ಅಯೋಧ್ಯೆ: ಇಲ್ಲಿನ ರಾಮ ಮಂದಿರದ ಪ್ರಾಣಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವ ಮುಂದಿನ ವರ್ಷ ಜನವರಿ 11ರಂದು ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟ್ ಮುಖ್ಯಸ್ಥ ಚಂಪತ್ ರಾಯ್ ಗುರುವಾರ(ಡಿ12) ತಿಳಿಸಿದ್ದಾರೆ.
ಈ ವರ್ಷ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ್ ಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭವನ್ನು ನಡೆಸಲಾಗಿತ್ತು.
ಹಿಂದೂ ಸಂಪ್ರದಾಯದಂತೆ ತಿಥಿ ಲೆಕ್ಕಾಚಾರದಲ್ಲಿ 11 ದಿನಗಳ ಮೊದಲೇ ಆಚರಣೆ ಮಾಡಲಾಗುತ್ತಿದೆ ಎಂದು ರಾಯ್ ಸುದ್ದಿಗಾರರಿಗೆ ತಿಳಿಸಿದರು.
ರಾಮಮಂದಿರ ಸಂಕೀರ್ಣದಲ್ಲಿ ದಶಾವತಾರ, ಶೇಷಾವತಾರ, ನಿಷಾದರಾಜ, ಶಬರಿ, ಅಹಲ್ಯಾ, ಸಂತ ತುಳಸೀದಾಸರ ದೇವಾಲಯಗಳು ಸೇರಿದಂತೆ 18 ಹೊಸ ದೇವಾಲಯಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕೆಲಸವು ವೇಗವಾಗಿ ಪ್ರಗತಿಯಲ್ಲಿದ್ದು ಎಲ್ಲಾ ಬೆಳವಣಿಗೆಗಳು ಯೋಜಿತ ದಿನಾಂಕಗಳಿಗೆ ಅನುಗುಣವಾಗಿವೆ ಎಂದು ರಾಯ್ ಹೇಳಿದರು.
ರಾಮ್ ಲಲ್ಲಾಗೆ ನೀಡಲಾದ ‘ಪ್ರಸಾದ’ದ ಸುತ್ತಲಿನ ವದಂತಿಗಳನ್ನು ಅವರು ನಿರಾಕರಿಸಿ, ಕಳೆದ 30 ವರ್ಷಗಳಿಂದ ರಾಮ ಮಂದಿರದ ಆವರಣಕ್ಕೆ ಹೊರಗಿನಿಂದ ಯಾವುದೇ ಪ್ರಸಾದ ತಂದಿಲ್ಲ. ಭಕ್ತರಿಗೆ ವಿತರಿಸುವ ಪ್ರಸಾದವನ್ನು ದೀರ್ಘಕಾಲದವರೆಗೆ ಹಾಳಾಗದಂತೆ ದೇವಾಲಯದ ಸಂಕೀರ್ಣದಲ್ಲೇ ತಯಾರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
‘ಚಪ್ಪನ್ ಭೋಗ್’ ನಂತಹ ಕೆಲವು ಹೊರಗಿನ ಪ್ರಸಾದವನ್ನು ಸಂಪೂರ್ಣ ತಪಾಸಣೆ ಮತ್ತು ಕಾಳಜಿಯ ನಂತರ ಮಾತ್ರ ರಾಮ್ ಲಲ್ಲಾಗೆ ಅರ್ಪಿಸಲಾಗುತ್ತದೆ ಎಂದು ರಾಯ್ ಹೇಳಿದರು.