Advertisement
ಆ ಕಾರನ್ನು ಓಡಿಸುತ್ತಿರುವವನು ವಿಪರೀತ ಕುಡಿದು ಚಿತ್ತಾಗಿರುತ್ತಾನೆ. ಆ ನಶೆಯಲ್ಲೇ ನಾಲ್ಕು ಜನರನ್ನು ಸಾಯಿಸಿ, ಇನ್ನೊಬ್ಬಾಕೆಯ ಕಾಲು ಮುರಿದಿರುತ್ತಾನೆ. ತನಿಖೆ ಶುರುವಾಗುತ್ತದೆ. ಅವರನ್ನೆಲ್ಲಾ ಸಾಯಿಸಿದವ ಪ್ರಭಾವಶಾಲಿಯ ಮಗ. ಅವನು ಇನ್‌ಸ್ಪೆಕ್ಟರ್ ತಂದೆಯ ಮೇಲೆ ಪ್ರಭಾವ ಹಾಕಿ ಕೇಸ್ ಹಳ್ಳ ಹಿಡಿಸುವ ಪ್ರಯತ್ನ ಮಾಡುತ್ತಾನೆ. ಆ ಇನ್‌ಸ್ಪೆಕ್ಟರ್‌ಗೆ ಒಂದು ಕಡೆ ಪ್ರಭಾವಶಾಲಿಯ ಋಣ, ಇನ್ನೊಂದು ಕಡೆ ಸತ್ತವರ ಕುಟುಂಬಗಳಿಗೆ ನ್ಯಾಯ ಕೊಡಿಸುವ ಜವಾಬ್ದಾರಿ.
Related Articles
Advertisement
ಕುಡಿದು ವಾಹನ ಚಲಾಯಿಸಬೇಡಿ ಮತ್ತು ಎಲ್ಲರೂ ತಮ್ಮ ಸಾಮಾಜಿ ಜವಾಬ್ದಾರಿಯನ್ನು ಅರಿತುಕೊಳ್ಳಿ ಎಂಬ ಸಣ್ಣ ಸಂದೇಶವನ್ನು ಮನಮುಟ್ಟುವಂತೆ ಚಿತ್ರಿಸುವ ಪ್ರಯತ್ನ ಮಾಡಲಾಗಿದೆ. ಬಹುಶಃ ಈ ಚಿತ್ರದ ಬಗ್ಗೆ ಬರುವ ಪ್ರಮುಖ ಅಪಸ್ವರ ಎಂದರೆ, ಚಿತ್ರವನ್ನು ಬೇರೆ ತರಹ ಮುಗಿಸಬಹುದಿತ್ತು ಎಂದು. ಅದು ಬಿಟ್ಟರೆ, ಚಿತ್ರದ ಬಗ್ಗೆ ತಪ್ಪು ಹುಡುಕುವುದು ಕಷ್ಟ. ಅಷ್ಟು ಅಚ್ಚುಕಟ್ಟಾಗಿ ಚಿತ್ರ ಮಾಡಿದ್ದಾರೆ ಪಾಟೀಲ್. ಚಿತ್ರದಲ್ಲಿ ಅವರು ಒಂದೇ ಒಂದು ಅನವಶ್ಯಕ ಎಂಬ ಮಾತು, ದೃಶ್ಯ ಸೇರಿಸುವುದಿಲ್ಲ.
ಎಷ್ಟು ಬೇಕೋ ಅಷ್ಟು ಮತ್ತು ಅದನ್ನೂ ಬೇರೆ ತರಹ ನಿರೂಪಿಸುವುದಕ್ಕೆ ಪ್ರಯತ್ನಿಸಿದ್ದಾರೆ ಅವರು. ಒಂದು ಕುಟುಂಬದ ಕಥೆ ಹೇಳುತ್ತಲೇ, ಅಲ್ಲೊಂದು ದೃಶ್ಯ ತೋರಿಸುತ್ತಲೇ, ಅದರ ಮುಂದುವರೆದ ಭಾಗವಾಗಿ ಇನ್ನೊಂದು ಕುಟುಂಬದ ಕಥೆಯನ್ನು ಶುರು ಮಾಡುತ್ತಾರೆ. ಇಲ್ಲಿ ಬರೀ ಚಿತ್ರಕಥೆಯಷ್ಟೇ ಅಲ್ಲ, ಛಾಯಾಗ್ರಹಣ ಮತ್ತು ಸಂಕಲನ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.
ಮತ್ತು ಛಾಯಾಗ್ರಾಹಕ ಸತೀಶ್ ರಾಜೇಂದ್ರನ್ ಹಾಗೂ ಸಂಕಲನಕಾರ ನವೀನ್ ಕುಮಾರ್ ಕೆಲಸವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಅದೇ ರೀತಿ ಎರಿಕ್ ಜಾನ್ಸನ್ ಹಿನ್ನೆಲೆ ಸಂಗೀತ ಸಹ ಗಮನಸೆಳೆಯುತ್ತದೆ. ಚಿತ್ರದಲ್ಲಿ ಎಲ್ಲಾ ಹೊಸ ಮುಖಗಳೇ. ಅದ್ಭುತ ಅಂತಲ್ಲದಿದ್ದರೂ ಎಲ್ಲರಿಂದ ಗಮನಸೆಳೆಯುವ ಅಭಿನಯವನ್ನು ತೆಗೆಸಿದ್ದಾರೆ ಪಾಟೀಲ್. ಆ ಮಟ್ಟಿಗೆ ಎಲ್ಲರ ಶ್ರಮ ಚಿತ್ರದಲ್ಲಿ ಎದ್ದು ಕಾಣುತ್ತದೆ.
ಚಿತ್ರ: ಇದೀಗ ಬಂದ ಸುದ್ದಿನಿರ್ಮಾಣ: ಎಸ್.ಆರ್. ಪಾಟೀಲ್
ನಿರ್ದೇಶನ: ಎಸ್.ಆರ್. ಪಾಟೀಲ್
ತಾರಾಗಣ: ಬಲರಾಮ್, ಮಾಧವ್, ಶಿವಕುಮಾರ್, ಕಾವ್ಯ, ಲೋಕೇಶ್ವರಿ ಮುಂತಾದವರು * ಚೇತನ್ ನಾಡಿಗೇರ್