ಕದ್ರಿ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಕದ್ರಿ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯದ ಸಭಾಂಗಣದಲ್ಲಿ ಅಯೋಧ್ಯಾ ಶೌರ್ಯ ದಿವಸ್ ಕಾರ್ಯಕ್ರಮ ಜರಗಿತು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಹಿಂದೂ ಸಂಘಟನೆಗಳ ನೇತೃತ್ವದಲ್ಲಿ 1990 ಹಾಗೂ 1992ರಲ್ಲಿ ಜರಗಿದ ಅಯೋಧ್ಯಾ ರಾಮಮಂದಿರ ಕರಸೇವೆ ನಮ್ಮ ಪಾಲಿನ ನಿಜವಾದ ಸ್ವಾತಂತ್ರ್ಯ ಹೋರಾಟವಾಗಿತ್ತು ಎಂದರು.
1990ರ ಸಂದರ್ಭದಲ್ಲಿ ಅಯೋಧ್ಯೆಗೆ ಹೋದವರು ಹಿಂದಿರುಗಿ ಬರುತ್ತಾರೆ ಎಂಬ ನಂಬಿಕೆಯೇ ಇಲ್ಲವಾಗಿತ್ತು. ಕಂಡಲ್ಲಿ ಗುಂಡು ಹಾಕುವ ಆದೇಶ ಅಲ್ಲಿ ಜಾರಿಯಲ್ಲಿತ್ತು. ಯಾವುದನ್ನೂ ಲೆಕ್ಕಿಸದೆ ಜಿಲ್ಲೆಯಿಂದ 1,000ಕ್ಕೂ ಮಿಕ್ಕಿ ಕಾರ್ಯಕರ್ತರು ಅಯೋಧ್ಯೆಗೆ ತೆರಳಿ ಭಗವಾಧ್ವಜ ಹಾರಿಸಿದ್ದೆವು ಎಂದು ಸ್ಮರಿಸಿದರು.
ಅಂದು ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತ ಇದ್ದುದರಿಂದ ಅಲ್ಲಿಗೆ ಹೋಗಲು ಯಾವುದೇ ತೊಂದರೆ ಇರಲಿಲ್ಲ. ನಮ್ಮ ಜಿಲ್ಲೆಯಿಂದ 3,200 ಮಂದಿ ಕರಸೇವಕರು ಅಯೋಧ್ಯೆಗೆ ತೆರಳಿದ್ದೆವು. ನಮ್ಮ ಪಾಲಿನ ವಿಜಯ್ ದಿವಸ್ ಅದಾಗಿತ್ತು ಎಂದು ನಳಿನ್ ಕುಮಾರ್ ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಮಾತನಾಡಿದರು. ಧರ್ಮ ಸಂಸತ್ ಮಂಗಳೂರು ಘಟಕದ ಉಪಾಧ್ಯಕ್ಷ ನಿಟ್ಟೆ ಶಶಿಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಕಾರ್ಯದರ್ಶಿ ಗೋಪಾಲ್, ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಉಪಸ್ಥಿತರಿದ್ದರು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕರಸೇವೆಯಲ್ಲಿ ಭಾಗವಹಿಸಿದ್ದವರನ್ನು ಸಮ್ಮಾನಿಸಲಾಯಿತು.