ಹೊಸದಿಲ್ಲಿ: ನಿರ್ಮೋಹಿ ಅಖಾಡ ಅಥವಾ ನಿರ್ಮೋಹಿ ಅಖಾರ ಒಂದು ಹಿಂದೂ ಧಾರ್ಮಿಕ ಗುಂಪು. ಶ್ರೀರಾಮನ ಭಕ್ತರು ಹಾಗೂ ಹನುಮಂತನ ಅನುಯಾಯಿಗಳು ಇದರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ನಿರ್ಮೋಹ ಎಂದರೆ ಮೋಹವಿಲ್ಲದ ಬಂಧನದ ಬೆಸುಗೆಯುಳ್ಳವರು ಒಟ್ಟಾಗಿ ಇರುವ ಗುಂಪು ಎನ್ನಬಹುದು. ಲೌಕಿಕ ಆಸಕ್ತಿ ಇರದ ಸಾಧು ಸಂತರು ಹೆಚ್ಚಾಗಿ ಈ ಗುಂಪಿನ ಸದಸ್ಯರಾಗಿದ್ದಾರೆ. ಮಹಾಂತ ಭಾಸ್ಕರ್ ದಾಸ್ ಮುಖ್ಯಸ್ಥರಾಗಿರುವ ವೈಷ್ಣವ ಸಂಪ್ರದಾಯ ಪಾಲಕರಾದ 14 ಅಖಾಡಗಳಲ್ಲಿ ನಿರ್ಮೋಹಿ ಅಖಾಡ ಕೂಡಾ ಒಂದು. ಅಖಿಲ ಭಾರತೀಯ ಅಖಾಡ ಪರಿಷದ್ ಇದಕ್ಕೆ ಮುಖ್ಯ ಸಂಸ್ಥೆಯಾಗಿದೆ.
1934 ರಿಂದ 1949ರ ಡಿಸೆಂಬರ್ 16ರ ವರೆಗೆ ವಿವಾದಿತ ಸ್ಥಳವು ಸಂಪೂರ್ಣ ನಿಮೋಹಿ ಅಖಾಡದ ಸುಪರ್ದಿಯಲ್ಲಿತ್ತು. ಮುಸ್ಲಿಮರು ವಿವಾದಿತ ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ಪ್ರತೀನಿತ್ಯ ಐದು ಬಾರಿ ನಮಾಜ್ ಮಾಡುತ್ತಿರಲಿಲ್ಲ. ಶುಕ್ರವಾರ ಮಾತ್ರ ಪೊಲೀಸ್ ಭದ್ರತೆಯಲ್ಲಿ ನಮಾಜ್ ಮಾಡಲಾಗುತ್ತಿತ್ತು. ಯಾವ ಜಾಗದಲ್ಲಿ ನಿತ್ಯ ಪ್ರಾರ್ಥನೆ ನಡೆಯುವುದಿಲ್ಲವೋ ಅದನ್ನು ಮಸೀದಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನಿರ್ಮೋಹಿ ಅಖಾಡ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಾ ಬಂದಿತ್ತು.
1934ರಿಂದಲೂ ವಿವಾದಿತ 2.77 ಎಕರೆ ಪ್ರದೇಶದ ಮೇಲೆ ನಿರ್ಮೋಹಿ ಅಖಾಡ ಹಕ್ಕು ಪ್ರತಿಪಾದನೆ ಮಾಡುತ್ತಲೇ ಬಂದಿದೆ. ಇದರ ಸಂಪೂರ್ಣ ಸ್ವಾಧೀನ ಹಾಗೂ ನಿರ್ವಹಣೆ ನಮಗೆ ಸೇರಿದ್ದಾಗಿದೆ. 1949ರ ಡಿಸೆಂಬರ್ 16ರಂದು ರಾತ್ರಿ ವಿವಾದಿತ ಕಟ್ಟಡದಲ್ಲಿ ರಾಮನ ವಿಗ್ರಹಗಳನ್ನೂ ಸ್ಥಾಪಿಸಲಾಯಿತು. 1960ರ ನಂತರದಲ್ಲಿ ಸುನ್ನಿ ವಕ್ಫ್ ಬೋರ್ಡ್ ಆ ಜಾಗದ ಮೇಲೆ ಹಕ್ಕು ಪ್ರತಿಪಾದನೆ ಮಾಡಿತ್ತು, ಎಂದು ನಿರ್ಮೋಹಿ ಅಖಾಡದ ಪರವಾದ ವಕೀಲರು ನ್ಯಾಯಪೀಠಕ್ಕೆ ಮನವರಿಕೆ ಮಾಡುತ್ತಾ ಬಂದಿದ್ದಾರೆ.
2010ರಲ್ಲಿ ಅಲಹಾಬಾದ್ ಹೈಕೋರ್ಟ್ ಅಯೋಧ್ಯೆಯ ವಿವಾದಿತ 2.77 ಎಕರೆ ಪ್ರದೇಶವನ್ನು ನಿರ್ಮೋಹಿ ಅಖಾಡ, ರಾಮ್ ಲಲ್ಲಾ ಟ್ರಸ್ಟ್ ಹಾಗೂ ಸುನ್ನಿ ವಕ್ಫ್ ಬೋರ್ಡ್‌ಗೆ ಸಮನಾಗಿ ಹಂಚಿಕೆ ಮಾಡಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹಲವು ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿದ್ದವು.
ಹೀಗೆ ಅಯೋಧ್ಯೆಯ ರಾಮಜನ್ಮಭೂಮಿ ವಿವಾದದಲ್ಲಿ ನಿರ್ಮೋಹಿ ಅಖಾಡ ಸಹ ಪ್ರಮುಖ ದಾವೇದಾರನಾಗಿ ಗುರುತಿಸಿಕೊಂಡಿದೆ. ಆದರೆ ಇಂದು ಸಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಠವು ತನ್ನ ತೀರ್ಪಿನಲ್ಲಿ ಈ ವಿವಾದಿತ ಸ್ಥಳದ ಮೇಲೆ ನಿರ್ಮೋಹಿ ಅಖಾಡದ ಹಕ್ಕನ್ನು ನಿರಾಕರಿಸಿ ತೀರ್ಪನ್ನು ನೀಡಿದೆ.