ಮಾಗಡಿ: ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿಸಲು ಪುರ ನಾಗರಿಕರು ಸಂಕಲ್ಪ ಮಾಡಬೇಕು. ಈ ನಿಟ್ಟಿನಲ್ಲಿ ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ಪುರ ಸಭಾ ಅಧ್ಯಕ್ಷೆ ವಿಜಯ ರೂಪೇಶ್ ಮನವಿ ಮಾಡಿದರು.
ಮಾಗಡಿ ಪುರಸಭೆ, ರೋಟರಿ ಮಾಗಡಿ ಸೆಂಟ್ರಲ್, ಆರೋಗ್ಯ ಇಲಾಖೆ, ಸರ್ಕಾರಿ ಪ್ರೌಢ ಶಾಲಾ ಹೆಣ್ಣು ಮಕ್ಕಳ ಶಾಲಾ ಆಶ್ರಯದಲ್ಲಿ ನಡೆದ ಪ್ಲಾಸ್ಟಿಕ್ ಮುಕ್ತಗೊಳಿಸಲು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದಂತೆ ಸರ್ಕಾರ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದು, ಮಾಗಡಿಯಲ್ಲಿ ಪ್ಲಾಸ್ಟಿಕ್ ಮುಕ್ತ ಪಟ್ಟಣವಾಗಿಸಲು ಎಲ್ಲರ ಸಹಕಾರ ಮುಖ್ಯವಾಗಿದೆ. ಸರ್ಕಾರ ದೇಶಾದ್ಯಂತ ಪ್ಲಾಸ್ಟಿಕ್ ನಿಷೇಧ ಮಾಡಿದೆ. ಆದರೆ, ಸರ್ಕಾರ ಚಿಲ್ಲರೆ ಅಂಗಡಿಗಳಲ್ಲಿ ಕವರ್ ಮಾರುತ್ತಿರುವ ಬಗ್ಗೆ ದಂಡ ಹಾಕುತ್ತಾರೆ. ನಿಜವಾಗಿಯೂ ಪ್ಲಾಸ್ಟಿಕ್ ತಯಾರಿಸುವ ಕಾರ್ಖಾನೆಗಳ ನಿಷೇಧ ಮಾಡಿದರೆ, ನಮ್ಮ ಬಳಿ ಕವರ್‌ಗಳು ಬರುವುದಿಲ್ಲ. ಮೊದಲು ಕಾರ್ಖಾನೆಗಳನ್ನು ಬ್ಯಾನ್ ಮಾಡಿದ ನಂತರ ಪಟ್ಟಣದ ಅಂಗಡಿಗಳಿಗೆ ದಾಳಿ ಮಾಡಿದರೆ, ಸಾರ್ವಜನಿಕರು ಜಾಗೃತರಾಗುತ್ತಾರೆ. ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಸಾಕಷ್ಟು ಹಾನಿ ಆಗಿರುವುದರಿಂದ ಇದರ ಬಳಕೆಯನ್ನು ನಾವು ನಿಷೇಧಿಸಲು ಜಾಗೃತಿಗೊಳಿಸಲಾಗುತ್ತಿದ್ದು, ಪುರಸಭೆಯೊಂದಿಗೆ ಪುರನಾಗರೀಕರು ಕೈಜೋಡಿಸಿದರೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಬಟ್ಟೆ ಚೀಲ ಬಳಸಿ: ರೋಟರಿ ಮಾಗಡಿ ಸಂಸ್ಥೆ ನೂತನ ಅಧ್ಯಕ್ಷ ಕೆ.ಎಚ್.ಶಂಕರ್ ಮಾತನಾಡಿ, ನಮ್ಮ ಪೂರ್ವಜರು ಅಂಗಡಿಗಳಿಗೆ ತೆರಳುವಾಗ ಕೈಯಲ್ಲಿ ಬಟ್ಟೆ ಚೀಲವನ್ನು ತೆಗೆದುಕೊಂಡು ಹೋಗುತ್ತಿದ್ದರು. ಈಗ ಯಾರೂ ಕೂಡ ಮನೆಯಿಂದ ಬ್ಯಾಗ್ ತೆಗೆದುಕೊಂಡು ಹೋಗದ ಕಾರಣವೇ ಪ್ಲಾಸ್ಟಿಕಿಗೆ ಬೇಡಿಕೆ ಹೆಚ್ಚಾಗಿದೆ. ಪ್ಲಾಸ್ಟಿಕ್ ಮುಕ್ತ ಮಾಗಡಿ ಮಾಡಲು ಎಲ್ಲರ ಸಹಕಾರ ಬಹಳ ಮುಖ್ಯವಾಗಿದೆ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತಿದೆ. ಮಣ್ಣಿನಲ್ಲಿ ಸೇರಿದರೂ ಪ್ಲಾಸ್ಟಿಕ್ ಕೊಳೆಯುವುದಿಲ್ಲ. ಹೀಗಾಗಿ ಮಣ್ಣಿನಲ್ಲಿ ನೀರು ಇಂಗುವುದಿಲ್ಲ, ಅಂತರ್ಜಲ ಕುಸಿಯಲು ಕಾರಣವಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ತಡೆಯಲು ಸಾಧ್ಯವಿಲ್ಲ, ಹಂತ ಹಂತವಾಗಿ ಪ್ಲಾಸ್ಟಿಕ್ ಮುಕ್ತಗೊಳ್ಳಬೇಕಾದರೆ ಎಲ್ಲರ ಸಂಪೂರ್ಣ ಸಹಕಾರ ಬಹಳ ಅಗತ್ಯ ಎಂದು ಹೇಳಿದರು.
ಶಾಲಾ ಮಕ್ಕಳಿಂದ ಜಾಥಾ: ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಮಾಗಡಿ ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಪುರಸಭೆಯಿಂದ ಕೆಂಪೇಗೌಡ ವೃತ್ತದ ಮಾರ್ಗವಾಗಿ ಕಲ್ಯಾಗೇಟ್ ಇತರೆ ಮುಖ್ಯರಸ್ತೆಯಲ್ಲಿ ಜಾಥಾ ನಡೆದು ಜನಜಾಗೃತಿಗೊಳಿಸಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ.ಕಾಂತ ರಾಜು, ಸದಸ್ಯರಾದ ಜಯರಾಮಯ್ಯ, ಅನಿಲ್ ಕುಮಾರ್, ಶಿವಕುಮಾರ್, ರಾಮು, ಮ್ಯಾನೇಜರು ರವಿಕುಮಾರ್, ಪುರಸಭೆ ಸಿಬ್ಬಂದಿ ಮಂಜುನಾಥ್, ನಾಗೇಂದ್ರ, ಕುಸುಮಾ, ಮಂಜುನಾಥ್, ಪ್ರಶಾಂತ್, ಆರೋಗ್ಯ ಇಲಾಖೆ ಶಿವಸ್ವಾಮಿ, ತುಕರಾಂ, ರೋಟರಿ ಕಾರ್ಯದರ್ಶಿ ಮುನಿಯಪ್ಪ , ಹೊಸಪಾಳ್ಯ ಮೂರ್ತಿ, ಮನು, ಲ್ಯಾಬ್ ಲೋಕೇಶ್, ಸಿದ್ದಪ್ಪಾಜಿ, ರಮೇಶ್, ಶಿವಣ್ಣ, ಭಾಗ್ಯಮ್ಮ, ಕುಮಾರ್, ವೆಂಕಟೇಶ್, ನಾಗರಾಜ್, ರವಿಕುಮಾರ್, ಗೌರಿಶಂಕರ್ ಹಾಗೂ ಶಾಲಾ ಮಕ್ಕಳು ಶಿಕ್ಷಕರು ಹಾಜರಿದ್ದರು.