Advertisement

ಆಯುಷ್ಮಾನ್‌ ಹೊಸ ಕಾರ್ಡ್‌ ನೋಂದಣಿಗೆ ಹಿನ್ನಡೆ ! ಜನರ ನಿರಾಸಕ್ತಿ; ಆರೋಗ್ಯ ಇಲಾಖೆಗೆ ಸವಾಲು

11:03 PM Dec 18, 2022 | Team Udayavani |

ಮಂಗಳೂರು: ರಾಜ್ಯ ಸರಕಾರದಿಂದ ಇದುವರೆಗೆ ವಿತರಿಸುತ್ತಿದ್ದ ಆಯುಷ್ಮಾನ್‌ ಭಾರತ್‌ ಕಾರ್ಡ್‌ ವಿತರಣೆಯನ್ನು ನಿಲ್ಲಿಸಿದ್ದು, ಹೊಸ ಕಾರ್ಡ್‌ (ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನ ಆರೋಗ್ಯ ಕರ್ನಾಟಕ) ನೋಂದಣಿ ಮಾಡಲು ಜನರೇ ಮುಂದೆ ಬರುತ್ತಿಲ್ಲ. ಹೀಗಾಗಿ ಉಭಯ ಜಿಲ್ಲೆಗಳಲ್ಲಿ ಇನ್ನೂ 21 ಲಕ್ಷ ಮಂದಿ ಕಾರ್ಡ್‌ ನೋಂದಣಿಗೆ ಬಾಕಿಯಿದ್ದಾರೆ.

Advertisement

ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹೊಸ ಕಾರ್ಡ್‌ ಬಗ್ಗೆ ಅರಿವು ಮೂಡಿಸುತ್ತಿದ್ದರೂ ಜನರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಪರಿಣಾಮ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾರ್ಡ್‌ ನೋಂದಣಿಗೆ ಹಿನ್ನಡೆ ಉಂಟಾಗಿದೆ. ಸದ್ಯ ದ.ಕ. ಜಿಲ್ಲೆಯಲ್ಲಿ ಹೊಸ ಕಾರ್ಡ್‌ ನೋಂದಣಿಯ 17,40,239 ಗುರಿಯಲ್ಲಿ 4,54,381 ಲಕ್ಷ ಕಾರ್ಡ್‌ ನೋಂದಣಿಯಾಗಿ ಶೇ. 26.1 ಗುರಿ ತಲುಪಿದೆ. ಮತ್ತು ಉಡುಪಿ ಜಿಲ್ಲೆಯಲ್ಲಿ 12,66,438 ಗುರಿಯಲ್ಲಿ 4,32,382 ಕಾರ್ಡ್‌ ನೋಂದಣಿಗೊಂಡು ಶೇ. 34.1 ರಷ್ಟು ಗುರಿ ತಲುಪಿದೆ.

200ಕ್ಕೂ ಅಧಿಕ ಗ್ರಾಮ ಒನ್‌ ಕೇಂದ್ರಗಳಲ್ಲಿ ಮತ್ತು ಜಿಲ್ಲೆಯ ಮೂಲಕ ಅಲ್ಲಲ್ಲಿ ಕ್ಯಾಂಪ್‌ ಆಯೋಜಿಸಿ ನೋಂದಣಿ ನಡೆಯುತ್ತಿದೆ. ಈ ಪ್ರಕ್ರಿಯೆಯು ದೇಶಾದ್ಯಂತ ಒಂದೇ ವೆಬ್‌ಸೈಟ್‌ ಮೂಲಕ ಆಗುವ ಕಾರಣ ಹೆಚ್ಚಾಗಿ ಮಧ್ಯಾಹ್ನ 11 ಗಂಟೆಯ ಬಳಿಕ ಮತ್ತು ಸಂಜೆ 5 ಗಂಟೆ ಸಮಯದಲ್ಲಿ ಸರ್ವರ್‌ ಸಮಸ್ಯೆ ಎದುರಾಗುತ್ತಿದೆ. ಬಂಟ್ವಾಳ ತಾಲೂಕಿನ ಗ್ರಾಮ ಒನ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಕಳೆದ ಕೆಲವು ದಿನಗಳಿಂದ ಸರ್ವರ್‌ ಸಮಸ್ಯೆ ಇದೆ. ಆದರೂ ನೋಂದಣಿ ಮಾಡುವಂತೆ ಗ್ರಾಮ ಮಟ್ಟದಲ್ಲಿ ಈಗಾಗಲೇ ಅರಿವು ಮೂಡಿಸಿದ್ದೇವೆ’ ಎನ್ನುತ್ತಾರೆ.

30 ಲಕ್ಷ ಕಾರ್ಡ್‌ ಗುರಿ
ಹೊಸ ಕಾರ್ಡ್‌ ನೋಂದಣಿಗೆ ಮೂರು ತಿಂಗಳ ಕಾಲಾವಕಾಶ ಇದೆ. ಮುಂದಿನ ಎರಡು ತಿಂಗಳಿನಲ್ಲಿ ಈ ಗುರಿ ಪೂರ್ಣಗೊಳ್ಳಬೇಕು. ಆದರೆ ಸದ್ಯದ ಅಂಕಿ ಅಂಶದಂತೆ ಇನ್ನು 3 ತಿಂಗಳಾದರೂ ಗುರಿ ಮುಟ್ಟುವುದು ಅನುಮಾನ. ರಾಜ್ಯ ಸರಕಾರ ನೀಡಿರುವ ಗುರಿಯಂತೆ ದ.ಕ.ದಲ್ಲಿ 10,99,064 ಬಿಪಿಎಲ್‌ ಮತ್ತು 6,41,175 ಎಪಿಎಲ್‌ ಕಾರ್ಡ್‌ ದಾರರು ಸೇರಿದಂತೆ ಒಟ್ಟು 17,40,239 ಗುರಿ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ 7,94,264 ಬಿಪಿಎಲ್‌ ಕಾರ್ಡ್‌ ಮತ್ತು 4,72,174 ಎಪಿಎಲ್‌ ಕಾರ್ಡ್‌ ಸೇರಿದಂತೆ ಒಟ್ಟು 12,66,438 ಗುರಿ ನೀಡಿದೆ. ಹೊಸ ಕಾರ್ಡ್‌ ನೋಂದಣಿಗೆ ಗ್ರಾಮ ಮಟ್ಟದಲ್ಲಿಯೇ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆ ಮನೆ ಭೇಟಿ ನಡೆಯುತ್ತಿದೆ.

ನಗರ ಭಾಗಕ್ಕೆ ಹೊಸ ಏಜೆನ್ಸಿ
ನಗರ ಭಾಗಗಳಲ್ಲಿ ಗ್ರಾಮ ಒನ್‌ ಕೇಂದ್ರ ಇರದ ಕಾರಣ ಗ್ರಾಮ ಒನ್‌ ಅಧಿಕಾರಿಗಳು ಅಲ್ಲಿಗೇ ಆಗಮಿಸಿ ನೋಂದಣಿ ಮಾಡಿಕೊಳ್ಳುತ್ತಿದ್ದರು. ಇದೀಗ ನಗರ ಭಾಗದ ನೋಂದಣಿಗೆಂದು ರಾಜ್ಯ ಸರಕಾರ “ಸ್ಮಾರ್ಟ್‌ ಐಟಿ’ ಎಂಬ ಖಾಸಗಿ ಸಂಸ್ಥೆಗೆ ಅವಕಾಶ ನೀಡಿದೆ. ಆ ಸಂಸ್ಥೆಯ ಅಧಿಕಾರಿಗಳು ಕಳೆದ ವಾರ ಜಿಲ್ಲೆಗಳಿಗೆ ಬಂದು ಇಲ್ಲಿನ ಅಂಕಿ-ಅಂಶಗಳನ್ನು ಸಂಗ್ರಹಿಸಿದ್ದಾರೆ. ಸ್ಥಳೀಯ ಸ್ವಯಂ ಸೇವಕರ ಜತೆಗೂಡಿ ಹೆಚ್ಚುವರಿ ಶಿಬಿರ ಮಾಡಿ ಕಾರ್ಡ್‌ ನೋಂದಣಿಗೆ ವೇಗ ನೀಡುವ ಭರವಸೆ ನೀಡಲಿದ್ದಾರೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

Advertisement

ಕೇಂದ್ರ ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ಜಿಲ್ಲೆಯಾದ್ಯಂತ ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನ ಆರೋಗ್ಯ ಕರ್ನಾಟಕ ಕಾರ್ಡ್‌ ನೋಂದಣಿಯಾಗುತ್ತಿದೆ. ಆರೋಗ್ಯ ಇಲಾಖೆಯ ಹಲವು ಸವಲತ್ತು ಈ ಮೂಲಕ ಲಭ್ಯವಾಗಲಿದೆ. ಸಾರ್ವಜನಿಕರು ನೋಂದಣಿ ಮಾಡಿ ಲಾಭ ಪಡೆದುಕೊಳ್ಳಬೇಕು.
– ಡಾ| ಕಿಶೋರ್‌ ಕುಮಾರ್‌, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next