ಕೊಪ್ಪಳ: ಅಯೋಧ್ಯೆ ರಾಮಮಂದಿರ ಹಾಗೂ ಕಿಷ್ಕಿಂದೆಯ ಅಂಜನಾದ್ರಿ ಜೋಡಣಾ ವ್ಯವಸ್ಥೆಯಾಗಬೇಕು. ಇದೊಂದು ಪ್ರವಾಸಿ ತಾಣವಾಗಬೇಕೆಂಬ ಉದ್ದೇ ಶದಿಂದ ನಮ್ಮ ಸರ್ಕಾರ ಇದನ್ನು ಕಾರಿಡಾರ್ ಮಾಡುವ ಯೋಚನೆಯಲ್ಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಶಶಿಕಲಾ ಜೊಲ್ಲೆ ಅವರು ಹೇಳಿದರು.
ನಗರದಲ್ಲಿ 76ನೇ ಸ್ವಾತಂತ್ರ್ಯೋತ್ಸವದ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಅಂಜನಾದ್ರಿ ಪರ್ವತ ಹುನುಮನ ಜನ್ಮ ಸ್ಥಳವಾಗಿದ್ದು, ಇದು ನನ್ನ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಹಿನ್ನೆಲೆಯಲ್ಲಿ ಈಗಾಗಲೇ 120 ಕೋಟಿ ರೂ. ಯೋಜನೆಗೆ ಸಿಎಂ ಬೊಮ್ಮಾಯಿ ಅವರು ಈಚೆಗೆ ಚಾಲನೆ ನೀಡಿದ್ದಾರೆ.
ರಾಮಮಂದಿರ ಅಡಿಗಲ್ಲಿಗೆ ಪಿಎಂ ಮೋದಿ ಅವರು ಚಾಲನೆ ನೀಡಿದ್ದಾರೆ. ಕಿಷ್ಕಿಂದೆ ಅಂಜನಾದ್ರಿ ಅಭಿವೃದ್ಧಿಗೆ ಸಿಎಂ ಚಾಲನೆ ನೀಡಿದ್ದಾರೆ. ಅಂಜನಾದ್ರಿ-ರಾಮ ಮಂದಿರ ಟೆಂಪಲ್ ಟೂರಿಸ್ಟ್ ಆಗಬೇಕೆಂದು ಚಿಂತನೆ ನಡೆಸಿದೆ ಎಂದರು.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 35 ಸಾವಿರ ದೇವಸ್ಥಾನ ಬರುತ್ತವೆ. 207 ದೇವಸ್ಥಾನ ಎ ಗ್ರೇಡ್, 34 ಸಿ ಗ್ರೇಡ್‌ನಲ್ಲಿವೆ. ಅಲ್ಲಿನ ಅರ್ಚಕರಿಗೆ ಜೀವ ವಿಮೆ ಮಾಡಿಸಲು ಕ್ರಮ ಕೈಗೊಂಡಿದ್ದೇವೆ. ಜೊತೆಗೆ ಕಾಶಿ ದರ್ಶನ ಮಾಡುವುದು ಎಲ್ಲರ ಆಸೆ ಇರುತ್ತದೆ. ರಾಜ್ಯದಿಂದ ಪ್ರತಿವರ್ಷ 30 ಸಾವಿರ ಭಕ್ತರು ಕಾಶಿಯ ದರ್ಶನ ಪಡೆಯುತ್ತಾರೆ. ಈಗ 500 ಜನರು ಕಾಶಿಯಾತ್ರೆ ಹೋಗಿ ಬಂದಿದ್ದಾರೆ. ಅವರಿಗೆ 5 ಸಾವಿರ ಸಹಾಯಧನ ಕೊಟ್ಟಿದ್ದೇವೆ. ಕಾಶಿಗೆ ಹೋಗಿ ಬಂದವರಿಗೆ ಡಿಬಿಟಿ ಮೂಲಕ ಸಹಾಯಧನ ದೊರೆಯಲಿದೆ. ಕೇಂದ್ರ ಸರ್ಕಾರ ಭಾರತ ಗೌರವ್ ಯೋಜನೆ ಆರಂಭಿಸಿದ್ದು, ರೈಲ್ವೇ ಇಲಾಖೆಯಿಂದ 14 ಬೋಗಿಗಳ ರೈಲು ಸಿದ್ಧಪಡಿಸುತ್ತಿದ್ದು, ಅದರಲ್ಲಿ 11 ಬೋಗಿ ಯಾತ್ರಿಕರಿಗೆ, 1 ಬೋಗಿ ದೇವಸ್ಥಾನದಂತೆ ನಿರ್ಮಾಣ ಮಾಡಿರುತ್ತೆ. ಕಾಶಿಗೆ ಹೋಗುವವರಿಗೆ ಇದರ ಅನುಕೂಲ ಮಾಡಿಕೊಟ್ಟಿದೆ. ಊಟ ವಸತಿಯೂ ಇದೆ. ಈ ರೈಲು ಬೆಂಗಳೂರು-ಕಾಶಿ-ಅಯೋಧ್ಯೆ ರಾಮ ಮಂದಿರ-ಪ್ರಯಾಗರಾಜ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ಸಾಗಲಿದೆ. ನಾವು ರೈಲು ವೀಕ್ಷಣೆ ಮಾಡಿದ್ದೇವೆ. ಆ ರೈಲು ಮೈಸೂರಿಗೆ ಮಾರ್ಪಾಡು ಮಾಡಲು ಕಳುಹಿಸಿದ್ದು, ಒಳಗೆ ಹೊಸ ಕೋಚ್ ವ್ಯವಸ್ಥೆ ಮಾಡಿದೆ. ರೈಲಿನ ಹೊರಗೆ ಕರ್ನಾಟಕದ ಎ ಗ್ರೇಡ್‌ನ ದೇವಸ್ಥಾನಗಳ ಪೇಂಟಿಂಗ್ ಮಾಡಿಸಿದ್ದೇವೆ. ಒಳಗೆ ಕಾಶಿ ಪೇಂಟಿಂಗ್ ಇರುತ್ತೆ. ಈ ತಿಂಗಳು ಕೊನೆ ಅಥವಾ ಸೆಪ್ಟೆಂಬರ್ ಮೊದಲ ವಾರ ಈ ರೈಲು ಕಾಶಿಗೆ ತೆರಳಲು ಚಾಲನೆ ನೀಡಲಿದ್ದೇವೆ ಎಂದರು.
ಕಾಶಿ ಯಾತ್ರೆಗೆ ಯಾರು ಬೇಕಾದರೂ ಹೋಗಬಹುದು. ಹೇಗಾದರೂ ಹೋಗಿ ವಾಪಸ್ಸಾಗಲಿ. ಆ ಧರ್ಮ ಈ ಧರ್ಮ ಎನ್ನುವುದಿಲ್ಲ. ಯಾರೇ ಕಾಶಿ ಯಾತ್ರೆಗೆ ತೆರಳಿ ವಾಪಸ್ಸಾದರೂ ನಾವು ಅವರಿಗೆ 5 ಸಾವಿರ ರೂ. ಸಹಾಯಧನ ಅವರ ಖಾತೆಗೆ ಡಿಬಿಟಿ ಮೂಲಕ ಜಮೆ ಮಾಡಲಿದ್ದೇವೆ ಎಂದರು.
ಎ ಗ್ರೇಡ್ ದೇವಸ್ಥಾನ ಅಭಿವೃದ್ಧಿಗೆ 25 ದೇವಸ್ಥಾನ ಗುರುತಿಸಿದೆ. ಮಾಸ್ಟರ್ ಪ್ಲಾನ್‌ನಡಿ ಮೂಲಸೌಕರ್ಯ ಕಲ್ಪಿಸಲು ಮುಂದಾಗಿದ್ದೇವೆ. ಸಿ ಗ್ರೇಡ್ ದೇವಸ್ಥಾನಗಳು ಸೋರುತ್ತಿವೆ. ಅವುಗಳ ಅಭಿವೃದ್ಧಿಗೂ ಮುಂದಾಗಿದ್ದೇವೆ. ದಾನಿಗಳಿಂದಲೂ ನಾವು ಅಭಿವೃದ್ಧಿ ಮಾಡಲು ಚಿಂತನೆ ನಡೆಸಿದ್ದೇವೆ. ಸಪ್ತಪದಿ ಯೋಜನೆಯಡಿ ವಿವಾಹ ಕಾರ್ಯಕ್ರಮ ಕೈಗೊಳ್ಳಲು ಆದೇಶ ಮಾಡಲಾಗಿದೆ. ಅನುದಾನದ ಕೊರತೆಯಿಲ್ಲ. ಎ ಗ್ರೇಡ್‌ನಲ್ಲಿ ಅನುದಾನದ ಸಮಸ್ಯೆಯಿಲ್ಲ. ಬಿ ಗ್ರೇಡ್‌ನಲ್ಲಿ ಕೆಲವು ನಿಯಮಗಳಿವೆ. ಇದನ್ನ ಪರಿಶೀಲನೆ ನಡೆಸಲಿದ್ದೇವೆ ಎಂದರು.