Advertisement

ಆಯುಷ್ಮಾನ್‌ ಯೋಜನೆ: 17,056 ಮಂದಿಗೆ ಚಿಕಿತ್ಸೆ

01:59 AM Jan 20, 2021 | Team Udayavani |

ಮಂಗಳೂರು: ಆಯುಷ್ಮಾನ್‌ ಭಾರತ್‌ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2020ರ ಎಪ್ರಿಲ್‌ನಿಂದ ಡಿಸೆಂಬರ್‌ವರೆಗೆ 17,056 ಮಂದಿಗೆ ಚಿಕಿತ್ಸೆ ನೀಡಲಾಗಿದ್ದು 60.54 ಕೋ.ರೂ. ವಿನಿಯೋಗಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಚಂದ್ರ ಬಾಯಿರಿ ಅವರು ಮಂಗಳವಾರ ಜರಗಿದ ಜಿ.ಪಂ. ಸಭೆಯಲ್ಲಿ ಮಾಹಿತಿ ನೀಡಿದರು.

Advertisement

ಇದೇ ವೇಳೆ ಆಯುಷ್ಮಾನ್‌ ಯೋಜನೆ ಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ದಾಖಲಾಗುವವರ ತಪಾಸಣೆ ವೆಚ್ಚವನ್ನು ಕೂಡ ಸೇರಿಸುವಂತೆ ಸರಕಾರವನ್ನು ಕೋರುವಂತೆ ಸದಸ್ಯೆ ಮಮತಾ ಗಟ್ಟಿ ಅವರು ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರನ್ನು ಆಗ್ರಹಿಸಿದರು. ಸದಸ್ಯರಾದ ಎಂ.ಎಸ್‌. ಮಹಮ್ಮದ್‌, ಶಾಹುಲ್‌ ಹಮೀದ್‌ ದನಿಗೂಡಿಸಿದರು. 9 ತಿಂಗಳಿನಲ್ಲಿ 4,461 ಕೊರೊನಾ ಸೋಂಕಿತರಿಗೆ ಚಿಕಿತ್ಸೆಗೆ 24.88 ಕೋ.ರೂ. ಹಾಗೂ 12,895 ಇತರ ಚಿಕಿತ್ಸೆಗೆ 35.76 ಕೋ.ರೂ. ಪಾವತಿಸ ಲಾಗಿದೆ ಎಂದು ಡಾ| ಬಾಯರಿ ತಿಳಿಸಿದರು.

ವಾರದೊಳಗೆ ಅತಿಥಿ ಶಿಕ್ಷಕರ ನೇಮಕ :

ಜಿಲ್ಲೆಯಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಯಾಗದೆ ಶಿಕ್ಷಣಕ್ಕೆ ಹಿನ್ನಡೆಯಾಗುತ್ತಿದೆ ಎಂದು ಸದಸ್ಯರು ಗಮನ ಸೆಳೆದಾಗ ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ  ಕ್ರಮಕೈಗೊಂಡಿದ್ದು ಪಟ್ಟಿ ಸಿದ್ಧಗೊಂಡಿದೆ. ವಾರದೊಳಗೆ ನೇಮಕಾತಿ ನಡೆಯಲಿದೆ ಎಂದು ಡಿಡಿಪಿಐ ತಿಳಿಸಿದರು.

ಶಾಲೆಗೆ ಸುರಕ್ಷಾ ಪತ್ರ ಕಡ್ಡಾಯ :

Advertisement

ವಿದ್ಯಾರ್ಥಿಗಳ ಸುರಕ್ಷೆ ಹಿನ್ನೆಲೆಯಲ್ಲಿ ಶಾಲೆಗಳು ಸುರಕ್ಷಾ ಪತ್ರ ಹೊಂದುವುದು ಕಡ್ಡಾಯ. ಪತ್ರ ಇದ್ದರೆ ಮಾತ್ರ ಶಾಲೆಗಳ ಮಾನ್ಯತೆಯನ್ನು ನವೀಕರಿಸಲಾಗುತ್ತದೆ. ಮಾನ್ಯತೆ ಇಲ್ಲದ ಶಾಲೆಗಳ ವಿದ್ಯಾರ್ಥಿ ಗಳಿಗೆ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಇರುವುದಿಲ್ಲ ಎಂದು ಡಿಡಿಪಿಐ ಹೇಳಿದರು.

ಸುರಕ್ಷಾ ಪತ್ರ ಪ್ರಕ್ರಿಯೆಗೆ ಸಾವಿರಾರು ರೂ. ಭರಿಸಬೇಕಾಗಿದ್ದು, ನಿಯಮದಲ್ಲಿ  ವಿನಾಯತಿ ನೀಡಬೇಕು ಎಂದು ಸದಸ್ಯ ಸುಚರಿತ ಶೆಟ್ಟಿ ಆಗ್ರಹಿಸಿದರು.

ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಿಇಒ ಡಾ| ಆರ್‌. ಸೆಲ್ವಮಣಿ, ಸ್ಥಾಯೀ ಸಮಿತಿ ಸದಸ್ಯರಾದ ರವೀಂದ್ರ ಕಂಬಳಿ, ಧನಲಕ್ಷ್ಮೀ ಗಟ್ಟಿ, ಮಮತಾ ಎಂ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next