Advertisement

ಸಂಧಿಗತವಾತ

06:00 AM Nov 11, 2018 | |

ಆಯುರ್ವೇದ ಶಾಸ್ತ್ರ ಆಯುಷ್ಯದ ಬಗ್ಗೆ ಜ್ಞಾನ ನೀಡುವಂತಹ ಹಾಗೂ ಆಯುವಿನ ರಕ್ಷಣೆ ಹೇಗೆ ಮಾಡಬಹುದು ಎಂಬ ಜ್ಞಾನ ನೀಡುವಂತಹ ದೊಡ್ಡ ಸಾಗರವಾಗಿದೆ. ಜೀವನದಲ್ಲಿ ಯಾವುದೇ ಸಾಧನೆ ಮಾಡುವುದಿದ್ದರೆ ಅದು ಆರೋಗ್ಯವಂತ ಶರೀರ ಇರುವಾಗ ಮಾತ್ರ ಸಾಧ್ಯ. 

Advertisement

“ಧರ್ಮಾರ್ಥ ಕಾಮ ಮೋಕ್ಷಾಣಾಂ ಆರೋಗ್ಯಂ ಮೂಲಂ ಉತ್ತಮಂ’ಧರ್ಮದ ರಕ್ಷಣೆ, ಜೀವನದ ಗಳಿಕೆಗಳು (ಹಣ ಸಂಪಾದನೆ), ನಮ್ಮ ಕಾಮನೆಗಳ ಪೂರ್ತಿ ಹಾಗೂ ಮೋಕ್ಷ ಸಾಧನೆಗೆ ಆರೋಗ್ಯವಂತ ಶರೀರ ಅತಿಮುಖ್ಯ. ಶರೀರ ಆರೋಗ್ಯವಂತವಾಗಿರದೆ ರೋಗಗ್ರಸ್ತವಾದರೆ ಮನುಷ್ಯನ ಯಾವುದೇ ಕಾಮನೆ, ಸಾಧನೆಗಳು ಸಾಧ್ಯವಾಗುವುದಿಲ್ಲ. ಆದ್ದರಿಂದ ಆಯುರ್ವೇದ ಶಾಸ್ತ್ರದ   ಮುಖ್ಯ ಧ್ಯೇಯಗಳು:”ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ ಆತುರಸ್ಯ ವಿಕಾರ ಪ್ರಶಮನಂ’ಸ್ವಸ್ಥರ ಸ್ವಾಸ್ಥ್ಯ ರಕ್ಷಣೆ ಹಾಗೂ ರೋಗಿಗಳ ರೋಗದ ಉಪಶಮನ ಆಯುರ್ವೇದದ ಮುಖ್ಯ ಉದ್ದೇಶವಾಗಿದೆ, ಆದರೂ ಹೆಚ್ಚು ಪ್ರಾಮುಖ್ಯವನ್ನು ಸ್ವಾಸ್ಥ್ಯರಕ್ಷಣಾರ್ಥ ಕೊಡಲಾಗಿದೆ.

ಈಗಿನ ಕಾಲದಲ್ಲಿ ಹೆಚ್ಚಿನ ಕಾಯಿಲೆಗಳು ಅಸಮರ್ಪಕ ಆಹಾರಕ್ರಮ ಹಾಗೂ ಜೀವನ ಶೈಲಿಯಿಂದ ಉತ್ಪನ್ನವಾಗುತ್ತಿವೆ. ಮನುಷ್ಯನ ಶರೀರದ ಸವಕಳಿಯಿಂದ ತಾರುಣ್ಯಾವಸ್ಥೆಯಲ್ಲೇ ವ್ರದ್ಧಾಪ್ಯದ ಲಕ್ಷಣಗಳು ಕಂಡುಬರುತ್ತಿವೆ. ಈ ಅಸಮರ್ಪಕ ಆಹಾರ ಕ್ರಮದಿಂದ ಅತಿಯಾದ ಬೊಜ್ಜು, ಮಧುಮೇಹ, ರಕ್ತದ ಒತ್ತಡ ಅಲ್ಲದೆ ಎಲುಬುಗಳ ಸವಕಳಿಕೆಯಿಂದ ಸಂಧಿವಾತ, ಬೆನ್ನು ನೋವು ಇತ್ಯಾದಿ ಕಾಯಿಲೆಗಳು ಸರ್ವಸಾಮಾನ್ಯವಾಗಿವೆ.

ಆಯುರ್ವೇದ ಶಾಸ್ತ್ರವು 
“”ಸಮದೋಷ ಸಮಾಗ್ನಿಶ್ಚ ಸಮಧಾತು ಮಲಕ್ರಿಯಾಃಪ್ರಸನ್ನ ಆತ್ಮ ಇಂದ್ರಿಯ ಮನಃಸ್ವಸ್ಥ ಇತ್ಯಭಿದೀಯತೆ”.ಯಾರಲ್ಲಿ  ದೋಷ, ಧಾತು, ಮಲಗಳ ಸಾಮ್ಯತೆ ಹಾಗೂ ಆತ್ಮ, ಇಂದ್ರಿಯ, ಮನಸ್ಸು ಪ್ರಸನ್ನ ಸ್ಥಿತಿಯಲ್ಲಿರುತ್ತದೋ ಅಂಥವರು ಸ್ವಸ್ಥರೆನಿಸಿಕೊಳ್ಳುವರು. ಈಗಿನ ಕಾಲದಲ್ಲಿ ಸ್ವಸ್ಥ ಎನ್ನುವವರು ಕಾಣಸಿಗುವುದು ಬಹಳ ವಿರಳ. ಏಕೆಂದರೆ ಎಲ್ಲರಲ್ಲೂ ಚಿಂತೆ, ಅತೃಪ್ತಿ ನೆಲೆಗೂಡಿಕೊಂಡಿರುವುದರಿಂದ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅಸ್ವಸ್ಥರೇ.ಮನುಷ್ಯರಲ್ಲಿ ಶರೀರದ ಭಾರವನ್ನು ವಹಿಸಿಕೊಳ್ಳುವಂತಹ ಸಂಧಿಗಳು ಮೊಣಕಾಲುಗಂಟು (ಜಾನುಸಂಧಿ), ಪಾದಸಂಧಿ ಹಾಗೂ ಬೆನ್ನಿನ ಮೂಳೆಗಳು (ಕಶೇರುಕ) ಈ ಸಂಧಿಗಳ ಆರೋಗ್ಯ ಸ್ಥಿತಿಯನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ ಹಾಗೂ ನಮ್ಮೆಲ್ಲರ ಜವಾಬ್ದಾರಿ. 

ಮೊಣಕಾಲು ಗಂಟಿನ ಸಾಮಾನ್ಯ ರಚನೆ
ಈ ಸಂಧಿಯು 4 ಎಲುಬುಗಳ ಕೂಡುವಿಕೆಯಿಂದ ಉಂಟಾಗುತ್ತದೆ. ಈ ಸಂಧಿಗಳಲ್ಲಿರುವ ಶ್ಲೇಷಕ ಕಫ‌ದಿಂದ ಸ್ನೇಹ ಅಂಶದ ಪೂರೈಕೆ ಹಾಗೂ ಅವುಗಳ ಸುಖಕರ ಚಲನೆಗೆ ಅನುಕೂಲವಾಗುತ್ತದೆ. ಎಲ್ಲ ಎಲುಬುಗಳಲ್ಲಿ ವಾತದೋಷದ ಆಶ್ರಯ ಇರುತ್ತದೆ ಹಾಗೂ ಗಂಟುಗಳ ಸುಖಕರ ಚಲನವಲನಗಳಿಗೆ ಸಹಾಯಕವಾಗುತ್ತದೆ. ಹೆಚ್ಚಾಗಿ ಮೊಣಕಾಲು ಗಂಟುಗಳಲ್ಲಿ ಕಾಣಿಸುವಂತಹ ವ್ಯಾಧಿ ಸಂಧಿಗತವಾತ. ಸಂಧಿಗಳ ಸವಕಳಿಯಿಂದ ಉಂಟಾಗುವಂತಹುದು. ಈ ವ್ಯಾಧಿ ವೃದ್ಧಾಪ್ಯದಲ್ಲಿ ಸರ್ವೆ ಸಾಮಾನ್ಯವಾಗಿ ಕಾಣುವ ಧಾತುಗಳ ಕ್ಷಯದಿಂದ ಅದರಲ್ಲೂ ಎಲುಬು (ಅಸ್ಥಿಧಾತು) ಕ್ಷಯದಿಂದ ಉಂಟಾಗುತ್ತದೆ.

Advertisement

ಈ ಸಂಧಿವಾತದಲ್ಲಿ  ವಾತದೋಷ ವೃದ್ಧಿಯಿಂದ  ಎಲುಬುಗಳ ಸವಕಳಿಕೆ ಹಾಗೂ ಶ್ಲೇಷಕ ಕಫ‌ದ ಕ್ಷಯ  ಉಂಟಾಗುವುದರಿಂದ ಈ ವ್ಯಾಧಿಗೆ ಸಾಮಾನ್ಯ ವಾತವ್ಯಾಧಿ ಚಿಕಿತ್ಸಾ ಸೂತ್ರದಂತೆ ಬಾಹ್ಯ ಚಿಕಿತ್ಸೆಗಳಾದ  
ಅ) ಸ್ನೇಹನ   
ಆ) ಸ್ವೇದನ   
ಇ) ಲೇಪ   
ಈ) ಪರಿಷೇಕಗಳಿಂದ ಚಿಕಿತ್ಸೆ ಮಾಡಬಹುದಾಗಿದೆ.ಯಾವ ರೀತಿ ಒಂದು ಒಣಗಿದ ಕೋಲನ್ನು ಎಣ್ಣೆಯಲ್ಲಿ ಮುಳುಗಿಸಿ ಬಿಸಿ ನೀರಿನಲ್ಲಿ ಅದ್ದಿದರೆ ಹೇಗೆ ಚೆನ್ನಾಗಿ ಬಗ್ಗಿಸಲು ಸಾಧ್ಯವಾಗುತ್ತದೋ ಅದೇ ರೀತಿ ಸ್ನೇಹನ/ಸ್ವೇದನದಿಂದ ಸ್ತಬ್ಧತೆ ದೂರವಾಗಿ ಗಂಟಿನ ಚಲನವಲನ ಸುಖಕರವಾಗುತ್ತದೆ. ಆದ್ದರಿಂದ ಗಂಟುಗಳ ಸವಕಳಿಕೆಯಿಂದ ಉಂಟಾಗುವ ಸಂಧಿವಾತ ರೋಗಕ್ಕೆ ಚಿಕಿತ್ಸೆಯಲ್ಲಿ ಪ್ರಥಮ ಆದ್ಯತೆ ಸ್ನೇಹನ ಹಾಗೂ ಸ್ವೇದನಕ್ಕೆ ನೀಡಲಾಗುತ್ತದೆ.

ಸ್ನೇಹನ ಚಿಕಿತ್ಸೆ ಎಂದರೆ ನೋವು, ಸ್ತಬ್ಧತೆ ಇರುವ ಗಂಟು ಮಾಂಸಪೇಶಿಗಳಿಗೆ  ಅನೇಕ ಪ್ರಕಾರದ ನೋವು ನಿವಾರಕ ತೈಲಗಳನ್ನು ಉಪಯೋಗಿಸಿ ಅಭ್ಯಂಗ ಮಾಡುವುದು. ಉದಾ: ಮಹಾವಿಷ್ಣು ತೈಲ, ಧನ್ವಂತರಿ ತೈಲ, ಮಹಾಮಾಷ ತೈಲ, ಕ್ಷೀರಬಲ ತೈಲ -ಇವುಗಳನ್ನು ಹದ ಬಿಸಿ ಮಾಡಿ ವ್ಯಾಧಿಯುಕ್ತ ಗಂಟುಗಳಿಗೆ 30ರಿಂದ 45 ನಿಮಿಷಗಳ ಕಾಲ ತಿಕ್ಕುವುದು. ಇದರಿಂದ ಮಾಂಸಪೇಶಿಗಳಲ್ಲಿ ಒಳ್ಳೆಯ ರಕ್ತ ಸಂಚಾರ ಉಂಟಾಗಿ ಅವುಗಳಲ್ಲಿನ ಬಿಗಿತ ಕಡಿಮೆಯಾಗಿ ನೋವು ಸ್ತಬ್ಧತೆಯ ನಿವಾರಣೆ ಆಗುತ್ತದೆ. ಪ್ರತಿದಿನ ಎಲ್ಲರೂ ಈ ತೈಲದಿಂದ ಅಭ್ಯಂಗ ಮಾಡುವುದನ್ನು ರೂಢಿ ಮಾಡಿಕೊಂಡರೆ ಆಗ ನಾವು ಎಲುಬುಗಳಿಗೆ ರಕ್ಷಣೆಯನ್ನು ಕೊಟ್ಟಹಾಗೆ ಅಲ್ಲದೆ ಅವುಗಳ ಸವಕಳಿಕೆಯನ್ನು ತಡೆಗಟ್ಟಬಹುದು. ಈ ಔಷಧಯುಕ್ತ ತೈಲಗಳು ನೋವುನಿವಾರಕ ಶಕ್ತಿ ಅಲ್ಲದೆ ಎಲುಬು ಹಾಗೂ ಮಾಂಸಪೇಶಿ, ಸಿರಾ ಕಂಡರಾಗಳಿಗೆ ಬಲ ಕೊಡುವಂತಹ ಗುಣಗಳನ್ನೂ ಹೊಂದಿರುತ್ತವೆ.  

ಸ್ವೇದನ ಚಿಕಿತ್ಸೆ
ಈ ಚಿಕಿತ್ಸೆಯಲ್ಲಿ ಶಾಖವನ್ನು ಅಭ್ಯಂಗ ಮಾಡಿದ ಜಾಗಕ್ಕೆ ಬೆವರು ಬರುವ ತನಕ ಕೊಡುವುದು. ಈ ಸ್ವೇದನ ಚಿಕಿತ್ಸೆಯಿಂದಲೂ ಹಾಕಿದ ತೈಲ ಚೆನ್ನಾಗಿ ಎಲುಬು ಮಾಂಸಪೇಶಿಗಳವರೆಗೆ ಹೋಗಿ ತಮ್ಮ ಪ್ರಭಾವ ಬೀರಲು ಸಾಧ್ಯವಾಗುತ್ತದೆ. ಮಾಂಸ ಪೇಶಿಗಳ ಬಿಗಿತ ಸಡಿಲವಾಗಿ ಗಂಟುಗಳ ಸುಖಕರ ಚಲನವಲನಗಳಿಗೆ ಸಹಾಯಕವಾಗುತ್ತದೆ.

ಈ ಚಿಕಿತ್ಸೆಯಲ್ಲಿ  ಅನೇಕ ವಿಧಗಳಿವೆ.
1) ನಾಡಿಸ್ವೇದ:
ಗಂಟುಗಳಿಗೆ ಚೆನ್ನಾಗಿ 30ರಿಂದ 45 ನಿಮಿಷ ಅಭ್ಯಂಗ ಮಾಡಿದ ಮೇಲೆ ನಾಡಿಯ ಮುಖಾಂತರ ಬಿಸಿ ಆವಿಯನ್ನು ಗಂಟುಗಳಿಗೆ ಶಾಖ ರೂಪವಾಗಿ ಸರಿಯಾಗಿ ಬೆವರು ಬರುವವರೆಗೆ ಕೊಡಲಾಗುತ್ತದೆ. ಇದನ್ನು ದಿನಕ್ಕೆ ಎರಡು ಬಾರಿ 7ರಿಂದ 14 ದಿನಗಳವರೆಗೆ ಮಾಡಿದಾಗ ಗಂಟುಗಳ ನೋವು ಹಾಗೂ ಸ್ತಬ್ಧತೆ ನಿವಾರಣೆ ಆಗಲು ಸಹಾಯವಾಗುತ್ತದೆ.
2) ಪತ್ರಪಿಂಡ ಸ್ವೇದ: ನೋವು ನಿವಾರಕ ಗುಣವುಳ್ಳ ವಾತಹರ ಪತ್ರಗಳಾದ ಲಕ್ಕಿಸೊಪ್ಪು,     ಏರಂಡ ಪತ್ರ, ಹುಣಿಸೆಯ ಪತ್ರ, ನುಗ್ಗೆ ಸೊಪ್ಪು, ಎಕ್ಕದ ಎಲೆ ಇವುಗಳನ್ನು  ಸಣ್ಣದಾಗಿ ಹೆಚ್ಚಿ ಬಿಸಿ ಬಾಣಲೆಯಲ್ಲಿ ನಿಧಾನವಾಗಿ ಹುರಿದು ಹತ್ತಿ ಬಟ್ಟೆಯಲ್ಲಿ ಚೆನ್ನಾಗಿ ಪೊಟ್ಟಲಿ ಕಟ್ಟಿ ಎಣ್ಣೆ ಹಚ್ಚಿದ ನೋವಿನ ಗಂಟಿಗೆ ಜಾಗ್ರತೆಯಲ್ಲಿ ಸುಡದ ಹಾಗೆ ಶಾಖವನ್ನು 45 ನಿಮಿಷಗಳ ಕಾಲ ಚೆನ್ನಾಗಿ ಕೊಡುವುದು. ಈ ಚಿಕಿತ್ಸೆಯನ್ನು 7ರಿಂದ 14 ದಿನಗಳವರೆಗೆ  ಮಾಡಿದಾಗ ನೋವಿನ ನಿವಾರಣೆಯಾಗುತ್ತದೆ
ಸಿ)ಜಂಬಿರ ಪಿಂಡಸ್ವೇದ: ನಿಂಬೆಹಣ್ಣು, ತೈಲ, ಅರಶಿನ, ಸೈಂಧವ, ಕೊಬ್ಬರಿತುರಿ ಇವುಗಳನ್ನೆಲ್ಲ ಸೇರಿಸಿ ಒಂದು ಬಟ್ಟೆಯಲ್ಲಿ ಪೊಟ್ಟಲಿ ಕಟ್ಟಿ ಬಿಸಿ ಎಣ್ಣೆಯಲ್ಲಿ ಅದ್ದಿ ನೋವಿರುವ ಗಂಟಿಗೆ 30-45 ನಿಮಿಷಗಳ ಕಾಲ ಶಾಖ ಕೊಡಲಾಗುತ್ತದೆ. ಈ ಚಿಕಿತ್ಸೆ ಗಂಟುಗಳಲ್ಲಿ ಸ್ತಬ್ಧತೆ ನಿವಾರಣೆ ಮಾಡಿ ಅವುಗಳ ಚಲನೆಗೆ ಹೆಚ್ಚಿನ ಸಾಮರ್ಥ್ಯ ಕೊಡುತ್ತದೆ.
ಡಿ) ಮಾಷಪಿಂಡ ಸ್ವೇದ: ಉದ್ದಿನ ಬೇಳೆ, ಕಷಾಯ, ಹಾಲು ಸೇರಿಸಿ ಅವುಗಳು ಚೆನ್ನಾಗಿ ಬೆಂದ ಮೇಲೆ ಪೊಟ್ಟಲಿ ಕಟ್ಟಿ ತೈಲ ಹಚ್ಚಿದ ಗಂಟುಗಳಿಗೆ ಒಳ್ಳೆಯದಾಗಿ ಅಭ್ಯಂಗ ಅನಂತರ ಸ್ವೇದ ಕೊಡಲಾಗುವುದು. ಈ ಚಿಕಿತ್ಸೆಯಿಂದ ಸಂಧಿವಾತ ವ್ಯಾಧಿಯಲ್ಲಿ ಮಾಂಸಪೇಶಿಗಳಿಗೆ ಬಲ ಕೊಡುತ್ತಾ, ಗಂಟುಗಳಿಗೆ ಒಳ್ಳೆಯ ಪೋಷಣೆ ನೀಡಿ ನೋವು ನಿವಾರಣೆಯಾಗುತ್ತದೆ. 

ಸಂಧಿವಾತ ಉಂಟಾಗಲು ಹಲವು ಕಾರಣಗಳು
1.
ವೃದ್ಧಾಪ್ಯ
ವಯಸ್ಸಾಗುತ್ತ ಹೋದಂತೆ ಗಂಟುಗಳ ಸವಕಳಿಕೆ ಸರ್ವಸಾಮಾನ್ಯ.
2. ಅತಿಯಾದ ಬೊಜ್ಜು
ದೇಹದ ತೂಕ ಹೆಚ್ಚಾದಂತೆ   ಗಂಟುಗಳ ಮೇಲೆ ಒತ್ತಡ ಹೆಚ್ಚಾಗಿ ಬಿದ್ದು ಅವುಗಳ ಸವಕಳಿಕೆ ಉಂಟಾಗುತ್ತದೆ.
3. ಅಪಘಾತಗಳು
ಅಪಘಾತಗಳಿಂದ ಗಂಟುಗಳಿಗೆ ಪೆಟ್ಟಾದಾಗ, ಅವುಗಳ ಬಗ್ಗೆ ಜಾಗ್ರತೆ ವಹಿಸದೆ ಇದ್ದಾಗ-ಈ ಗಂಟುಗಳ ಮೇಲೆ ಒತ್ತಡ ಬಿದ್ದಾಗಲೂ ಎಲುಬುಗಳ ಸವಕಳಿಕೆ ಉಂಟಾಗಿ ಸಂಧಿವಾತ ವ್ಯಾಧಿ ಉಂಟಾಗುತ್ತದೆ.
4. ಕೆಲವು ವೃತ್ತಿಗಳು
ಹೆಚ್ಚು ಹೊತ್ತು ನಿಂತೇ ಇರುವ ವೃತ್ತಿ ಹಾಗೂ ಗಂಟುಗಳ ಮೇಲೆ ಹೆಚ್ಚು ಒತ್ತಡ ಬೀಳುವಂತಹ ಕೆಲಸ ಕಾರ್ಯಗಳಿಂದಲೂ ಎಲುಬುಗಳ ಸವಕಳಿಕೆಯಿಂದ ಸಂಧಿವಾತ ಉಂಟಾಗಬಹುದು.
5. ಆನುವಂಶಿಕ ಕೆಲವರಲ್ಲಿ  ಆನುವಂಶಿಕವಾಗಿ ಎಲುಬು ಹಾಗೂ ಗಂಟುಗಳ ತೊಂದರೆ ಇ¨ªಾಗಲೂ ಸಂಧಿವಾತ ಉಂಟಾಗುವ ಸಂಭವಗಳು ಜಾಸ್ತಿ.
6. ಬೇರೆ ಕಾಯಿಲೆಗಳಿಂದ ಕೆಲವೊಮ್ಮೆ ಆಮವಾತ, ಎಲುಬುಗಳ ಕೆಲವು ರೋಗ ರುಜಿನಗಳಿಂದಲೂ ಸಂಧಿವಾತ ಕಾಯಿಲೆ ಬರಬಹುದು.
7. ಅಸಮರ್ಪಕ ಜೀವನ ಶೈಲಿ ಹಾಗೂ ಆಹಾರಕ್ರಮದಿಂದ ಮತ್ತು ಯುವಕರಲ್ಲಿ ಅತಿಯಾದ ವ್ಯಾಯಾಮದಿಂದಲೂ ಅತಿ ಬೇಗನೆ ಎಲುಬುಗಳ ಸವಕಳಿಕೆಯಿಂದ ಸಂಧಿವಾತ ವ್ಯಾಧಿ ಉಂಟಾಗಬಹುದು. 

ಕಾಯಿಲೆಯ ಲಕ್ಷಣಗಳು
1. ಸಂಧಿಗಳಲ್ಲಿ ನೋವು
2. ಸಂಧಿಗಳ ಸಾಮಾನ್ಯ ಚಲನವಲನಗಳಿಗೆ ತಡೆ.
3. ಮೊಣಕಾಲು ಗಂಟುಗಳಲ್ಲಿ ಸ್ತಬ್ಧತೆ.
4. ಮೊಣಕಾಲು ಗಂಟುಗಳಲ್ಲಿ ಊತ
5. ಮೊಣಕಾಲು ಗಂಟುಗಳಲ್ಲಿ ರೂಕ್ಷತೆಯ ಅನುಭವ.
6. ಗಂಟುಗಳ ಚಲನವಲನದ ಸಮಯದಲ್ಲಿ ಶಬ್ದ ಉತ್ಪನ್ನ.
7. ಸಂಧಿಗಳ ಸವಕಳಿಕೆಯಿಂದ ಸಂಧಿಗಳ ಸ್ಥಿರತೆ ನಾಶ.
8. ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಡೆತಡೆ.
ಆಯುರ್ವೇದ ಚಿಕಿತ್ಸಾ ಸೂತ್ರದಲ್ಲಿ ಬಾಹ್ಯ ಹಾಗೂ ಆಭ್ಯಂತರ ಎಂಬುದಾಗಿ ಎರಡು ವಿಧಗಳಿವೆ.

ಇ) ಇದೇ ಚಿಕಿತ್ಸೆಯನ್ನು ಉಸುಕು (ಮರಳು) ಹಾಗೂ ಬೇರೆ ಬೇರೆ ಚೂರ್ಣಗಳಿಂದಲೂ ಮಾಡಿದಾಗ ನೋವು ಹಾಗೂ ಸ್ತಬ್ಧತೆ ನಿವಾರಣೆ ಆಗುತ್ತದೆ.

ಎಫ್) ಉಪನಾಹ ಸ್ವೇದ: ಈ ಚಿಕಿತ್ಸೆಯಲ್ಲಿ ಕಾಲಿಗೆ ಎಣ್ಣೆಯಿಂದ ಅಭ್ಯಂಗ ಮಾಡಿದ ಅನಂತರ ಹರಳೆಣ್ಣೆಯಲ್ಲಿ ಪ್ಯಾಡ್‌ ಅನ್ನು ಮುಳುಗಿಸಿ ನೋವಿರುವ ಗಂಟಿನ ಸುತ್ತ ಅದನ್ನು ಕಟ್ಟಿ ಬೆವರು ಬರುವವರೆಗೆ ಬಿಸಿ ಶಾಖ ಕೊಟ್ಟು ಅನಂತರ ಏರಂಡ ಪತ್ರವನ್ನು ಆ ನೋವಿರುವ ಗಂಟಿನ ಭಾಗಕ್ಕೆ ಕಟ್ಟುವುದು ಹಾಗೂ 5-6 ತಾಸು ಅದನ್ನು ಹಾಗೆ ಕಟ್ಟಿ ಇಡುವುದು. 5-6 ಗಂಟೆಗಳ ಬಳಿಕ ಕಟ್ಟಿದ ಪ್ಯಾಡ್‌ ಅನ್ನು ಬಿಚ್ಚಿ ಬಿಸಿ ನೀರಿನಲ್ಲಿ ಕಾಲನ್ನು ತೊಳೆಯುವುದು. ಏರಂಡ ತೈಲವು ವಾತಹರ ಗುಣ ಹೊಂದಿರುತ್ತದೆ. ಈ ಉಪನಾಹ ಚಿಕಿತ್ಸೆ ಸ್ನೇಹನ ಹಾಗೂ ಸ್ವೇದನ   ಎರಡನ್ನೂ ಒಳಗೊಂಡಿರುವುದರಿಂದ ಗಂಟುಗಳ ಸ್ವಾಸ್ಥ್ಯಕ್ಕೆ ಶ್ರೇಷ್ಠ ಚಿಕಿತ್ಸೆಯಾಗಿದೆ.
ಜಿ) ಜಾನು ಬಸ್ತಿ: ಮೊಣಕಾಲು ಗಂಟಿನ ಹಿಂಬದಿ ಕೆಲವೊಮ್ಮೆ ಮುಂದಿನ ಭಾಗಕ್ಕೆ ಉದ್ದಿನ ಹಿಟ್ಟಿನಿಂದ ಕಟ್ಟೆಯನ್ನು  ಕಟ್ಟಿ ಆ ಕಟ್ಟೆಯೊಳಗೆ ಔಷಧಯುಕ್ತ ತೈಲವನ್ನು  ಸುಖೋಷ್ಣ ತಾಪಮಾನವಿಟ್ಟು 30 -45 ನಿಮಿಷಗಳವರೆಗೆ ಹಾಗೆ ನಿಲ್ಲಿಸಲಾಗುತ್ತದೆ. ಅನಂತರ ಆ ತೈಲವನ್ನು ತೆಗೆದ ಬಳಿಕ ಆ ಕಟ್ಟೆಯನ್ನು ಬಿಚ್ಚಿ ಒಳ್ಳೆ ಅಭ್ಯಂಗ ಹಾಗೂ ಸ್ವೇದನ ಚಿಕಿತ್ಸೆ ಕೊಡಲಾಗುತ್ತದೆ.

– ಮುಂದಿನ ವಾರಕ್ಕೆ

– ಡಾ| ಅನುಪಮಾ ವಿ. ನಾಯಕ್‌ , 
ಉಪನ್ಯಾಸಕರು, ಆಯುರ್ವೇದ ವಿಭಾಗ, ಸಿ.ಐ.ಎಂ.ಆರ್‌. ಮಾಹೆ,
ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next