Advertisement

ಕೀಟಜನ್ಯ ರೋಗಗಳ ನಿಯಂತ್ರಣ ಜಾಗೃತಿಗೆ ಸೂಚನೆ

02:18 PM May 17, 2022 | Team Udayavani |

ಗದಗ: ಡೆಂಘೀ ಜ್ವರ ನಿಯಂತ್ರಣ ಕ್ರಮಗಳ ಕುರಿತು ಶಾಲಾ ಮಕ್ಕಳ ಮೂಲಕ ಜಾಥಾ ಏರ್ಪಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಪಂ ಸಿಇಒ ಡಾ.| ಸುಶೀಲಾ ಬಿ. ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಪಂ ಸಿಇಒ ಕಚೇರಿಯಲ್ಲಿ ಆರೋಗ್ಯ ಇಲಾಖೆಯಿಂದ ಸೋಮವಾರ ಏರ್ಪಡಿಸಿದ್ದ ಕೀಟಜನ್ಯ ರೋಗಗಳ ಅಂತರ್‌ ಇಲಾಖಾ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡೆಂಘೀ ಜ್ವರ ನಿಯಂತ್ರಣಕ್ಕೆ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ನಿರಂತರವಾಗಿ ಲಾರ್ವಾ ಸಮೀಕ್ಷೆ ಕೈಗೊಳ್ಳಬೇಕು. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡಲು ಶಾಲಾ ಮಕ್ಕಳ ಜಾಥಾ ಮೂಲಕ ಅರಿವು ಮೂಡಿಸಬೇಕು. ಕೀಟಜನ್ಯ ರೋಗಗಳ ನಿಯಂತ್ರಣದಲ್ಲಿ ವಿವಿಧ ಇಲಾಖೆಗಳಿಗೆ ವಹಿಸಲಾದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ಆಯಾ ಇಲಾಖಾ ಧಿಕಾರಿಗಳು ನಿರ್ವಹಿಸಬೇಕು. ಈ ಕಾರ್ಯದಲ್ಲಿ ವಿಳಂಬ ಧೋರಣೆ ಸಹಿಸಲಾಗದು ಎಂದು ಎಚ್ಚರಿಕೆ ನೀಡಿದರು.

ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಚಿಕೂನ್‌ ಗುನ್ಯಾ, ಡೆಂಘೀ ಜ್ವರ ಹಾಗೂ ಮಲೇರಿಯಾ ರೋಗಗಳ ಲಕ್ಷಣಗಳು ಹಾಗೂ ನಿಯಂತ್ರಣ ಕ್ರಮಗಳ ಕುರಿತು ಸಮೀಕ್ಷೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸ್ಥಳೀಯ ಸಂಸ್ಥೆ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ತೆರೆದ ಚರಂಡಿ ಹಾಗೂ ಗುಂಡಿಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಸೊಳ್ಳೆ ಉತ್ತತ್ತಿ ತಾಣಗಳನ್ನು ನಿರ್ಮೂಲನೆ ಮಾಡಬೇಕು. ವಾರಕ್ಕೊಮ್ಮೆ ಸೊಳ್ಳೆ ನಾಶಕ ದ್ರಾವಣಗಳು ಸಿಂಪಡಣೆ ಮಾಡಬೇಕು. ಅಂಗನವಾಡಿ ಹಾಗೂ ಶಾಲೆಗಳ ಆವರಣ, ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಲು ಸೂಚಿಸಬೇಕು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ| ಜಗದೀಶ ನುಚ್ಚಿನ್‌ ಮಾತನಾಡಿ, ಏಪ್ರಿಲ್‌ ಅಂತ್ಯದವರೆಗೆ 17 ಡೆಂಘೀ, 6 ಚಿಕೂನ್‌ಗುನ್ಯಾ ಪ್ರಕರಣಗಳು ಖಚಿತಪಟ್ಟಿದ್ದು, ಚಿಕಿತ್ಸೆಯಿಂದ ಎಲ್ಲರೂ ಗುಣಮುಖರಾಗಿದ್ದಾರೆ. ಪ್ರಕರಣಗಳು ಕಂಡುಬಂದ ಗ್ರಾಮಗಳಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಕ್ರಮ ವಹಿಸಲಾಗಿದೆ. ಸಮುದಾಯಕ್ಕೆ ಲಾರ್ವಾಹಾರಿ ಮೀನುಗಳ ಬಗ್ಗೆ, ಕೀಟಜನ್ಯ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳ ಕುರಿತು ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಮಲೇರಿಯಾ ನಿಯಂತ್ರಣಕ್ಕಾಗಿ ಎಪಿಐ 2 ಮತ್ತು ಅದಕ್ಕಿಂತ ಹೆಚ್ಚು ಇರುವ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ 19 ಗ್ರಾಮಗಳಲ್ಲಿ 2022ನೇ ಸಾಲಿನ ಮೊದಲನೇ ಸುತ್ತಿನ ಡಿಡಿಟಿ ಶೇ.50 ಸಿಂಪಡಣೆ ಪೂರ್ಣಗೊಳಿಸಬೇಕು ಎಂದರು.

Advertisement

ಕೀಟಜನ್ಯ ನಿಯಂತ್ರಣಾಧಿಕಾರಿ ಡಾ| ಎಸ್‌.ಎಸ್‌. ನೀಲಗುಂದ ಮಾಹಿತಿ ನೀಡಿ, 2020ರಲ್ಲಿ 2,80,062 ಜನರಿಂದ ರಕ್ತ ಲೇಪನ ಪಡೆದು, ಪರೀಕ್ಷೆಗೆ ಒಳಪಡಿಸಲಾಗಿದ್ದು 5 ಪ್ರಕರಣಗಳು ಖಚಿತಪಟ್ಟಿವೆ. 2021ರಲ್ಲಿ 313871 ರಕ್ತ ಲೇಪನ ಪರೀಕ್ಷೆಯಾಗಿ 6 ಪ್ರಕರಣಗಳು ಖಚಿತಪಟ್ಟಿವೆ. 2021ರಲ್ಲಿ 111286 ರಕ್ತ ಲೇಪನ ಪರೀಕ್ಷೆಗೊಳಪಡಿಸಲಾಗಿದ್ದು, ಯಾವುದೇ ಪ್ರಕರಣಗಳು ದೃಢಪಟ್ಟಿಲ್ಲ. 2022ರ ಏಪ್ರಿಲ್‌ ಅಂತ್ಯದವರೆಗೆ 106895 ರಕ್ತ ಲೇಪನ ಪರೀಕ್ಷೆಗೊಳಪಡಿಸಲಾಗಿದ್ದು, 1 ಪ್ರಕರಣ ಮಾತ್ರ ದೃಢವಾಗಿದೆ ಎಂದು ತಿಳಿಸಿದರು.

ಡೆಂಘೀ ಜ್ವರ ನಿಯಂತ್ರಣ ಕುರಿತು ಬಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್‌ ಎ., ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ, ಆರ್‌ಸಿಎಚ್‌ ಅಧಿಕಾರಿ ಡಾ| ಬಿ.ಎಂ. ಗೊಜನೂರ ಇನ್ನಿತರರಿದ್ದರು. ಡೆಂಗ್ಯೂ ಜ್ವರ ಅಂಕಿ-ಅಂಶ 2020ರಲ್ಲಿ 1105 ರಕ್ತ ಮಾದರಿ ಸಂಗ್ರಹಿಸಲಾಗಿತ್ತು. ಅದರಲ್ಲಿ 199 ಪ್ರಕರಣಗಳು ಖಚಿತಪಟ್ಟಿವೆ. 2021ರಲ್ಲಿ 2207 ರಕ್ತ ಮಾದರಿ ಪೈಕಿ 239 ಪ್ರಕರಣಗಳು ಖಚಿತಪಟ್ಟಿವೆ. 2022ರಲ್ಲಿ ಈವರೆಗೆ 382 ರಕ್ತ ಮಾದರಿಗಳ ಪೈಕಿ 17 ಪ್ರಕರಣಗಳು ದೃಢವಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಚಿಕೂನ್‌ಗುನ್ಯ ಲೆಕ್ಕಾಚಾರ 2020ರಲ್ಲಿ 463 ರಕ್ತ ಮಾದರಿ ಸಂಗ್ರಹಿಸಲಾಗಿತ್ತು. ಇದರಲ್ಲಿ 94 ಪ್ರಕರಣಗಳು ಖಚಿತಪಟ್ಟಿವೆ. 2021 ರಲ್ಲಿ 585 ರಕ್ತ ಮಾದರಿ ಪೈಕಿ 53 ಪ್ರಕರಣಗಳು ಖಚಿತಪಟ್ಟಿವೆ. 2022 ರಲ್ಲಿ ಈವರೆಗೆ 142 ರಕ್ತ ಮಾದರಿಗಳ ಪೈಕಿ 6 ಪ್ರಕರಣಗಳು ದೃಢವಾಗಿದ್ದು, ಯಾವುದೇ ರೋಗಿಯು ಮೃತಪಟ್ಟಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next