಮಾರ್‌, ಮನಪಾ ಆಯುಕ್ತ ಚನ್ನಬಸಪ್ಪ ಕೆ. ಭಾಗವಹಿಸಲಿದ್ದಾರೆ. ಜತೆಗೆ, ಬಂದರು, ಸುರತ್ಕಲ್‌, ಬಿಜೈ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ಮತಿ ಕ್ಲಿನಿಕ್‌ಗಳು ಕಾರ್ಯಾಚರಿಸಲಿವೆ. ಈ ಕ್ಲಿನಿಕ್‌ಗಳನ್ನು ಕ್ರಮಮವಾಗಿ ಎ.ಜೆ. ಆಸ್ಪತ್ರೆ, ಫಾದರ್‌ ಮುಲ್ಲರ್‌, ಮುಕ್ಕ ಶ್ರೀನಿವಾಸ ಆಸ್ಪತ್ರೆ ಮತ್ತು ಕೆ.ಎಂ.ಸಿ. ಆಸ್ಪತ್ರೆಗಳು ನಿರ್ವಹಿಸಲಿವೆ. ಪ್ರತೀ ದಿನ ಓರ್ವ ತಜ್ಞ ವೈದ್ಯರು ಕ್ಲಿನಿಕ್‌ನಲ್ಲಿ ಮಹಿಳೆಯರ ಆರೋಗ್ಯ ತಪಾಸಣೆ ಮಾಡಲಿದ್ದಾರೆ ಎಂದು ಡಿಎಚ್‌ಒ ಡಾ| ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ ನೀಡಲಾಗದೆ ತಜ್ಞ ವೈದ್ಯರ ಸೇವೆಯಿಂದ ವಂಚಿತರಾಗಿ ಸಾಕಷ್ಟು ಮಹಿಳೆಯರು ಮತ್ತು ಹದಿಹರೆಯದವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಯುಷ್ಮತಿ ಕ್ಲಿನಿಕ್‌ಗಳಲ್ಲಿ ಮಹಿಳೆಯರು ಮತ್ತು ಹದಿ ಹರೆಯದವರಿಗೆ ತಜ್ಞ ವೈದ್ಯರಿಂದ ಉಚಿತ ತಪಾಸಣೆ, ಆಪ್ತ ಸಮಾಲೋಚನೆಯೊಂದಿಗೆ ಅಗತ್ಯ ಔಷಧಗಳನ್ನು ಉಚಿತವಾಗಿ ನೀಡಲಾಗುವುದು.
-ಕೂರ್ಮಾರಾವ್‌ ಎಂ., ಉಡುಪಿ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next