Advertisement

ಆರೋಗ್ಯ ರಕ್ಷಣೆಯ ಮಹತ್ವಾಕಾಂಕ್ಷಿ ಯೋಜನೆ “ಆಯುಷ್ಮಾನ್‌ ಭಾರತ್‌’ 

09:55 AM Apr 13, 2018 | Team Udayavani |

ಕೇಂದ್ರ ಸರಕಾರ 2018 -19ರ ಬಜೆಟಿನಲ್ಲಿ ಆಯುಷ್ಮಾನ್‌ ಭಾರತ್‌ ಎಂಬ ಕಾರ್ಯಕ್ರಮವನ್ನು ಸೇರ್ಪಡೆಗೊಳಿಸಿದೆ. ಏ.14ರಂದು ಆಚರಿಸುವ ಅಂಬೇಡ್ಕರ್‌ ಜಯಂತಿಯಂದು ಯೋಜನೆ ಅನುಷ್ಠಾನಗೊಳ್ಳಲಿದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆಯ ದಿಸೆಯಲ್ಲಿ ಜಗತ್ತಿನ ಅತಿ ದೊಡ್ಡ ಆರೋಗ್ಯ
ಕಾಳಜಿ ಯೋಜನೆಯು ಅನುಷ್ಠಾನಗೊಳ್ಳುವ ಸಂದರ್ಭದಲ್ಲೇ ನ್ಯಾಷನಲ್‌ ಫಾರ್ಮಾಸಿ ಟಿಕಲ್‌ ಪ್ರೈಸಿಂಗ್‌ ಅಥಾರಿಟಿ(ಎನ್‌ಪಿಪಿಎ) ವರದಿಯು ದೇಶದ ಆರೋಗ್ಯ ಕಾಳಜಿಯ ಸ್ಥಿತಿಗತಿಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಎತ್ತಿದೆ. ಇತ್ತೀಚೆಗೆ ದೆಹಲಿಯಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ ಮತ್ತು ಮಿತಿಮೀರಿದ ಬಿಲ್‌ನ ಕುರಿತಾಗಿ ಅನೇಕ ದೂರುಗಳು ದಾಖಲಾಗಿವೆ. 

Advertisement

ಅದರ ಮೊತ್ತವು ಎಂತವರನ್ನೂ ದಂಗುಬಡಿಸುತ್ತದೆ. ಆರೋಗ್ಯ ಕಾಳಜಿ(ಹೆಲ್ತ್‌ ಕೇರ್‌) ಹೆಸರಿನಲ್ಲಿ ಇಂತಹ ನೂತನ ಉದ್ದಿಮೆಗಳು ಔಷಧಿ, ವೈದ್ಯಕೀಯ ಸಲಕರಣೆಗಳು, ರೋಗ ಪರೀಕ್ಷೆ ಇತ್ಯಾದಿ ಒದಗಿಸುವಲ್ಲಿ ಗಳಿಸಿದ್ದ ಲಾಭ ಸುಮಾರು 1737 ಶೇಕಡಾದಷ್ಟು. ಈ ಸೇವೆಗಳ ಶುಲ್ಕವೇ ರೋಗಿ ನೀಡಿರುವ ಒಟ್ಟು ಬಿಲ್‌ ಮೊತ್ತದ 56.7 ಶೇ. ಸಾಮಾನ್ಯವಾಗಿ ಆಪರೇಷನ್‌ಗಳು ಮತ್ತು ಕೋಣೆ ಬಾಡಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ. ಆದರೆ ನಿವೇದನೆ ಪತ್ರದನ್ವಯ (ಮೆಮೊರಾಂಡಂ) ಶಸ್ತ್ರ ಚಿಕಿತ್ಸೆ ಮತ್ತು ಕೋಣೆ ಬಾಡಿಗೆ ಅನುಕ್ರಮವಾಗಿ ಒಟ್ಟು ಬಿಲ್ಲಿನ ಕೇವಲ ಶೇ.0.39 ಮತ್ತು 11 ಶೇ. ಆಘಾತಕಾರಿ ಎಂದರೆ ತಪಶೀಲು ಪಟ್ಟಿಯಲ್ಲಿ ಸೇರಿರದ (ನಾನ್‌ಶೆಡ್ನೂಲ್‌) ಸೂತ್ರ ನಿರೂಪಕಗಳು  (ಫಾರ್ಮುಲೇಶನ್ಸ್‌) ಉದಾ: ಡಿನ್ಪೋಸೆಬಲ್‌ ಸಿರಿಂಜ್‌ಗಳು, ಕೆಥೀಟರುಗಳು ಇತ್ಯಾದಿಗಳ ಮೇಲೆ ಹೊರಿಸುವ ಬೆಲೆ ವಿವೇಚನಾರಹಿತವಾಗಿದೆ. 

2015ರ ನ್ಯಾಶನಲ್‌ ಲಿಸ್ಟ್‌ ಆಫ್ ಎಸೆನ್ಶಿಯಲ್‌ ಮೆಡಿಸಿನ್ಸ್‌ ಕೆಲವು ಔಷಧಿ ಮತ್ತು ವೈದ್ಯಕೀಯ ಸಲಕರಣೆಗಳ ಬೆಲೆಯನ್ನು ನಿಗದಿಪಡಿಸಿದರೂ ಉಪಯೋಗಿಸಲು ಯೋಗ್ಯವಾದ(ಕನ್ಸೂಮೆಬಲ್ಸ್‌) ಮತ್ತು ರೋಗ ಪರೀಕ್ಷೆಯ (ಡಯಾಗ್ನೊಸಿಸ್‌) ಸೇವೆಗಳ ಶುಲ್ಕವು ಅದರಲ್ಲಿ ಒಳಗೊಂಡಿಲ್ಲ. ಮೆಮೊರಾಂಡಂನಂತೆ ಔಷಧಿಗಳು ಒಟ್ಟು ಖರ್ಚಿನ ಕೇವಲ ಶೇ.4.10. ಈ ಲಾಭದ ದುರುಪಯೋಗವನ್ನು ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳು ಬಳಕೆ ವಸ್ತುಗಳನ್ನು ರಖಂ ಬೆಲೆಯಲ್ಲಿ ಖರೀದಿಸಿ ರೋಗಿಗಳಿಗೆ ಮಿತಿಮೀರಿದ ಬೆಲೆಗೆ ಒದಗಿಸುತ್ತವೆ. ರೋಗ ಪರೀಕ್ಷೆಯ ಸೇವೆಯಲ್ಲೂ ಇದೇ ಸ್ಥಿತಿ. ದುಬಾರಿ ಬೆಲೆಯಲ್ಲಿ ಲಾಭಗಳಿಸುವವರು, ಉತ್ಪಾದಕರೂ ಅಲ್ಲ, ಚಿಲ್ಲರೆ ವ್ಯಾಪಾರಿಗಳೂ ಅಲ್ಲ “ಮೋಡರ್ನ್ ಹೆಲ್ತ್‌ ಕೇರ್‌ ಇಂಡಸ್ಟ್ರೀ’
ಎಂಬ ನಾಮ ಹೊತ್ತ ಖಾಸಗಿ ಆಸ್ಪತ್ರೆಯವರು.

ಹೆಚ್ಚೆಚ್ಚು ಔಷಧಿಗಳು, ವೈದ್ಯಕೀಯ ಸಲಕರಣೆಗಳು, ರೋಗ ಪರೀಕ್ಷೆಗಳು, ಸಲಹಾ ( ಕನ್ಸಲ್ಟೆಶನ್‌) ಶುಲ್ಕ, ಮೇಲಾಗಿ ಆಸ್ಪತ್ರೆ ಚಿಕಿತ್ಸಾ ಕಾರ್ಯವಿಧಾನಗಳನ್ನು ಒಳಗೊಳ್ಳುವ ನಿಟ್ಟಿನಲ್ಲಿ ಬೆಲೆ ನಿಯಂತ್ರಣದ ಅವಕಾಶವನ್ನು ವಿಸ್ತರಿಸುವ ಮೂಲಕ ಸರಕಾರದ ಪ್ರಥಮ ನೀತಿ
ಹಸ್ತಕ್ಷೇಪ ಇಂದಿನ ತುರ್ತು ಅಗತ್ಯವಾಗಿದೆ. ಉದಾ: ಕೊರೊನರಿ ಸ್ಟಂಟ್‌ಗಳು. ದೇಶೀಯ ಉತ್ಪಾದಕರಿಗೆ ಪೂರಕ ವಾತಾವರಣವನ್ನು ನಿರ್ಮಿಸಲು ಇದರಿಂದ ಸಾಧ್ಯವಾಗುತ್ತದೆ. ಅಲ್ಲದೆ ಅದು ಬೆಲೆ ನಿಯಂತ್ರಣದ ಪ್ರಕ್ರಿಯೆಯನ್ನು ಬೆಂಬಲಿಸುತ್ತದೆ. ಒಂದು ಕ್ರಮಬದ್ಧ ಹಂತದಲ್ಲಿ ಆರೋಗ್ಯ ಕಾಳಜಿ ಕ್ಷೇತ್ರಕ್ಕೆ ಕೆಲವು ದೀರ್ಘ‌ ಅವಧಿಯ ಚಿಕಿತ್ಸೆ ಅವಶ್ಯವಾಗಿದೆ.

ಸ್ವಾತಂತ್ರ್ಯೋತ್ತರದಲ್ಲಿ ಸತತ ಪ್ರಯತ್ನದ ಹೊರತಾಗಿಯೂ ಸಾರ್ವಜನಿಕ ಆರೋಗ್ಯದಲ್ಲಿ ವಿನಿಯೋಗ ನಿರುತ್ಸಾಹಕಾರಿಯಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರದ ಗುಣಮಟ್ಟದ ಸೇವೆಗಳು ಮತ್ತು ಅಲ್ಲಿನ ಮೂಲಭೂತ ಸೌಕರ್ಯಗಳಿಂದಾಗಿ ಶೇ.80 ಕ್ಕಿಂತಲೂ ಹೆಚ್ಚು ಜನರು ತಮ್ಮ ಆರೋಗ್ಯ ಕಾಳಜಿಗಾಗಿ ಇಂದಿಗೂ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ತಮ್ಮ ಆಸ್ಪತ್ರೆ ಖರ್ಚಿನಿಂದಾಗಿ ಹೆಚ್ಚಿನವರು ಬಡತನ
ರೇಖೆಗಿಂತ ಕೆಳಗೆ ತಳ್ಳಲ್ಪಟ್ಟಿದ್ದಾರೆ. ಸಾರ್ವತ್ರಿಕ ವಿಮೆಯು ಸ್ವಲ್ಪ ಪ್ರಮಾಣದ ಸಹಾಯವನ್ನು ನೀಡಿದರೂ ಬೇರೂರಿದ ಕೆಟ್ಟ ವ್ಯವಸ್ಥೆಯನ್ನು ಅದು
ಸರಿದೂಗಿಸದು. ಪ್ರಾಯಶಃ ಖಾಸಗಿ ಆಸ್ಪತ್ರೆಗಳು ಮತ್ತೂ ಮುಂದುವರಿದು ಹೆಚ್ಚು ಹಣವನ್ನು ವಸೂಲಿ ಮಾಡಲು ವಿಮಾ ಕಂಪೆನಿಗಳನ್ನು ಬಳಸಿಕೊಳ್ಳುತ್ತವೆ.

Advertisement

ಲಾಭವೆಂಬ ವಿಷಚಕ್ರ ಆರಂಭಗೊಳ್ಳುವುದೇ ವೈದ್ಯಕೀಯ ಶಿಕ್ಷಣದಿಂದ. ಸೀಟುಗಳ ಮಿತಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಪಾಲು ಹೆಚ್ಚಿದ್ದರಿಂದ ವೈದ್ಯಕೀಯ ಡಿಗ್ರಿ ಗಳಿಸಲು ಅಪಾರ ಪ್ರಮಾಣದ ಹಣ ಮತ್ತು ದೀರ್ಘಾವಧಿ ಸಮಯ ವಿನಿಯೋಗಿಸಲ್ಪಡುತ್ತದೆ. ಮೊದಲು ಬಂಡವಾಳವನ್ನು ತೊಡಗಿಸಿ ಮಾಲ್‌ನಂತಿರುವ ವೈಭವೋಪೇತ ಆಸ್ಪತ್ರೆಯನ್ನು ಆರಂಭಿಸಿ ಬಳಿಕ ವಸೂಲಿ ಮಾಡುವ ಒಂದು ವಿಧಾನದಂತೆ ಕಾಣುತ್ತದೆ. ಇದರಿಂದಾಗಿ ಅಪಾರ ಹಣದ ಒಳಹರಿವು ಸಹಜ. ಔಷಧಿ ಕಂಪೆನಿಗಳು ಈ ಪ್ರಕ್ರಿಯೆಯಲ್ಲಿ ಕೈಜೋಡಿಸುತ್ತವೆ. ಅಸಹಾಯಕ
ರೋಗಿಗಳು ಲಾಭವೆಂಬ ವಿಷಚಕ್ರದಲ್ಲಿ ಸಿಲುಕುತ್ತಾರೆ.

ಕಡಿಮೆ ಅವಧಿಯ ತರಬೇತಿ ಮತ್ತು ಕುಟುಂಬ ವೈದ್ಯರನ್ನು ಬಲಗೊಳಿಸುವ ಮೂಲಕ ವೈದ್ಯಕೀಯ ಶಿಕ್ಷಣ ಸೌಲಭ್ಯವನ್ನು ಖರೀದಿಸುವ ಸಾಮರ್ಥ್ಯವನ್ನು ಸೃಷ್ಟಿಸುವುದೇ ಇದಕ್ಕೆ ಪರಿಹಾರೋಪಾಯ. ಐಐಎಂಗಳಲ್ಲಿರುವಂತೆ ನೂತನ ಸೌಲಭ್ಯಗಳನ್ನು ಆರಂಭಿಸುವುದು, ಎಟಕುವ ಬೆಲೆಗೆ ಜನೆರಿಕ್‌ ಔಷಧಿಗಳನ್ನು ಒದಗಿಸುವುದು, ಸ್ವತ್ಛತಾ ಜಾಗೃತಿ, ಮತ್ತು ವಿಮಾ ಜಾಲವನ್ನು ವಿಸ್ತರಿಸುವುದು ಇತ್ಯಾದಿ ಸರಕಾರ ಕೈಗೊಳ್ಳುವ ಹೆಜ್ಜೆಯಾಗಿದೆ. ಗುಣಮಟ್ಟದ ವೈದ್ಯಕೀಯ ವೃತ್ತಿಪರರನ್ನು ಮತ್ತು ಸೇವೆಯನ್ನು ಒದಗಿಸುವುದು ಮತ್ತದಕ್ಕೆ ಮೂಲಭೂತ ಸೌಕರ್ಯ 
ಗಳನ್ನು ಸೃಷ್ಟಿಸುವುದು ಸರಕಾರದ ಮುಂದಿರುವ ಸವಾಲು. ನಮ್ಮ ಸಾಂಸ್ಕೃತಿಕ ಹಿನ್ನೆಲೆಯಲ್ಲಿ, ನಾಗರಿಕ ಸಮಾಜ, ವಿಶೇಷವಾಗಿ ಸೇವಾ ಮನೋಭಾವದ ಟ್ರಸ್ಟ್‌ಗಳು, ದೇವಾಲಯಗಳೂ ಈ ಕಾರ್ಯಕ್ಕೆ ಸೂಕ್ತ ಆಯ್ಕೆಯಾಗುತ್ತವೆ. 

ಯಶಸ್ವಿ ಸಹಕಾರಿಗಳು ಮತ್ತು ಸೇವಾ ಮನೋಭಾವದ ಸ್ವತಂತ್ರ ಸಂಘಸಂಸ್ಥೆ ಗಳು ನಮ್ಮಲ್ಲಿವೆ. ಸರಕಾರವು ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತದೆ. ಇತರರು ಸೇವೆ ಯನ್ನು ಒದಗಿಸುವುದರ ಮೂಲಕ ಆರೋಗ್ಯ ಕಾಳಜಿ(ಹೆಲ್ತ್‌ ಕೇರ್‌)ಯು ಸುಲಭದಲ್ಲಿ ದೊರಕುವಂತಾಗಬೇಕು ಮತ್ತು ಎಟಕುವಂತಿರಬೇಕು. ಹಾಗಾದರೆ ಮಾತ್ರ ಆಯುಷ್ಮಾನ್‌ ಭಾರತದ ಭರವಸೆ ಸಾಕಾರಗೊಂಡಂತಾಗುತ್ತದೆ.

*ಜಲಂಚಾರು ರಘುಪತಿ ತಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next