Advertisement

ಎನ್ಸೆಸ್ಸೆಸ್‌ ಶಿಬಿರದಲ್ಲಿ ಪ್ಲಾಸ್ಟಿಕ್‌ ಮುಕ್ತ ಗ್ರಾಮಕ್ಕಾಗಿ ಜಾಗೃತಿ

07:44 AM Mar 17, 2019 | Team Udayavani |

ಹುಣಸೂರು: ನಗರದ ಸಂತಜೋಸಫರ ಪದವಿ ಕಾಲೇಜು ವತಿಯಿಂದ ತಾಲೂಕಿನ ಕಸಬಾ ಹೋಬಳಿಯ ಉಯಿಗೌಡನಹಳ್ಳಿಯಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್‌ ಶಿಬಿರದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಪ್ಲಾಸ್ಟಿಕ್‌ನಿಂದಾಗುವ ಅನಾಹುತ, ಅಗ್ನಿ ಅವಘಡಗಳನ್ನು ತಡೆಯುವ ಬಗ್ಗೆ ಪ್ರಾತ್ಯಕ್ಷತೆ ಮೂಲಕ ಗ್ರಾಮಸ್ಥರಲ್ಲಿ ಮನವರಿಕೆ ಮಾಡಿಕೊಟ್ಟರಲ್ಲದೇ ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.

Advertisement

ಶಿಬಿರಾರ್ಥಿಗಳು ಇಡೀ ಗ್ರಾಮದಲ್ಲಿ ಶ್ರಮದಾನದ ಮೂಲಕ ಪ್ಲಾಸ್ಟಿಕ್‌ ಸಂಗ್ರಹಿಸಿದ್ದಲ್ಲದೇ ಅದರಿಂದಾಗುವ ಅನಾಹುತದ ಬಗ್ಗೆ ಮಾಹಿತಿ ನೀಡಿದರು. ಇಡೀ ರಸ್ತೆ, ಶಾಲಾ-ಅಂಗನವಾಡಿ ಆವರಣವನ್ನು ಸ್ವಚ್ಛಗೊಳಿಸಿ, ಗ್ರಾಮವನ್ನು ಅಂದಗೊಳಿಸಿದರು.

ಹುಣಸೂರುನ ದಂತ ವೈದ್ಯ ಡಾ.ಮರೀಗೌಡ, ಶಾಲಾ ಮಕ್ಕಳು, ಶಿಬಿರಾರ್ಥಿಗಳು ಮತ್ತು ಗ್ರಾಮಸ್ಥರಿಗೆ ದಂತ ತಪಾಸಣೆ ನಡೆಸಿ ದಂತ ರಕ್ಷಣೆ ಕುರಿತು ಸಲಹೆ ನೀಡಿದರು. ಪಶುವೈದ್ಯ ಇಲಾಖೆ ಸಹಕಾರದೊಂದಿಗೆ ನೂರಕ್ಕೂ ಹೆಚ್ಚು ಜಾನುವಾರುಗಳ ತಪಾಸಣೆ ನಡೆಸಲಾಯಿತು.

ಪಶುವೈದ್ಯ ಡಾ.ಮಹದೇವಪ್ಪ, ಕಾಲಕಾಲಕ್ಕೆ ಹಾಕಿಸಬೇಕಾದ ಲಸಿಕೆಗಳ ಬಗ್ಗೆ ಮಾಹಿತಿ ನೀಡಿದರು. ಹುಣಸೂರಿನ ಅಗ್ನಿಶಾಮಕ ಠಾಣಾಧಿಕಾರಿ ಸತ್ಯನಾರಾಯಣ್‌ ಹಾಗೂ ಸಿಬ್ಬಂದಿ ಪ್ರಾತ್ಯಕ್ಷತೆ ಮೂಲಕ ಅಗ್ನಿ ಅವಘಡ ಸಂಭವಿಸಿದಾಗ ಗ್ರಾಮಸ್ಥರು ವಹಿಸಬೇಕಾದ ಮುನ್ನೆಚ್ಚರಿಕೆ ಹಾಗೂ ನಂದಿಸುವ ವಿಧಾನವನ್ನು ತಿಳಿಸಿಕೊಟ್ಟರು.

ಉಪನ್ಯಾಸ: ಗ್ರಾಮದಲ್ಲಿ ವಾರಕಾಲ ನಡೆದ ಶಿಬಿರದಲ್ಲಿ ನಿತ್ಯ ನಡೆದ ಉಪನ್ಯಾಸ ಮಾಲಿಕೆಯಲ್ಲಿ ಪ್ಲಾಸ್ಟಿಕ್‌ ಮುಕ್ತ ಗ್ರಾಮ ಕುರಿತು ಇನ್ನರ್‌ವೀಲ್‌ ಸದಸ್ಯೆ ಜಯಲಕ್ಷ್ಮೀ, ಪರಿಸರ ಸಂರಕ್ಷಣೆ ಮತ್ತು ಜನಜಾಗೃತಿ ಕುರಿತು ವಿಶ್ರಾಂತ ಪ್ರಾಚಾರ್ಯ ಪ್ರೊ.ಸಿದ್ದೇಗೌಡ ಹಾಗೂ ಡೀಡ್‌ ಶ್ರೀಕಾಂತ್‌,

Advertisement

-ಸ್ವಚ್ಛಗ್ರಾಮ-ಸ್ವಸ್ಥಗ್ರಾಮ ಕುರಿತು ಸ್ವಚ್ಛ ಭಾರತ ಅಭಿಯಾನದ ಸಂಚಾಲಕ ಜಗದೀಶ್‌ ಹಾಗೂ ಸಿಸ್ಟರ್‌ ಅನಿತಾ, ಸಾಮಾನ್ಯ ಕಾನೂನಿನ ಬಗ್ಗೆ ವಕೀಲೆ ಪವಿತ್ರ, ಯುವಕರ ನಡೆ ಸದೃಢ‌ ಸಮಾಜದೆಡೆಗೆ  ಕುರಿತು ಶಿವಮೆಡಿಕಲ್ಸ್‌ನ ಭಾಗ್ಯಕುಮಾರ್‌ ಹಾಗೂ ಸಿಸ್ಟರ್‌ ಲೀನಾಮಸ್ಕರೇನಸ್‌ ಮಾಹಿತಿ ನೀಡಿದರು.

ಸ್ಪರ್ಧೆ: ನಿತ್ಯ ರಾತ್ರಿ ವೇಳೆ ಶಿಬಿರಾರ್ಥಿಗಳು ಜಾಗೃತಿ ಮೂಡಿಸುವ ನಾಟಕ, ಮೈಮ್‌ ಪ್ರದರ್ಶನ ಹಾಗೂ ನೃತ್ಯ, ಗುಂಪುಗಾಯನ ನಡೆಸಿಕೊಟ್ಟರು. ಇದೇ ವೇಳೆ ಗ್ರಾಮದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಾಗೂ ಯುವಕರಿಗೆ ವಾಲಿಬಾಲ್‌ ಸ್ಪರ್ಧೆಯನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು.

ಶಿಬಿರವನ್ನು ವೀರಶೈವ ಯುವ ಘಟಕದ ಅಧ್ಯಕ್ಷ ಚಂದ್ರಶೇಖರ್‌ ಉದ್ಘಾಟಿಸಿದರು. ಪ್ರಾಚಾರ್ಯರಾದ ಸಿಸ್ಟರ್‌ ದೀಪ್ತಿ, ಶಿಬಿರದ ಸಂಚಾಲಕ ಕೆ.ಎಚ್‌.ಜಗದೀಶ್‌, ಸಹ ಶಿಬಿರಾಧಿಕಾರಿ ಮಹದೇವ್‌, ಗ್ರಾಪಂ ಸದಸ್ಯರಾದ ಅಜಿತ್‌ಕುಮಾರ್‌, ಉಮೇಶ್‌, ನಾಗರತ್ನ, ಡೇರಿ ಅಧ್ಯಕ್ಷ ಉಮೇಶ್‌, ಯ.ಸೋಮಶೇಖರ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next