Advertisement

ತೆರಿಗೆ ಗೊಂದಲ ನಿವಾರಣೆಗೆ ಜಾಗೃತಿ

11:54 AM Nov 12, 2018 | Team Udayavani |

ಮೈಸೂರು: ಸಾರ್ವಜನಿಕರಿಗೆ ಕಾನೂನಿನ ಅರಿವು ಮೂಡಿಸುವ ಮೂಲಕ ವಿವಿಧ ಬಗೆಯ ತೆರಿಗೆಗಳ ಕುರಿತ ಗೊಂದಲ ನಿವಾರಿಸಬೇಕಿದೆ ಎಂದು ಬೆಂಗಳೂರು ವಾಣಿಜ್ಯ ತೆರಿಗೆ ಅಪರ ಆಯುಕ್ತ ಬಿ.ವಿ. ರವಿ ತಿಳಿಸಿದರು. 

Advertisement

ಮೈಸೂರು ಮಹಾನಗರಪಾಲಿಕೆ ಗುತ್ತಿಗೆದಾರರ ಸಂಘ, ಮೈಸೂರು ವೃತ್ತ ಡಾಂಬರ್‌ ಮಿಶ್ರಣ ಘಟಕ ಮಾಲಿಕರ ಸಂಘ, ಮುಡಾ ಗುತ್ತಿಗೆದಾರರ ಸಂಘ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೈಸೂರು ನಗರ ಮತ್ತು ತಾಲೂಕು ಗುತ್ತಿಗೆದಾರರ ಸಂಘ ಹಾಗೂ ಭವಾನಿ ಅಸೋಸಿಯೇಟ್ಸ್‌ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸರಕು ಮತ್ತು ಸೇವಾ ತೆರಿಗೆ ಮತ್ತು ಜಿಎಸ್‌ಟಿ, ಟಿಡಿಎಸ್‌ ಕುರಿತ ಸಮಾಲೋಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

 ಜಿಎಸ್‌ಟಿ ಬರುವ ಮೊದಲು ವ್ಯಾಟ್‌ ಇತ್ತು. ವ್ಯಾಟ್‌ಗೂ ಮುನ್ನ ಕರ್ನಾಟಕ ಮಾರಾಟ ತೆರಿಗೆ ಇತ್ತು. ಆಗಲೂ ಸಹ ಇದೇ ರೀತಿಯ ಗೊಂದಲಗಳಿದ್ದವು, ಅದಕ್ಕೆ ಪರಿಹಾರಗಳೂ ಇತ್ತು. ಆದರೆ ಜನರಲ್ಲಿ ಕಾನೂನಿನ ಅರಿವಿಲ್ಲದ ಪರಿಣಾಮ ವಿವಿಧ ತೆರಿಗೆಗಳು ಮತ್ತು ಸೇವಾ ತೆರಿಗೆ ಕುರಿತು ಗೊಂದಲಗಳು ಮೂಡುವುದು ಸಹಜ. ಹೀಗಾಗಿ ಸರಿಯಾದ ಕಾನೂನಿನ ಅರಿವು ಮೂಡಿಸಿ, ಸರಿಯಾಗಿ ಅರ್ಥ ಮಾಡಿಸಿದಾಗ ಎಲ್ಲವೂ ಸುಲಭ ಅನಿಸುತ್ತದೆ ಮತ್ತು ಎಲ್ಲಾ ಗೊಂದಲಗಳಿಗೆ ಪರಿಹಾರ ಸಿಗಲಿದೆ ಎಂದು ಹೇಳಿದರು. 

ಯಾವುದೇ ತೆರಿಗೆ ಜಾರಿಯಾದಾಗ ತೆರಿಗೆಯಲ್ಲಿರುವ ವ್ಯತ್ಯಾಸ ಏನು ಎಂಬುದನ್ನು ತಿಳಿದುಕೊಳ್ಳಬೇಕು. ಅರ್ಧ ತಿಳಿದುಕೊಂಡು ಪೂರ್ಣ ತಿಳಿದುಕೊಂಡಂತೆ ವರ್ತಿಸಬಾರದು. ಜಿಎಸ್‌ಟಿ ಕುರಿತಂತೆ ಈಗಾಗಲೇ ಸಾಕಷ್ಟು ಕಾರ್ಯಾಗಾರಗಳು ನಡೆದಿವೆ.

ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅರಿವು ಮೂಡಿಸಿಕೊಳ್ಳುವ ಜತೆಗೆ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು. ವಾಣಿಜ್ಯ ತೆರಿಗೆ ಉಪ ಆಯುಕ್ತ ಡಿ.ಪಿ. ಪ್ರಕಾಶ್‌, ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ, ಕಾರ್ಯದರ್ಶಿ ಸಿ. ಕರಿಗೌಡ, ಎಂ.ಎನ್‌. ಹರ್ಷವರ್ಧನ್‌, ಸಿ.ಡಿ. ಕೃಷ್ಣ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next