Advertisement

ಎಸ್‌ಐಗೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಬೆದರಿಕೆ

04:15 PM May 07, 2022 | Team Udayavani |

ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗೆ ಅವ್ಯಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ ಆಡಿಯೋ ವೈರಲ್‌ ಆಗಿದೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲಂದೂರು ಠಾಣೆಗೆ ಹೊಸದಾಗಿ ನಿಯೋಜನೆಯಾಗಿರುವ ಪಿಎಸ್‌ಐ ರವೀಶ್‌ ಜತೆ ನಡೆದ ಮೊಬೈಲ್‌ ಸಂಭಾಷಣೆ ವೇಳೆ, ನೀನು ಐಜಿಗೆ ಲಂಚ ಕೊಟ್ಟು ಬಂದಿದ್ದೀಯ. ನಿನ್ನನ್ನು ಒದ್ದು ಓಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

Advertisement

ಏನಿದು ಘಟನೆ?

ಪಿಎಸ್‌ಐ ರವೀಶ್‌ ಮಲ್ಲಂದೂರು ಠಾಣೆಗೆ ನಿಯುಕ್ತಿಯಾಗಿದ್ದು, ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಗುರುವಾರ ರಾತ್ರಿ ಕರೆ ಮಾಡಿದ್ದಾರೆ. ಈ ವೇಳೆ ಶಾಸಕ ಎಂ.ಪಿ.ಕುಮಾರಸ್ವಾಮಿ ಯಾರನ್ನು ಕೇಳಿ ಚಾರ್ಜ್‌ ತೆಗೆದುಕೊಂಡಿದ್ದೀಯಾ? ನಿನ್ನನ್ನು ಇಲ್ಲಿಗೆ ಬರಬೇಡ ಎಂದು ಹೇಳಿದ್ದೆ, ಮತ್ಯಾಕೆ ಬಂದಿದ್ದೀಯಾ? ನೀನು ಠಾಣೆಯಲ್ಲಿರಬೇಡ. ವಾಪಸ್‌ ಹೋಗು. ನಾನು ಹೇಳಿದ ಹಾಗೆ ಕೇಳಬೇಕು. ಬೇಕಾದ್ರೆ ರೆಕಾರ್ಡ್‌ ಮಾಡಿಕೋ, ನಾಳೆಯೇ ನಿನ್ನನ್ನು ಡೆಪ್ಯುಟೇಶನ್‌ ಮಾಡಿಸುತ್ತೇನೆ. ಐಜಿಗೆ ಎಷ್ಟು ಲಂಚ ಕೊಟ್ಟು ಇಲ್ಲಿಗೆ ಬಂದಿದ್ದೀಯಾ? ಐಜಿಯಲ್ಲ, ಮೂಡಿಗೆರೆಯಲ್ಲಿ ನಾನೇ ಐಜಿ ಎಂದು ಆವಾಜ್‌ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರವೀಶ್‌, ನಾಳೆಯೇ ನಿಮ್ಮನ್ನು ಬಂದು ನೋಡುತ್ತೇನೆ ಎಂದಿದ್ದಾರೆ. ನನ್ನನ್ನು ನೋಡಲು ಬಂದರೆ ಒದ್ದು ಓಡಿಸುತ್ತೇನೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ನಿಂದಿಸಿದ್ದಾರೆ. ಇಬ್ಬರ ನಡುವಿನ ಸಂಭಾಷಣೆ ರೆಕಾರ್ಡ್‌ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಶಾಸಕರ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಇದು ಹೊಸದೇನಲ್ಲ

ಶಾಸಕ ಎಂ.ಪಿ.ಕುಮಾರಸ್ವಾಮಿ ಇಂತಹ ವರ್ತನೆ ಇದು ಮೊದಲೇನಲ್ಲ. ಈ ಹಿಂದೆ ಅರಣ್ಯ ಅಧಿಕಾರಿಗೆ ಕಚೇರಿಯಲ್ಲೇ ಬೆದರಿಕೆ ಹಾಕಿದ ವಿಡಿಯೋ ವೈರಲ್‌ ಆಗಿತ್ತು. ಮೂಡಿಗೆರೆ ಕ್ಷೇತ್ರದಲ್ಲಿ ಅಧಿಕಾರಿಗಳು ತಮ್ಮ ಮಾತು ಕೇಳದಿದ್ದರೆ ಅವರನ್ನು ನಿಂದಿಸುವುದು, ವರ್ಗಾವಣೆ ಮಾಡಿಸುವುದು ಶಾಸಕರ ಕಾಯಕವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

Advertisement

ಶಾಸಕರಿಂದ ಶಿಫಾರಸು ಪತ್ರ

ಮಲ್ಲಂದೂರು ಠಾಣೆಗೆ ರವೀಶ್‌ ನಿಯುಕ್ತಿಗೆ ಎಂ.ಪಿ.ಕುಮಾರಸ್ವಾಮಿ ಅವರೇ ಶಿಫಾರಸು ಪತ್ರ ನೀಡಿದ್ದು, ಪಶ್ಚಿಮ ವಲಯದ ಐಜಿ ಅವರಿಗೆ ಪತ್ರ ಬರೆದಿದ್ದಾರೆ. ಈ ಶಿಫಾರಸು ಪತ್ರವೂ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಎಂ.ಪಿ.ಕುಮಾರಸ್ವಾಮಿ ನಾನು ಶಿಫಾರಸ್ಸು ಪತ್ರ ನೀಡಿಲ್ಲ. ನನ್ನ ಲೆಟರ್‌ ಹೆಡ್‌ ಪತ್ರ ಕದ್ದು ಈ ರೀತಿ ಮಾಡಿದ್ದಾರೆ. ಈ ಸಂಬಂಧ ಸದನ ಸಮಿತಿಯಲ್ಲಿ ದೂರು ದಾಖಲಿಸುತ್ತೇನೆ ಎಂದರು.

ನಾನು ಪಿಎಸ್‌ಐ ರವೀಶ್‌ಗೆ ಆವಾಜ್‌ ಹಾಕಿರುವುದು ನಿಜ. ನನ್ನ ಅನುಮತಿ ಇಲ್ಲದೆ ನನ್ನ ಕ್ಷೇತ್ರಕ್ಕೆ ಬಂದಿದ್ದಾನೆ. ಎಂಎಲ್‌ಎಗಳು ಅಭಿವೃದ್ಧಿ ವಿಚಾರವಾಗಿ ಅವರಿಗೆ ಬೇಕಾದ ಅಧಿ ಕಾರಿಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಾರೆ. ಈತನಿಗೆ ನೀನು ಬೇಡ ಎಂದು ಹೇಳಿದ್ದೆ. ಐಜಿ ಹೇಳಿದರು ಎಂದು ಬಂದು ರಾತ್ರಿ ಕದ್ದು ಮುಚ್ಚಿ ಚಾರ್ಜ್‌ ತೆಗೆದುಕೊಂಡಿದ್ದಾನೆ. ಯಾರನ್ನು ಕೇಳಿ ಬಂದೆ ಎಂದು ಪ್ರಶ್ನಿಸಿದ್ದಾಗ ಫೋನ್‌ ಸ್ವಿಚ್‌ ಆಫ್‌ ಮಾಡಿದ್ದ. ಐಜಿ ಹೇಳಿದ್ದಾರೆ ಬಂದಿದ್ದೇನೆ ಎಂದ. ಐಜಿಗೆ ಎಲ್ಲಾ ಕ್ಷೇತ್ರಗಳ ಮೇಲೂ ಹಕ್ಕಿಲ್ಲ, ಅಭಿವೃದ್ಧಿ ದೃಷ್ಟಿಯಿಂದ ಅಧಿಕಾರಿಗಳನ್ನು ಎಂಎಲ್‌ಎಗಳು ಬೇಕಾದವರನ್ನು ಹಾಕಿಸಿಕೊಳ್ಳುವುದು ಸಂಪ್ರದಾಯ. ಬಂದ ಹೊಸದರಲ್ಲೇ ಬ್ಲ್ಯಾಕ್‌ಮೇಲ್‌ ತಂತ್ರ ಮಾಡಿದ್ದಾನೆ. ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ. ಶಿಫಾರಸು ಪತ್ರವನ್ನು ನಾನು ನೀಡಿಲ್ಲ. ಯಾರೋ ಮಿಸ್‌ ಆಗಿ ನೀಡಿದ್ದರು. ನನ್ನ ಕ್ಷೇತ್ರದಲ್ಲಿ ಯಾರನ್ನೂ ಬದಲಾಯಿಸಬಾರದು. ನಾನು ಹೇಳುತ್ತೇನೆ ಆಗ ಬದಲಾಯಿಸಿ ಎಂದಿದ್ದೆ. ಮೊದಲು ನೀಡಿದ ಶಿಫಾರಸು ಪತ್ರ ಯಾರೋ ಕಳ್ಳತನ ಮಾಡಿ ನೀಡಿದ್ದಾರೆ. ಸದನ ಸಮಿತಿಗೆ ಪ್ರಕರಣ ದಾಖಲಿಸುತ್ತೇನೆ. ತನಿಖೆ ಮಾಡಿಸುತ್ತೇನೆ. ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಆತ ನನ್ನ ಕ್ಷೇತ್ರಕ್ಕೆ ಬೇಡ. – ಎಂ.ಪಿ.ಕುಮಾರಸ್ವಾಮಿ, ಶಾಸಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next