Advertisement

ಅಯೋಧ್ಯೆ ಟ್ರಸ್ಟ್‌ ಗೌರವ ಸಮಗ್ರ ಆಸ್ತಿಕ ಸಮಾಜಕ್ಕೆ ಅರ್ಪಣೆ

10:09 AM Feb 08, 2020 | mahesh |

ಉಡುಪಿ: ಅಯೋಧ್ಯೆ ರಾಮಮಂದಿರ ಬಗ್ಗೆ 1980ರ ದಶಕದಿಂದ ನಿರಂತರವಾಗಿ ಹೋರಾಡಿದ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪ್ರತಿನಿಧಿಯಾಗಿ ಅವರ ಪಟ್ಟಶಿಷ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಕೇಂದ್ರ ಸರಕಾರ ರಾಮಮಂದಿರ ನಿರ್ಮಾಣ ಜವಾಬ್ದಾರಿ ಹೊತ್ತ “ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ’ ಟ್ರಸ್ಟ್‌ನ ಟ್ರಸ್ಟಿಯಾಗಿ ನಿಯೋಜಿಸಿದೆ. ಇದು ಸಮಸ್ತ ಆಸ್ತಿಕ ವರ್ಗಕ್ಕೆ ವಿಶೇಷವಾಗಿ ದಕ್ಷಿಣ ಭಾರತದ ಸಾಧು ಸಂತರು, ಆಸ್ತಿಕ ವರ್ಗಕ್ಕೆ ಸಂದ ಗೌರವವಾಗಿದೆ ಮತ್ತು ಇದನ್ನು ಇದೇ ಅನುಸಂಧಾನದಲ್ಲಿ ಸಮರ್ಪಿಸುತ್ತಿದ್ದೇನೆ ಎಂದು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಅವರೊಂದಿಗೆ “ಉದಯವಾಣಿ’ ನಡೆಸಿದ ಮಾತುಕತೆ ಸಾರಾಂಶ ಹೀಗಿದೆ:

Advertisement

 ದೇಶ ಮಟ್ಟದ ದೊಡ್ಡ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಇದೆ. ಇದನ್ನು ಯಾವ ರೀತಿಯಲ್ಲಿ ಸ್ವೀಕರಿಸುತ್ತೀರಿ?
ದಕ್ಷಿಣ ಭಾರತದಿಂದ ಬೇರಾರೂ ಟ್ರಸ್ಟಿಗಳಿಲ್ಲ. ಹೀಗಾಗಿ ಇದು ದಕ್ಷಿಣ ಭಾರತಕ್ಕೆ ಸಂದ ಗೌರವ. ಎಲ್ಲ ಸಾಧು ಸಂತರು, ಸಜ್ಜನ ವರ್ಗಕ್ಕೆ ಇದನ್ನು ಸಮರ್ಪಿಸುತ್ತೇವೆ. ಗುರುಗಳು ಮಾಡಿದ ಸೇವೆಗಾಗಿ ಈ ಗೌರವ ಬಂದಿದೆ. ರಾಮಮಂದಿರ ನಿರ್ಮಾಣದಲ್ಲಿ ಸೇವೆ ಸಲ್ಲಿಸುವ ಪ್ರಸಾದ ಎಂದು ಸಂತೋಷದಿಂದ ಸ್ವೀಕರಿಸುತ್ತೇವೆ.

 ಗುರುಗಳು ಹಲವು ದಶಕಗಳ ಕಾಲ ಎಡೆಬಿಡದೆ ಹೋರಾಟ ನಡೆಸಿದ್ದರು. ನೀವೂ ಅದೇ ವೇಗದಲ್ಲಿ ಹೋಗುವಿರಾ?
ಅಯೋಧ್ಯೆ ಹೋರಾಟ ಶತಶತ ಮಾನಗಳ ಕಾಲದಿಂದ ನಡೆದು ಬಂದಿದೆ. ಇನ್ನೂ ಇದು ಬಳಲಬಾರದು. ನಮ್ಮ ವೇಗಕ್ಕಿಂತ ಅಲ್ಲೇನು ಅಗತ್ಯವಿದೆ ಎಂಬುದನ್ನು ತಿಳಿದು ಅದಕ್ಕೆ ತಕ್ಕಂತೆ ನಾವು ಹೋಗಬೇಕಾಗಿದೆ.

 ಟ್ರಸ್ಟ್‌ ರಚನೆಗೂ ಮುನ್ನ ಯಾರದ್ದಾದರೂ ಸೂಚನೆ ಬಂದಿತ್ತೆ?
ವಿಶ್ವ ಹಿಂದೂ ಪರಿಷತ್‌ನ ಚಂಪತ್‌ ರಾಯ್‌ ಕರೆ ಮಾಡಿ, ಇದನ್ನು ಒಪ್ಪಿಕೊಳ್ಳಬೇಕು ಎಂದಿದ್ದರು. ಅನಂತರ ಇಂದು ಕರೆ ಮಾಡಿ ಟ್ರಸ್ಟಿಯಾಗಲು ಒಪ್ಪಿಗೆ ಪತ್ರವನ್ನು ಕಳುಹಿಸಿಕೊಡಬೇಕೆಂದು ತಿಳಿಸಿದರು.

ಅಯೋಧ್ಯಾ ಚಳವಳಿಯಲ್ಲಿ ತಾವು ಪಾಲ್ಗೊಂಡಿದ್ದೀರಾ?
1992ರ ಡಿ. 6ರಂದು ಉಡುಪಿಯಿಂದ ಎಲ್ಲ ಸ್ವಾಮೀಜಿಯವರು ಅಯೋಧ್ಯೆ ಕರಸೇವೆಗೆ ಹೋಗಿದ್ದರು. ಪೂಜೆಗಾಗಿ ಒಬ್ಬರು ನಿಲ್ಲಬೇಕಾಯಿತು. ಆದ್ದರಿಂದ ಉಳಿದವರೆಲ್ಲ ಹೋಗಿ ನಾವು ಮಾತ್ರ ಉಳಿದೆವು ಅದಕ್ಕೂ ಮುನ್ನ ಮುಲಾಯಂ ಸಿಂಗ್‌ ಸರಕಾರ ವಿರುವಾಗ ಒಮ್ಮೆ ಗೋಲಿಬಾರ್‌ ಆಗಿತ್ತು. ಆಗ ನಡೆದ ಚಳವಳಿಯಲ್ಲಿ ಪಾಲ್ಗೊಂಡಿದ್ದೆ. ಅನಂತರ ಗುರುಗಳ ಜತೆ ವಿವಿಧ ಸಭೆಗಳಲ್ಲಿ ಪಾಲ್ಗೊಂಡಿದ್ದೆ. ಇತ್ತೀಚೆಗೆ ಪ್ರಯಾಗದಲ್ಲಿ ನಡೆದ ಮಾಘ ಮೇಳದಲ್ಲಿ ಭಾಗವಹಿಸಿದ್ದೆ.

Advertisement

 ಮಂದಿರ ನಿರ್ಮಾಣ ಕುರಿತು ಏನೇನು ಸಿದ್ಧತೆ ನಡೆದಿದೆ?
ನಾವು ಕೇಳಿದ, ನೋಡಿದ ಪ್ರಕಾರ ಮಂದಿರ ನಿರ್ಮಾಣಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳೂ ನಡೆದಿವೆ. ಆ ಸ್ಥಳದಲ್ಲಿ ಅವುಗಳನ್ನು ಜೋಡಿಸಿದರೆ ಸಾಕು. ಆದರೆ ಇದಾವುದೂ ನಮ್ಮ ನಿಖರ ಮಾಹಿತಿಯಲ್ಲ. ಏಕೆಂದರೆ ಸ್ಪಷ್ಟವಾಗಿ ನಾವು ಇದಾವುದನ್ನೂ ನೋಡಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಟ್ರಸ್ಟ್‌ನ ಸಭೆ ನಡೆಯಬಹುದು. ಅಲ್ಲಿ ಒಂದು ನಿಖರವಾದ ರೂಪರೇಖೆ ನಿರ್ಧಾರವಾಗಬಹುದು.

ಗುರುಗಳು ಹರಿಪಾದ ಸೇರುವ ಸುಮಾರು ಒಂದು ತಿಂಗಳ ಹಿಂದೆ ಈ ಕುರಿತು ತಿಳಿಸಿದ್ದರು. ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ ರಚನೆಯಾಗುತ್ತದೆ ಎಂಬ ಮಾತುಗಳು ಕೇಳಿಬರುವಾಗ ವಿಹಿಂಪ ಪದಾಧಿಕಾರಿಗಳು ಗುರುಗಳಲ್ಲಿ ನಿಮ್ಮ ಮಠದಿಂದ ಪ್ರತಿನಿಧಿಯಾಗಬೇಕು ಎಂದು ತಿಳಿಸಿದ್ದರು. ಆಗ ಗುರುಗಳು “ನಮಗೆ ವಯಸ್ಸಾ ಯಿತು. ನಮ್ಮ ಶಿಷ್ಯರನ್ನು ನೇಮಿಸಿಕೊಳ್ಳಿ’ ಎಂದು ಹೇಳಿದರು. ಅನಂತರ ನಮಗೂ, “ಟ್ರಸ್ಟ್‌ ಪ್ರಸ್ತಾವ ಬಂದರೆ ಒಪ್ಪಿಕೊಳ್ಳಿ’ ಎಂದು ಹೇಳಿದ್ದರು.
– ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next