Advertisement
ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ವರ್ಷಕ್ಕೆ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ನೀಡುವ ಈ ಯೋಜನೆಯಡಿ ಕಾರ್ಡ್‌ಗಳನ್ನು ಈಗಾಗಲೇ ವಿವಿಧ ಸರಕಾರಿ, ಖಾಸಗಿ ಆಸ್ಪತ್ರೆ, ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಸೇವಾ ಸಿಂಧು ಸಿಎಸ್‌ಸಿಗಳಲ್ಲಿ ನೀಡಲಾಗುತ್ತಿದೆ. ಆದರೂ ಗ್ರಾಮೀಣ ಬಡ ಕುಟುಂಬಗಳಿಗೆ ಕಾರ್ಡ್ ವಿತರಣೆ ಪೂರ್ಣ ಮಟ್ಟದಲ್ಲಿ ಆಗಿರಲಿಲ್ಲ. ಗ್ರಾ.ಪಂ.ಗಳಲ್ಲಿ ವಿತರಿಸಿದರೆ ಜನಸಾಮಾನ್ಯರಿಗೆ ಹೆಚ್ಚು ಅನುಕೂಲ ಎಂಬ ಕಾರಣದಿಂದ ಗ್ರಾ.ಪಂ.ಗಳಿಗೆ ಕಾರ್ಡ್ ವಿತರಣೆ ಜವಾಬ್ದಾರಿ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಹಾಜರುಪಡಿಸಿ ಆರೋಗ್ಯ ಕಾರ್ಡ್ ಪಡೆಯಬಹುದಾಗಿದೆ.
ಗ್ರಾ.ಪಂ.ನ ಬಾಪೂಜಿ ಸೇವಾ ಕೇಂದ್ರಗಳಲ್ಲಿ “ಆರೋಗ್ಯ ಕರ್ನಾಟಕ’ ವೆಬ್‌ಸೈಟ್ ಮೂಲಕ ಆಯುಷ್ಮಾನ್ ಭಾರತ್ ಕಾರ್ಡ್ ವಿತರಿಸಲಾಗುತ್ತದೆ. ಎಲ್ಲ ಗ್ರಾ.ಪಂ.ಗಳಿಗೆ ಪ್ರತ್ಯೇಕವಾಗಿ ಲಾಗಿನ್ ಐಡಿ, ಪಾಸ್‌ವರ್ಡ್ ಒದಗಿಸಲಾಗಿದೆ. ಇ-ಹಾಜರಾತಿಗೆ ಬಳಸಲಾಗುತ್ತಿರುವ ಕಂಪ್ಯೂಟರ್ ಮೂಲಕ ಮಾತ್ರ ಕಾರ್ಡ್ ವಿತರಿಸಲು ಅವಕಾಶವಿದೆ. 10 ರೂ. ಶುಲ್ಕದೊಂದಿಗೆ ಎ4 ಅಳತೆಯ “ಆಯುಷ್ಮಾನ್ ಭಾರತ್’ನ ಮುದ್ರಿತ ಮಾಹಿತಿ ಒದಗಿಸಲಾಗುತ್ತದೆ.
Related Articles
ಜಿಲ್ಲಾ ಕುಷ್ಠರೋಗ ಅಧಿಕಾರಿಗಳು ಇದಕ್ಕೆ ನೋಡಲ್ ಅಧಿಕಾರಿಗಳಾಗಿದ್ದು, ಎಲ್ಲ ಪಿಡಿಒಗಳು ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ತರಬೇತಿ ನೀಡಲಿದ್ದಾರೆ. ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ಜನಸಾಮಾನ್ಯರಿಗೆ, ನೌಕರರಿಗೆ, ಆಶಾ ಕಾರ್ಯಕರ್ತೆಯರಿಗೆ, ಶಾಲಾ ಮಕ್ಕಳಿಗೆ ಮತ್ತು ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುವವರಿಗೆ ಶಿಬಿರ ಮಾದರಿಯಲ್ಲಿ ಕಾರ್ಡ್ ವಿತರಿಸಲಾಗುತ್ತದೆ.
Advertisement
ಗ್ರಾ.ಪಂ.ನ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಆನ್‌ಲೈನ್ ಸೇವೆಗಳ ಜತೆಗೆ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸುವ ಬಗ್ಗೆ ಸರಕಾರದಿಂದ ನಿರ್ದೇಶನ ಬಂದಿದೆ. ಗ್ರಾ.ಪಂ. ಅಧಿಕಾರಿಗಳಿಗೆ ಗುರುವಾರದಿಂದ ತರಬೇತಿ ನೀಡಲಾಗುತ್ತದೆ. ಕೆಲವೇ ದಿನಗಳಲ್ಲಿ ಈ ಸೇವೆ ಗ್ರಾ.ಪಂ. ಮಟ್ಟದಲ್ಲಿ ಜನರಿಗೆ ದೊರೆಯಲಿದೆ.– ಡಾ| ಸೆಲ್ವಮಣಿ ಆರ್., ಸಿಇಒ, ದ.ಕ. ಜಿ.ಪಂ.