Advertisement

ಪರೀಕ್ಷಾ ಭಯ ನೀಗಿಸಲು ಪೊಲೀಸರಿಂದ ಜಾಗೃತಿ

11:31 AM Oct 06, 2017 | Team Udayavani |

ಬಜಪೆ: ಶಾಲೆ ಬಿಟ್ಟ 18ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದ ಬಜಪೆ ಪೊಲೀಸರು, ಈಗ ಮಕ್ಕಳು ಪರೀಕ್ಷಾ ಭಯದಿಂದ ಯಾವುದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಅವರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಿ, ಮನೋಸ್ಥೈರ್ಯ ಹೆಚ್ಚಿಸುವುದಕ್ಕಾಗಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡುತ್ತಿದ್ದಾರೆ.

Advertisement

ಕಳೆದ ಸಾಲಿನಲ್ಲಿ ಬಜಪೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ಪರೀಕ್ಷಾ ಭಯವೇ ಕಾರಣ ಎಂದು ತಿಳಿದು ಬಂದಿತ್ತು. ಹೆತ್ತವರು ಹಾಗೂ ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕಿದೆ. ಹೀಗಾಗಿ, ಪೊಲೀಸರು ಶಾಲೆಗಳಿಗೆ ತೆರಳಿ ಮಾಹಿತಿ ನೀಡುತ್ತಿದ್ದಾರೆ. ಪೊಲೀಸರ ಬಗ್ಗೆಯೂ ಇರುವ ಭಯ ನಿವಾರಿಸಿ, ಮಕ್ಕಳೊಂದಿಗೆ ಬಾಂಧವ್ಯ ಬೆಳೆಸುತ್ತಿದ್ದಾರೆ. ಯಾವುದೇ ಸಮಸ್ಯೆ ಅಥವಾ ತೊಂದರೆ ಇದ್ದಲ್ಲಿ ನೇರವಾಗಿ ಸಂಪರ್ಕಿಸುವಂತೆ ತಿಳಿಹೇಳುತ್ತಿದ್ದಾರೆ.

ವಿದ್ಯಾರ್ಥಿನಿಲಯಗಳಿಗೆ ಭೇಟಿ
ಪಿಎಸ್‌ಐ ರಾಜಾರಾಮ ಅವರು ಬಜಪೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವ 4 ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಮಕ್ಕಳಲ್ಲಿರುವ ಪರೀಕ್ಷಾ ಭಯ ನಿವಾರಿಸುವುದು ಮುಖ್ಯ ಉದ್ದೇಶ. ಅಲ್ಲದೆ, ದುಡುಕಿನಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ವಿದ್ಯಾರ್ಥಿನಿಲಯಗಳಲ್ಲಿ ಏನಾದರೂ
ಸಮಸ್ಯೆಗಳಿವೆಯೇ? ಯಾರಿಂದಾದರೂ ತೊಂದರೆ ಆಗುತ್ತಿದೆಯೇ? ವಿದ್ಯಾರ್ಥಿ ನಿಲಯದಲ್ಲಿ ನೀಡುವ ಆಹಾರ,
ಸೌಕರ್ಯ, ಅವರ ಆರೋಗ್ಯದ ಮಾಹಿತಿ ಸಂಗ್ರಹ, ವಿದ್ಯಾಭ್ಯಾಸದಲ್ಲಿ ತೊಡಕುಗಳಿದ್ದರೆ ನಿವಾರಿಸುವಲ್ಲಿ ಹೆಚ್ಚು
ಆಸಕ್ತಿ ತೋರುತ್ತಿದ್ದಾರೆ. ಯಾವುದೇ ಪೂರ್ವ ಸೂಚನೆಯಿಲ್ಲದೆ ವಿದ್ಯಾರ್ಥಿ ನಿಲಯ ಅಥವಾ ಶಾಲೆಗೆ ಭೇಟಿ ನೀಡಿದಾಗ ಮಕ್ಕಳ ಸಮಸ್ಯೆ ಹೆಚ್ಚು ನಿಖರವಾಗಿ ತಿಳಿಯುತ್ತದೆ. ರವಿವಾರ ಎಲ್ಲ ಮಕ್ಕಳೂ ವಿದ್ಯಾರ್ಥಿ ನಿಲಯದಲ್ಲೇ ಸಿಗುವ ಕಾರಣ ಅ ದಿನವೇ ಜಾಗೃತಿ ಮಾಹಿತಿ ನೀಡುತ್ತಿದ್ದಾರೆ.

ಎಡಪದವು ಹಾಗೂ ಬಜಪೆಯಲ್ಲಿ ಬಾಲಕರ ಹಾಗೂ ಕಟೀಲು ಹಾಗೂ ಗುರುಪುರದಲ್ಲಿ ಬಾಲಕಿಯರ ವಿದ್ಯಾರ್ಥಿ ನಿಲಯಗಳಿವೆ. ಒಟ್ಟು 118 ವಿದ್ಯಾರ್ಥಿಗಳು ಇವುಗಳಲ್ಲಿದ್ದು, ಸಮೀಪದ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಇವರಲ್ಲಿ ಹೆಚ್ಚಿನವರು ಹಾಸನ, ಬಾಗಲಕೋಟೆ ಹಾಗೂ ಹಾವೇರಿ ಜಿಲ್ಲೆಯವರು. ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಒಳ್ಳೆಯ ಪರಿಸರ ಇಲ್ಲಿದೆ. ಬಜಪೆ ಠಾಣೆಯ ಮಹಿಳಾ ಮುಖ್ಯ ಪೇದೆ ಲಾವಣ್ಯಾ ಅವರು ವಿದ್ಯಾರ್ಥಿನಿ ನಿಲಯಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದಾರೆ. ಮಕ್ಕಳ ಕಲ್ಯಾಣಾಧಿಕಾರಿ ಹಾಗೂ ಪಿಎಸ್‌ಐ ರಾಜಾರಾಮ್‌ ಅವರು ಮಕ್ಕಳಿಗೆ ಜಾಗೃತಿ ಮಾಹಿತಿ ನೀಡುತ್ತಿದ್ದಾರೆ. ಮಕ್ಕಳ ಸಮಗ್ರ ವರದಿಯನ್ನು ಪೊಲೀಸ್‌ ಆಯುಕ್ತರಿಗೆ ಸಲ್ಲಿಸಬೇಕಾಗಿದೆ. ನಾಲ್ಕು ತಿಂಗಳಿಗೊಮ್ಮೆ ನಡೆಯುವ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ. 

ಮಕ್ಕಳ ಸಮಸ್ಯೆ ಬಗೆಹರಿಸಿ
ಮಕ್ಕಳಲ್ಲಿ ಪರೀಕ್ಷೆ ಭಯ ಹೋಗಲಾಡಿಸುವ ಮುಖ್ಯ ಉದ್ದೇಶ. ಮಕ್ಕಳು ಅನಾಹುತ ಮಾಡಿಕೊಳ್ಳದಂತೆ ತಡೆಯುವ ಪ್ರಯತ್ನ ನಮ್ಮದು. ಸಂವಾದದ ಮೂಲಕ ಮಕ್ಕಳು ಪೊಲೀಸರೊಂದಿಗೆ ಆತ್ಮೀಯತೆ ಬೆಳೆಸಿಕೊಂಡು, ಭಯವಿಲ್ಲದೆ ಮಾತನಾಡುತ್ತಾರೆ. ಮಕ್ಕಳ ಹಕ್ಕುಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಲಾಗುತ್ತದೆ. ಮಕ್ಕಳ ಬಗ್ಗೆ ಶಿಕ್ಷಕರು ಹಾಗೂ ಹೆತ್ತವರು ಹೆಚ್ಚು ಜಾಗೃತರಾಗಬೇಕು. ಮಕ್ಕಳೊಂದಿಗೆ ಹೆಚ್ಚು ಒಡನಾಟದಿಂದ ಇದ್ದು, ಸಮಸ್ಯೆ ಅರಿತು ಪರಿಹರಿಸಬೇಕು.
ರಾಜಾರಾಮ್‌,
ಬಜಪೆ ಠಾಣೆ ಪಿಎಸ್‌ಐ

Advertisement

ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next