ಉಡುಪಿ: ಇತ್ತೀಚೆಗೆ ಕರಾವಳಿ ಭಾಗದಲ್ಲಿ ಹೆಚ್ಚು ಮನೆ ಕಳ್ಳತನ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಉಡುಪಿ ಜಿಲ್ಲಾ ಪೊಲೀಸರು ಜಿಲ್ಲಾದ್ಯಂತ ಜಾಗೃತಿ ಕಾರ್ಯ ನಡೆಸುತ್ತಿದ್ದಾರೆ. ಮನೆಕಳ್ಳತನ, ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್ ಕಳವು ಸಹಿತ ಲಾಕ್‌ಡೌನ್ ಅನಂತರ ಜಿಲ್ಲೆಯಲ್ಲಿ ಹಲವು ರೀತಿಯ ಕಳ್ಳತನ ಪ್ರಕರಣ ಈಗಾಗಲೇ ವರದಿಯಾಗಿದೆ. ಇದನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಮುಂದಾಗಿದ್ದು, ನಗರ ಸಹಿತ ಗ್ರಾಮೀಣ ಭಾಗದ ಪ್ರಮುಖ ಸ್ಥಳಗಳಲ್ಲಿ ಈ ಬಗ್ಗೆ ನಿರಂತರ ಜಾಗೃತಿ ಕಾರ್ಯ ನಡೆಸುತ್ತಿದ್ದಾರೆ.
ಅನ್ಯ ಜಿಲ್ಲೆ, ರಾಜ್ಯದವರ ಕೈವಾಡ:
ಕಳವು ಪ್ರಕರಣಗಳ ಆರೋಪಿಗಳ ಪೈಕಿ ಹೆಚ್ಚಿನ ಮಂದಿ ಅನ್ಯ ಜಿಲ್ಲೆ, ರಾಜ್ಯದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಹಗಲು ಹೊತ್ತಿನಲ್ಲಿ ಸುತ್ತಾಡುವ ಈ ತಂಡ ಮನೆಗೆ ಚಿಲಕ ಹಾಕಿರುವುದು ಸಹಿತ ನಿರ್ಜನ ಪ್ರದೇಶಗಳನ್ನು ಗುರುತಿಸಿಕೊಂಡು ತಡರಾತ್ರಿ ವೇಳೆ ಕಾರ್ಯಾಚರಣೆಗಿಳಿಯುತ್ತಾರೆ.
ಪೊಲೀಸರಿಂದ ಜಾಗೃತಿ:
ಜಿಲ್ಲಾದ್ಯಂತ ಪೊಲೀಸರು ಗಸ್ತು ವಾಹನದ ಮೂಲಕ ಧ್ವನಿವರ್ಧಕ ಬಳಸಿ ಕರಪತ್ರದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಮುನ್ನೆಚ್ಚರಿಕೆ ಕ್ರಮಗಳು:
- ಮನೆ ಮುಖ್ಯ ಗೇಟ್‌ಗೆ ಕಾಣುವಂತಹ ದೊಡ್ಡ ದೊಡ್ಡ ಬೀಗ ಹಾಕಬೇಡಿ. ಮನೆಯ ಬಾಗಿಲಿಗೆ ಸೆಂಟ್ರಲ್ ಲಾಕ್ ಅಳವಡಿಸಿ.
- ಮನೆಯಲ್ಲಿ ರಾತ್ರಿ ವೇಳೆ ಯಾವುದಾದರೂ ಒಂದು ಲೈಟ್ ಆನ್ ಇರುವಂತೆ ಗಮನಹರಿಸಿ.
- ಮನೆಯಿಂದ ಹೊರಗಡೆ ಹೋಗುವಾಗ ಹಣ, ಬಂಗಾರದ ಆಭರಣಗಳನ್ನು ಮನೆಯಲ್ಲಿ ಬಿಟ್ಟು ಹೋಗದೇ ನಂಬಿಕಸ್ತ ಸ್ನೇಹಿತರು /ಸಂಬಂಧಿಕರ ಮನೆಯಲ್ಲಿ ಕೊಟ್ಟು ಹೋಗಿ ಅಥವಾ ಬ್ಯಾಂಕ್ ಲಾಕರ್‌ನಲ್ಲಿಡುವುದು ಉತ್ತಮ.
- ಮನೆಗೆ ಸೂಕ್ತ ಸಿಸಿಟಿವಿ ಅಳವಡಿಸಿ, ಬೆಳಕಿನ ವ್ಯವಸ್ಥೆ ಮಾಡಿ.
- ಮನೆಯ ಸುತ್ತುಮುತ್ತ ಯಾವುದೇ ಅಪರಿಚಿತ ವಾಹನ, ವ್ಯಕ್ತಿ ಕಂಡು ಬಂದರೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
ನಗರದಲ್ಲಿಲ್ಲ ಸಿಸಿ ಕೆಮರಾ :
ಉಡುಪಿ ನಗರ ಪ್ರದೇಶದಲ್ಲಿ ಇಲಾಖೆಯ ವತಿಯಿಂದ ಎಲ್ಲಿ ಕೂಡ ಸಿಸಿಟಿವಿ ಅಳ ವಡಿಕೆಯಾಗಿಲ್ಲ. ಈ ಹಿಂದೆ ಅಳವಡಿಕೆ ಯಾಗಿತ್ತಾದರೂ ಅನಂತರ ಅದನ್ನು ತೆರವು ಮಾಡಲಾಗಿತ್ತು. ಈಗ ಯಾವ ಪ್ರದೇಶದಲ್ಲಿ ಕಳ್ಳತನ ನಡೆದರೂ ಪೊಲೀಸರು ಅಂಗಡಿ, ಮುಂಗಟ್ಟುಗಳು, ವ್ಯಾಪಾರ ಮಳಿಗೆಯವರು ಅಳವಡಿಕೆ ಮಾಡಿರುವ ಸಿಸಿ ಟಿವಿಗಳನ್ನೇ ಪರಿಶೀಲಿಸಬೇಕಿರುವ ಅನಿವಾರ್ಯತೆ ಎದುರಾಗಿದೆ.
ಅಪರಾಧ ಸಹಿತ ಕಳ್ಳತನ ಪ್ರಕರಣ ತಡೆಗಟ್ಟುವ ಉದ್ದೇಶದಿಂದ ಉಡುಪಿ ಜಿಲ್ಲೆಯಾದ್ಯಂತ ಪೊಲೀಸರು ಜಾಗೃತಿ ನಡೆಸುತ್ತಿದ್ದಾರೆ. ಅನುಮಾನಾಸ್ಪದ ವಾಹನಗಳು, ವ್ಯಕ್ತಿಗಳು ಕಂಡುಬಂದರೆ ಸಮೀಪದ ಠಾಣೆಗೆ ಸಾರ್ವಜನಿಕರು ದೂರು ನೀಡಬಹುದಾಗಿದೆ
.-ಕುಮಾರಚಂದ್ರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಉಡುಪಿ
-ಪುನೀತ್ ಸಾಲ್ಯಾನ್