Advertisement

ದಾಳಿಗೆ ನೆರವಾಯ್ತು “ಏಕಾಂಗಿಯಾಗಿ ಓದುವ ಅಭ್ಯಾಸ’!

08:59 PM Aug 03, 2022 | Team Udayavani |

ನವದೆಹಲಿ/ವಾಷಿಂಗ್ಟನ್‌: ಅಮೆರಿಕ ರಹಸ್ಯವಾಗಿ ನಡೆಸಿದ ಕಾರ್ಯಾಚರಣೆಯಿಂದ ಅಲ್‌ಖೈದಾ ಮುಖ್ಯಸ್ಥ ಐಮನ್‌ ಅಲ್‌-ಜವಾಹಿರಿಯನ್ನು ಕೊಂದ ಕಥೆಯೇ ರೋಚಕವಾಗಿದೆ. ಕಾಬೂಲ್‌ನ ಜನನಿಬಿಡ ಸ್ಥಳದಲ್ಲಿ ಇರುವ ಮನೆಯ ಬಾಲ್ಕನಿಯಲ್ಲಿ ನಿಂತು ಏಕಾಂಗಿಯಾಗಿ ಓದುವ ಅಭ್ಯಾಸವೇ ಆತನ ಪ್ರಾಣಕ್ಕೆ ಕಂಟಕವಾಯಿತು ಎಂದು “ದ ನ್ಯೂಯಾರ್ಕ್‌ ಟೈಮ್ಸ್‌’ ವರದಿ ಮಾಡಿದೆ.

Advertisement

ದಶಕಗಳಿಂದ ಶೋಧ ಕಾರ್ಯ ನಡೆಸಿದರೂ ಜವಾಹಿರಿ ಇರುವು ಪತ್ತೆಯಾಗದೇ ಇದ್ದಾಗ ಕೊನೆಯಲ್ಲಿ ಆತ ಕಾಬೂಲ್‌ನಲ್ಲಿ ಇದ್ದಾನೆ ಎಂಬ ಅಂಶ ದೃಢಪಟ್ಟಿತ್ತು. ಇತರರಿಗೆ ಅಪಾಯ ಇಲ್ಲದೆ ಉಗ್ರನನ್ನು ಹೇಗೆ ಸಂಹಾರ ಮಾಡಬಹುದು ಎಂಬ ಬಗ್ಗೆ ಅಮೆರಿಕದ ಸೆಂಟ್ರಲ್‌ ಇಂಟೆಲಿಜೆನ್ಸ್‌ ಏಜೆನ್ಸಿ ತಲೆಕೆಡಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಆತನ ಬಗ್ಗೆ ಅಧ್ಯಯನ ನಡೆಸಲು ನಿಯೋಜಿತನಾಗಿದ್ದ ಅಧಿಕಾರಿಯು, ಜವಾಹಿರಿಯ ಜೀವನ ಕ್ರಮವನ್ನು ಅಧ್ಯಯನ ನಡೆಸಿದ್ದರು.

ಪ್ರತಿ ದಿನ ಬೆಳಗ್ಗೆ ಮನೆಯ ಬಾಲ್ಕನಿಯಲ್ಲಿ ಏಕಾಂಗಿಯಾಗಿ ನಿಂತು ಓದುವುದನ್ನು ಆತ ರೂಢಿಸಿಕೊಂಡಿದ್ದ. ಹೀಗಾಗಿ, ಅದನ್ನೇ ಹಲವು ದಿನಗಳ ಕಾಲ ಅಧ್ಯಯನ ನಡೆಸಿದ ಬಳಿಕ ಜು.30ರಂದು ಸಮಯ ನೋಡಿ ನಿಖರ ದಾಳಿ ಮಾಡಿ ಸಾಯಿಸಲಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮುಂದಿನ ನಾಯಕ ಯಾರು?:
ಉಗ್ರ ಸಂಘಟನೆಯ ಮುಂದಿನ ನಾಯಕನಾಗಿ ಮೊಹಮ್ಮದ್‌ ಸಲಾಹ್ದಿನ್‌ ಝಿದಾನ್‌ ಎಂಬ ಈಜಿಪ್ಟ್ ಮೂಲದ ಉಗ್ರ ಆಯ್ಕೆಯಾಗುವುದು ಖಚಿತವಾಗಿದೆ. ಆದರೆ, ಆತನಿಂದ ಭಾರತಕ್ಕೆ ಯಾವ ರೀತಿಯಾಗಿ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂಬ ಬಗ್ಗೆ ದೇಶದ ಗುಪ್ತಚರ ಸಂಸ್ಥೆಗಳು ಅಧ್ಯಯನ ನಡೆಸುತ್ತಿವೆ. ಜವಾಹಿರಿ ಸಾವಿನಿಂದ ಅಲ್‌-ಖೈದಾಕ್ಕೆ ಆಘಾತ ಉಂಟಾಗಿದೆ ಮತ್ತು ನೂತನ ನಾಯಕ ಉಗ್ರರನ್ನು ಜವಾಹಿರಿಯಂತೆ ಹಿಡಿದಿಟ್ಟುಕೊಳ್ಳಲು ಯಶಸ್ವಿಯಾಗಲಾರ ಎಂದೂ ಅಭಿಪ್ರಾಯಪಟ್ಟಿವೆ.

ಇದೇ ವೇಳೆ ಜವಾಹಿರಿ ಸಾವಿನ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಇರುವ ತನ್ನ ಪ್ರಜೆಗಳು ಎಚ್ಚರದಿಂದ ಇರಬೇಕು ಎಂದು ಅಮೆರಿಕ ಸರ್ಕಾರ ಸುತ್ತೋಲೆ ರವಾನಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next