Advertisement

ಜಾಗೃತಿ ವಿಜಯ

05:13 PM Oct 20, 2018 | Team Udayavani |

ಹುಬ್ಬಳ್ಳಿ: ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಗಣೇಶ ಮೂರ್ತಿ ಹಾಗೂ ವಿಷಯುಕ್ತ ರಾಸಾಯನಿಕ ಬಣ್ಣಗಳಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ ಎಂಬುದು ಜನರಿಗೆ ಮನವರಿಕೆಯಾಗುತ್ತಿದೆ. ಈ ಬಾರಿ ಅವಳಿ ನಗರದಲ್ಲಿ ಗಣೇಶ ವಿಸರ್ಜನೆ ಮಾಡಿದ ಕೆರೆಗಳು ಹಾಗೂ ದೊಡ್ಡ ಬಾವಿಗಳಲ್ಲಿನ ನೀರು ಹಾಗೂ ಅಲ್ಲಿನ ಮಣ್ಣಿನಲ್ಲಿ ವಿಷಯುಕ್ತ ರಾಸಾಯನಿಕಗಳ ಪ್ರಮಾಣ ಕಡಿಮೆಯಾಗಿರುವುದು ಕಂಡುಬಂದಿದೆ.

Advertisement

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಧಾರವಾಡದಲ್ಲಿನ ವಲಯ ಪ್ರಯೋಗಾಲಯದಲ್ಲಿ ಗಣೇಶ ಚತುರ್ಥಿ ಆರಂಭಕ್ಕೂ ಮುಂಚೆ ಹಾಗೂ ಗಣೇಶ ವಿಸರ್ಜನೆ ನಂತರ ನೀರು ಹಾಗೂ ಮಣ್ಣಿನ ಪರೀಕ್ಷೆ ಮಾಡಲಾಗಿದೆ.

ಹುಬ್ಬಳ್ಳಿಯ ಇಂದಿರಾ ಗಾಜಿನಮನೆ ಬಾವಿ, ಉಣಕಲ್‌ ಕೆರೆ, ಹೊಸೂರು ಟ್ಯಾಂಕ್‌, ಧಾರವಾಡದ ನುಚ್ಚಂಬಲಿ ಬಾವಿ, ಕೆಲಗೇರಿ ಕೆರೆಗಳಲ್ಲಿ ಮಣ್ಣು ಹಾಗೂ ನೀರಿನ ನಮೂನೆ ಪರೀಕ್ಷೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪಿಒಪಿ ಗಣೇಶ ಮೂರ್ತಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಪ್ರತಿ ವರ್ಷ ಪ್ರತಿಷ್ಠಾಪನೆಗೊಳ್ಳುವ ಗಣೇಶ ಮೂರ್ತಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಆದರೂ ಮಾಲಿನ್ಯ ಪ್ರಮಾಣ ಕಡಿಮೆಯಾಗಿರುವುದು ಜಾಗೃತಿಯ ಸೂಚನೆಯಾಗಿದೆ.

ಎಷ್ಟೆಷ್ಟಿದೆ?: ನೀರಿನಲ್ಲಿ ಆಮ್ಲಾಂಶವನ್ನು ಪಿಎಚ್‌ನಲ್ಲಿ ಅಳೆಯಲಾಗುತ್ತಿದ್ದು, ಸಾಮಾನ್ಯವಾಗಿ 6 ರಿಂದ 8.5 ಇರಬೇಕು. ಆದರೆ ನಗರದ ಗ್ಲಾಸ್‌ಹೌಸ್‌ ಟ್ಯಾಂಕ್‌ನಲ್ಲಿ 8.7 ಇರುವುದು ಪತ್ತೆಯಾಗಿದೆ. ಉಣಕಲ್ಲ ಕೆರೆಯಲ್ಲಿ 8.6 ಇರುವುದು ಕಂಡುಬಂದಿದೆ. ಇಂದಿರಾ ಗಾಜಿನಮನೆಯಲ್ಲಿ ನಿರ್ದಿಷ್ಟ ಪ್ರಮಾಣದ ನೀರಿನಲ್ಲಿ ಗರಿಷ್ಠ 160 ತೇಲುವ ಕಣಗಳು ಕಂಡು ಬಂದಿದ್ದರೆ, ನುಚ್ಚಂಬಲಿ ಬಾವಿಯಲ್ಲಿ 100 ಕಣಗಳು ಕಂಡು ಬಂದಿವೆ. ಅದೇ ರೀತಿ ನುಚ್ಚಂಬಲಿ ಬಾವಿಯಲ್ಲಿ ಕರಗಿದ ಕಣಗಳ ಪ್ರಮಾಣ ಗರಿಷ್ಠ 1520ರಷ್ಟಿದ್ದರೆ, ಇಂದಿರಾ ಗಾಜಿನಮನೆ ಟ್ಯಾಂಕ್‌ನಲ್ಲಿ 1380ರಷ್ಟಿದೆ.

ನುಚ್ಚಂಬಲಿ ಬಾವಿಯ ಪ್ರತಿ ಲೀಟರ್‌ ನೀರಿನಲ್ಲಿ ಗರಿಷ್ಠ 0.208 ಮಿಲಿ ಗ್ರಾಂ ಪಾಸ್ಫೇಟ್‌ ಪತ್ತೆಯಾಗಿದೆ. ಸಾಮಾನ್ಯವಾಗಿ ಇದು 0.005ದಿಂದ 0.05ರ ವರೆಗೂ ಇರಬೇಕು. ಪರೀಕ್ಷೆಗೊಳಪಟ್ಟ ಎಲ್ಲ ಜಲಮೂಲಗಳಲ್ಲಿನ ಸೀಸ, ಕ್ಯಾಡ್ಮಿಯಂ, ಸತು ಪ್ರಮಾಣ ಸಾಮಾನ್ಯ ಪ್ರಮಾಣದಲ್ಲಿದೆ. ಕುಡಿಯುವ ನೀರಿನಲ್ಲಿನ ಕಬ್ಬಿಣಾಂಶದ ಪ್ರಮಾಣ ಪ್ರತಿ ಲೀಟರ್‌ಗೆ 0.05 ಮಿಲಿಗ್ರಾಂ ಇರಬೇಕು. ಆದರೆ ಉಣಕಲ್ಲ ಕೆರೆಯಲ್ಲಿ ಗರಿಷ್ಠ 0.438 ಗರಿಷ್ಠ , ಕೆಲಗೇರಿ ಕೆರೆಯಲ್ಲಿ 0.381 ಇರುವುದು ಪರೀಕ್ಷೆಯಲ್ಲಿ ತಿಳಿದಿದೆ. ಪಾದರಸ, ಕ್ರೋಮಿಯಂ, ನಿಕ್ಕೆಲ್‌ ಪ್ರಮಾಣ ಎಲ್ಲ ಕೆರೆ ಹಾಗೂ ಬಾವಿಗಳಲ್ಲಿ ಸಾಮಾನ್ಯ ಪ್ರಮಾಣದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ನೀರಿನಲ್ಲಿನ ಹಾನಿಕಾರಕ ರಾಸಾಯನಿಕ ವಸ್ತುಗಳ ಪ್ರಮಾಣ ಕಡಿಮೆಯಾಗಿದೆ.

Advertisement

ಪರಿಸರ ಸ್ನೇಹಿ ಗಣೇಶೋತ್ಸವ ನಮ್ಮದಾಗಲಿ
ಜಲಮೂಲಗಳನ್ನು ರಕ್ಷಿಸಿಕೊಳ್ಳಬೇಕೆಂಬ ಜಾಗೃತಿ ಜನರಲ್ಲಿ ಮೂಡುತ್ತಿದೆ. ಗಣೇಶ ವಿಸರ್ಜನೆಗೆ ಮೊಬೈಲ್‌ ಟ್ಯಾಂಕ್‌ ಬಳಕೆ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ. ನೈಸರ್ಗಿಕ ಬಣ್ಣ ಬಳಿದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಹಲವರು ಆಸಕ್ತಿ ತೋರಿದ್ದಾರೆ. ಕೆಲ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಜಾಗೃತಿ ಮೂಡಲು ಕಾರಣವಾಗಿದೆ. ಇಷ್ಟೆಲ್ಲ ಜಾಗೃತಿ ಹಾಗೂ ಕಟ್ಟುನಿಟ್ಟಿನ ಮಧ್ಯೆಯೂ ಕೆಲ ಗಣೇಶೋತ್ಸವ ಮಂಡಳಿಗಳು ಹಟಕ್ಕೆ ಬಿದ್ದವರಂತೆ ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದವು. ಕೆಲ ಕಲಾವಿದರು ಪಿಒಪಿ ಮೂರ್ತಿಗಳಿಗೆ ಮಣ್ಣಿನ ಲೇಪನ ಮಾಡಿ ಮಣ್ಣಿನ ಗಣೇಶ ವಿಗ್ರಹಗಳೆಂದು ಬಿಂಬಿಸಿದರು. ಕೆಲವೆಡೆ ಜಿಲ್ಲಾಡಳಿತ ಪಿಒಪಿ ಮೂರ್ತಿಗಳನ್ನು ವಶಕ್ಕೆ ಪಡೆಯಿತು. ಜಲಚರಗಳಿಗೆ ಪ್ರಾಣಾಪಾಯ ತಂದೊಡ್ಡುವ, ಕುಡಿವ ನೀರನ್ನು ಕಲುಷಿತಗೊಳಿಸುವ ಅಪಾಯ ಅರಿತುಕೊಂಡು ಪಿಒಪಿ ಮುಕ್ತ, ರಾಸಾಯನಿಕ ಮುಕ್ತ ಗಣೇಶೋತ್ಸವ ಆಚರಣೆ ನಮ್ಮದಾಗಬೇಕು.

ಸಾಮಾನ್ಯ ಮಟ್ಟದಲ್ಲಿ ಕ್ಯಾಡ್ಮಿಯಂ, ಪಾದರಸ, ಕ್ರೋಮಿಯಂ ಪ್ರಮಾಣ
ಅವಳಿ ನಗರದ ಪ್ರಮುಖ ಜಲಮೂಲಗಳಲ್ಲಿ ಪರೀಕ್ಷೆ ಮಾಡಲಾದ ಮಣ್ಣಿನಲ್ಲಿ ಕ್ಯಾಡ್ಮಿಯಂ, ಪಾದರಸ, ಕ್ರೋಮಿಯಂ ಪ್ರಮಾಣ ಸಾಮಾನ್ಯ ಮಟ್ಟದಲ್ಲಿರುವುದು ಕಂಡುಬಂದಿದೆ. ಸೀಸದ ಪ್ರಮಾಣ ಪ್ರತಿ ಕೆಜಿ ಮಣ್ಣಿನಲ್ಲಿ 10ರಿಂದ 50 ಮಿಲಿಗ್ರಾಂ ಇರಬೇಕು. ಎಲ್ಲಿಯೂ ಕೂಡ ಅಪಾಯದ ಮಟ್ಟದ ಸೀಸ ಕಂಡುಬಂದಿಲ್ಲ. ತಾಮ್ರದ ಪ್ರಮಾಣ ಇಂದಿರಾ ಗಾಜಿನಮನೆ ಬಾವಿಯಲ್ಲಿ ಗರಿಷ್ಠ 144.5 ಪಾರ್ಟ್ಸ್ ಪರ್‌ ಮಿಲಿಯನ್‌ (ಪಿಪಿಎಂ) ಕಂಡು ಬಂದಿದೆ. ಸತುವಿನ ಪ್ರಮಾಣ ಕೂಡ ಇದೇ ಬಾವಿಯಲ್ಲಿ 123.9 ಪಿಪಿಎಂ ಕಂಡು ಬಂದಿದೆ. ಕೆಲಗೇರಿ ಕೆರೆಯಲ್ಲಿ ಕಬ್ಬಿಣಾಂಶದ ಪ್ರಮಾಣ ಗರಿಷ್ಠ 79,972.33 ಪಿಪಿಎಂ ಇರುವುದು ಗೊತ್ತಾಗಿದೆ.  ನಿಕ್ಕೆಲ್‌ ಕೂಡ ಅಪಾಯಕಾರಿ ಮಟ್ಟದ ಒಳಗಿದೆ.

ಜನರಲ್ಲಿ ಜಾಗೃತಿ ಮೂಡುತ್ತಿದೆ. ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಮಹಾನಗರ ಪಾಲಿಕೆ, ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿದ್ದರಿಂದ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಕೆಲವೆಡೆ ಮಾತ್ರ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನಲ್ಲಿ ಹಾಗೂ ಮಣ್ಣಿನಲ್ಲಿ ಪತ್ತೆಯಾದ ಹಾನಿಕಾರಕ ರಾಸಾಯನಿಕಗಳ ಪ್ರಮಾಣ ಕಡಿಮೆಯಿರುವುದು ಕಂಡುಬಂದಿದೆ.
ವಿಜಯಕುಮಾರ ಕಡಕಬಾವಿ, 
ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next