Advertisement

ರಾಜ್ಯ ಸರ್ಕಾರದಿಂದ ಆಯುಷ್‌ ವೈದ್ಯರ ಕಡೆಗಣನೆ

05:39 PM Sep 25, 2021 | Team Udayavani |

ಮಧುಗಿರಿ: ಮೆಡಿಕಲ್‌ ಲಾಬಿಗೆ ಮಣಿದಂತಿರುವ ಸರ್ಕಾರಗಳು ಆಯುಷ್‌ ವೈದ್ಯರನ್ನು ಕಡೆಗಣಿಸಿದ್ದು, ದೇಸಿ ವೈದ್ಯ ಪದ್ಧತಿ ನಿಧಾನವಾಗಿ ಕಣ್ಮರೆಯಾಗುತ್ತಿದೆ. ರಾಜ್ಯಾದ್ಯಂತ ಇಂದು ಜನರಿಗೆ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.

Advertisement

ಎಲ್ಲೆಡೆ ಕಲಬೆರಕೆ ಆಹಾರ ಪದಾರ್ಥಗಳೇ ತುಂಬಿದ್ದು, ಜನರು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಇದಕ್ಕೆ ಕಾರಣ ಮೆಡಿಕಲ್‌ ಮಾಫಿಯಾ. ರೋಗ ಬರಲು, ನಿವಾರಣೆ ಮಾಡಲು ಒಂದೇ ಮಾಫಿಯಾ ಕೆಲಸ ಮಾಡುತ್ತಿರುವುದು ಅಪಾಯಕಾರಿ ಸಂಗತಿ. ಹಿಂದೆ ಕಡಿಮೆ ವೆಚ್ಚದಲ್ಲಿ ಕೈಗೆಟುಕುವ ದೇಸಿ ವೈದ್ಯ ಪದ್ಧತಿಯ ಮೂಲಕ ಸೇವೆ ಕಲ್ಪಿಸಲು ಹಿಂದಿನ ಸರ್ಕಾರಗಳು ಅನುವು ಮಾಡಿಕೊಟ್ಟಿದ್ದು, ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬ ಎಂಬಿಬಿಎಸ್‌ ವೈದ್ಯರೊಂದಿಗೆ ಒಬ್ಬ ಆಯುಷ್‌ ವೈದ್ಯರನ್ನು ನೇಮಿಸುವಂತೆ ಎನ್‌ಎಚ್‌ಎಂ ಸ್ಪಷ್ಟವಾಗಿ ಹೇಳಿದ್ದರೂ, ಇದು ಪಾಲನೆಯಾಗುತ್ತಿಲ್ಲ.

ಸಮಾನ ಕೆಲಸ- ವೇತನ ಆದೇಶ ಪಾಲಿಸಿಲ್ಲ:
ಮೊದಲು ಇಬ್ಬರಿಗೂ ಸಮಾನ ವೇತನವಾಗಿ 6 ಸಾವಿರ ನಿಗದಿ ಮಾಡಿದ್ದು, ಕ್ರಮೇಣ 14 ರಿಂದ 20 ಸಾವಿರ ರೂ. ವರೆಗೂ ಬಂದು ನಿಂತಿತು. ಆದರೆ, 6ನೇ ವೇತನ ಆಯೋಗದಲ್ಲಿ ಎಂಬಿಬಿಎಸ್‌ ವೈದ್ಯರಿಗೆ 28 ಸಾವಿರ ಮಾಸಿಕ ವೇತನ ನಿಗದಿಪಡಿಸಿ, 60 ಸಾವಿರ ರೂ.ವರೆಗೂ ವೇತನ ನೀಡಲಾಗಿದೆ. ಆದರೆ, ಆಯುಷ್‌ ವೈದ್ಯರ ವೇತನ ಮಾತ್ರ 23 ಸಾವಿರಕ್ಕೆ ನಿಂತಿದೆ. ಇದರಿಂದಾಗಿ ದೇಶದಲ್ಲೇ ಅತಿ ಕಡಿಮೆ ವೇತನಕ್ಕೆ ರಾಜ್ಯದ ಆಯುಷ್‌ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ ಸಹ ಇಬ್ಬರೂ ವೈದ್ಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆದೇಶ ನೀಡಿದ್ದರೂ ಇದಕ್ಕೆ ಗೌರವ ನೀಡದ ರಾಜ್ಯ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ. ಈ ವಿಚಾರವಾಗಿ ರಾಜ್ಯದಲ್ಲಿರುವ ಆಯುಷ್‌ ವೈದ್ಯರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ನೀಡಿ ದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:‘ಭಾರತ್ ಬಂದ್’:ಐಟೆಕ್ ಸಮೀತಿಯಿಂದ ವಿವಿಧ ಕಂಪನಿಗಳ ಪ್ರವೇಶದ್ವಾರದಲ್ಲಿ ಪ್ರತಿಭಟನೆಗೆ ನಿರ್ಧಾರ

ದ್ವಂದ್ವ ನೀತಿ ಪ್ರಶ್ನೆಗೆ ಉತ್ತರವಿಲ್ಲ: ಹಿಂದೆ ಸದನದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೆಲಸ ಮಾಡುತ್ತಿರುವ ಯುನಾನಿ ಹಾಗೂ ಆಯುಷ್‌ ವೈದ್ಯರನ್ನು ಖಾಯಂಗೊಳಿಸುವಂತೆ ವಿಧಾನ ಪರಿಷತ್‌ ಸದಸ್ಯ ನಾಸೀರ್‌ ಅಹ್ಮದ್‌ ಕೂಡ ಈ ದ್ವಂದ್ವ ನೀತಿಯನ್ನು ಪ್ರಶ್ನಿಸಿದ್ದರೂ, ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್‌ ಸಮಾಧಾನಕರ ಉತ್ತರ ನೀಡಲಿಲ್ಲ. ಆದರೆ, ಈ ಬಗ್ಗೆ ಪರಿಶೀಲನೆ ನಡೆಸಿ ಆಯುಷ್‌ ವೈದ್ಯರನ್ನು ಸಮಾನ ಕೆಲಸಕ್ಕೆ ಸಮಾನ ವೇತನ ಕಾರ್ಯಕ್ರಮದಡಿ ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಯಾವುದೇ ಪ್ರಗತಿ ಕಂಡಿಲ್ಲ ಎಂದು ರಾಜ್ಯ ಆಯುಷ್‌ ವೈದ್ಯರ ಸಂಘದ ಅಧ್ಯಕ್ಷ ವಿಜಯ್‌ಕುಮಾರ್‌ ಆರೋಪಿಸಿದ್ದಾರೆ.

Advertisement

ಗ್ರಾಮೀಣ ಪಾಲಿಗೆ ವೈದ್ಯೋ ನಾರಾಯಣ ಹರಿ: 15 ವರ್ಷಗಳಿಂದ ಕಡಿಮೆ ವೇತನಕ್ಕೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ಮಾಡುತ್ತಿರುವ ಈ ಆಯುಷ್‌ ವೈದ್ಯರು ಗ್ರಾಮೀಣ ಜನರ ಪಾಲಿಗೆ ನಿಜವಾದ ವೈದ್ಯೋ ನಾರಾಯಣ ಹರಿ ಆಗಿದ್ದಾರೆ. ಆದರೆ, ಕೆಲಸದ ಭದ್ರತೆಯಿಲ್ಲದೆ, ಕನಿಷ್ಟ ಮೂಲ ಸೌಲಭ್ಯವೂ ಇಲ್ಲದೆ ಸರ್ಕಾರದ ದೃಷ್ಟಿಯಲ್ಲಿ ಜೀತದಾಳು ಗಳಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಕೊರೊನಾದಲ್ಲಿ ನಿತಂತರ ಸೇವೆ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಇತರೆ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯರಿಂದ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿ ವೇತನ ಹೆಚ್ಚಳ ಮಾಡಿತು. ಆದರೆ, ಕೊರೊನಾ ವಾರಿಯರ್ಸ್‌ಗಳಾಗಿ ಕಡಿಮೆ ವೇತನಕ್ಕೆ ಎಂಬಿಬಿಎಸ್‌ ವೈದ್ಯರ ಸರಿಸಮಾನವಾಗಿ ನಿರಂತರವಾಗಿ ಸೇವೆ ಸಲ್ಲಿಸಿದ ಆಯುಷ್‌ ವೈದ್ಯರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮಾತ್ರ ಇನ್ನೂ ಮುಂದಾಗಿಲ್ಲ.

ಆಯುಷ್‌ ವೈದ್ಯರ ಸ್ಥಾನಕ್ಕೆ ಎಂಬಿಬಿಎಸ್‌ ವೈದ್ಯರ ನೇಮಕ: ಕಳೆದ ಬಾರಿ 1040 ಎಂಬಿಬಿಎಸ್‌ ವೈದ್ಯರನ್ನು ನೇಮಕ ಮಾಡಿಕೊಂಡ ಸರ್ಕಾರ, ನಿಧಾನವಾಗಿ ಗುತ್ತಿಗೆ ಆಧಾರದಲ್ಲಿದ್ದ ಆಯುಷ್‌ ವೈದ್ಯರ ಸ್ಥಾನಕ್ಕೆ ಕೂರಿಸುತ್ತಿದೆ. ಈಗಾಗಲೇ 100 ಆಯುಷ್‌ ವೈದ್ಯರನ್ನು ತಗೆದುಹಾಕಿದ್ದು, ಗ್ರಾಮೀಣ ಭಾಗದಲ್ಲಿ ಕೆಲಸ ಮಾಡ ಲು ನಿರ್ಲಕ್ಷಿಸಿದರೂ ಎಂಬಿಬಿಎಸ್‌ ವೈದ್ಯರನ್ನು ಅದೇ ಸ್ಥಾನಕ್ಕೆ ನೇಮಿಸಲು ಮುಂದಾಗಿದೆ. ಇದರಿಂದಾಗಿ ಆಯುಷ್‌ ವೈದ್ಯರ ಜೊತೆಗೆ ದೇಸಿ ವೈದ್ಯ ಪದ್ಧತಿಯನ್ನು ಸಹ ಸ್ವದೇಶದಲ್ಲೇ ನಿರ್ಮೂಲನೆಗೆ ಸರ್ಕಾರ ಮುಂದಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಇದನ್ನೂ ಓದಿ:ಕಾಂಗ್ರೆಸ್ ಬಿಟ್ಟು ಹೋಗಿರುವ ಎಲ್ಲರನ್ನೂ ವಾಪಸ್ ಕರೆತರಲಾಗುತ್ತದೆ: ಡಿ ಕೆ ಶಿವಕುಮಾರ್

ಸಚಿವರ ನೇತೃತ್ವದಲ್ಲೇ ನೇಮಕ: ರಾಜ್ಯದ ಆಯುರ್ವೇದ ಆಸ್ಪತ್ರೆಯಲ್ಲಿ ಕೆಲಸ ಕಳೆದುಕೊಳ್ಳುವ ವೈದ್ಯರನ್ನು ಸಚಿವರೇ ನೇಮಕ ಮಾಡ ಬಹುದಾಗಿದೆ. 2018ರಲ್ಲಿ ಸಚಿವ ಸಂಪುಟದಲ್ಲಿ ಮಂಡಿಸಿದ್ದು, ಮತ್ತೆ ಸದನದ ಒಪ್ಪಿಗೆಯ ಅಗತ್ಯವಿಲ್ಲ. ಹೀಗಾಗಿ ಇಲ್ಲಿ ಕೆಲಸ ಕಳೆದು ಕೊಳ್ಳುವ ವೈದ್ಯರನ್ನು ಜೇಷ್ಟತೆ ಆಧಾರದಲ್ಲಿ ಮರು ನೇಮಕಕ್ಕೆ ಅವಕಾಶವಿದೆ ಎಂದು ಇಲಾಖೆ ಅಧಿಕಾರಿ ಗಳು ಹೇಳಿದ್ದು, ಸ್ವದೇಶಿ ಮಂತ್ರ ಜಪಿಸುವ ಸರ್ಕಾರ ಸ್ವದೇಶದ ದೇಸಿ ವೈದ್ಯ ಪದ್ಧತಿ ಉಳಿಸಿದಂತಾಗುತ್ತದೆ.

ಸರ್ಕಾರದಿಂದ ಯಾವುದೇ ಭದ್ರತೆಯಿಲ್ಲದೆ, ದಶಕಗಳ ಕಾಲ ಕಡಿಮೆ ವೇತನಕ್ಕೆ ವೈದ್ಯ ಸೇವೆ ಮಾಡಿದ್ದೇವೆ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಕೋರ್ಟ್‌ ಆದೇಶದಂತೆ ನಮಗೂ ಖಾಯಂಗೊಳಿಸಬೇಕು. ವೈದ್ಯರಾಗಿದ್ದು, ಕೊರೊನಾ ವೇಳೆ ನಾವು ಮಾಡಿದ ಪ್ರಾಮಾಣಿಕ ಸೇವೆಯನ್ನು ಸರ್ಕಾರ ಗುರುತಿಸಿ, ನಮಗೆ ನ್ಯಾಯ ಕಲ್ಪಿಸಬೇಕು.
-ವಿಜಯ್‌ಕುಮಾರ್‌, ರಾಜ್ಯಾಧ್ಯಕ್ಷ,
ಆಯುಷ್‌ ವೈದ್ಯರ ಸಂಘ

16 ವರ್ಷದಿಂದ ಹುಟ್ಟೂರಿನ ಸೇವೆಗಾಗಿ ದುಬೈನ ಲಕ್ಷಾಂತರ ವೇತನದ ಉದ್ಯೋಗ ಬಿಟ್ಟು ಬಂದಿದ್ದೇವೆ. ಆದರೆ, ನಮ್ಮ ಜೊತೆಗಿದ್ದ ಎಂಬಿಬಿಎಸ್‌ ವೈದ್ಯ 80 ಸಾವಿರ ರೂ. ವೇತನ ಪಡೆದರೆ, ಅದೇ ಕೆಲಸಕ್ಕೆ ನಾನು 23 ಸಾವಿರ ರೂ. ವೇತನ ಪಡೆಯುತ್ತಿದ್ದೇನೆ. ಇಂತಹ ಅನ್ಯಾಯ ದಶಕದಿಂದ ಸಹಿಸಿಕೊಂಡಿದ್ದೇವೆ. ಈಗಲಾದರೂ ಸರ್ಕಾರ ನಮ್ಮ ಕೈಹಿಡಿಯಬೇಕು.
-ಅಬ್ದುಲ್‌ ರೆಹಮಾನ್‌, ಆಯುಷ್‌
ವೈದ್ಯಾಧಿಕಾರಿ

-ಮಧುಗಿರಿ ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next