ಚಿಕ್ಕಬಳ್ಳಾಪುರ: ನಾಗಾರ್ಜುನ ಎಂಜಿ ನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರ ನಗರದ (ಶಿಡ್ಲಘಟ್ಟ ವೃತ್ತ) ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಮಾರಕ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳು, ಅತಿಯಾದ ಮೊಬೈಲ್ ಬಳಕೆಯಿಂದಾಗುವ ಮಾನಸಿಕ ಒತ್ತಡ, ಖನ್ನತೆ ಹಾಗೂ ಆತ್ಮಹತ್ಯೆ ಶಿಕ್ಷಾರ್ಹ ಅಪರಾಧ ಎಂಬ ವಿಚಾರಗಳ ಬಗ್ಗೆ ಬೀದಿ ನಾಟಕದ ಮೂಲಕ ಮನೋಜ್ಞವಾಗಿ ಅಭಿನಯಿಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಈ ನಾಟಕ ಪ್ರದರ್ಶನವು ಕಾಮಿಡಿ ಕಿಲಾಡಿಯ ಲೋಕೇಶ್ ಸಾರಥ್ಯದಲ್ಲಿ ನಡೆಯಿತು. ಅವರೂ ಸಹ ನಾಟಕದಲ್ಲಿ ಅಭಿನಯಿಸಿ, ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ನೆರವಾದರು.
ಹಿತವಾದ ಹಾಸ್ಯದ ಮೂಲಕ ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ ಬಗ್ಗೆ ಉತ್ತಮ ಸಾಮಾಜಿಕ ಸಂದೇಶ ರವಾನಿಸಿದ್ದು ಅದ್ಭುತವಾಗಿತ್ತು. ಈ ಅದ್ಭುತ ನಾಟಕ ಪ್ರದರ್ಶನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಪರಿಸರಕ್ಕೆ ಹಾನಿ ಮಾಡುತ್ತಿರುವ ಪ್ಲಾಸ್ಟಿಕ್ ಹೊರೆ ತಗ್ಗಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಇತ್ತೀಚಿಗೆ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲು ಆದೇಶ ಹೊರಡಿಸಿದೆ. ನಾಟಕ ಪ್ರದರ್ಶನ ಸಂದರ್ಭದಲ್ಲಿ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಆನಂದಮ್ಮ ಮತ್ತು ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.