ಬೀದರ: ಸಮಾಜದಲ್ಲಿ ಹೆಣ್ಣನ್ನು ವಸ್ತುವಿನಂತೆ ಬಳಸಿ ಬಿಡುವ ಮತ್ತು ಆಕೆಯ ಶಕ್ತಿ ಕುಗ್ಗಿಸುವ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ಅಪಮಾನದಂಥ ಘಟನೆ ತಡೆದು ಅವರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಜನವಾದಿ ಮಹಿಳಾ ಸಂಘಟನೆ ಹುಟ್ಟಿಕೊಂಡಿದೆ ಎಂದು ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ ಹೇಳಿದರು.
ನಗರದ ಕನ್ನಡ ಸಾಹಿತ್ಯ ಸಂಘದಲ್ಲಿ ಶನಿವಾರ “ಮಹಿಳಾ ಸಮಾನತೆ-ದೇಶದ ಐಕ್ಯತೆಯತ್ತ ಸ್ಪಷ್ಟ ನೋಟ-ದಿಟ್ಟ ಹೆಜ್ಜೆ’ ವಿಷಯ ಕುರಿತು ಹಮ್ಮಿಕೊಂಡಿದ್ದ 11ನೇ ಜಿಲ್ಲಾ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಮಹಿಳಾ ಭ್ರೂಣ ಹತ್ಯೆ ವ್ಯಾಪಕತೆಯಿಂದ ಲಿಂಗ ತಾರತಮ್ಯಕ್ಕೆ ಕಾರಣವಾಗಿದೆ. ತಾಯಿ ಸ್ವರೂಪಿ ಹೆಣ್ಣಿನ ಅತ್ಯಾಚಾರದಂಥ ಘಟನೆಗಳು ನಡೆಯುತ್ತಿದ್ದು, ಸಮಾಜ ಎತ್ತ ಕಡೆ ಸಾಗುತ್ತಿದೆ ಎಂಬುದನ್ನು ಮನಗಾಣಬೇಕಾಗಿದೆ ಎಂದರು.
ಮನೆಗೆಲಸ, ಹೊರಗಿನ ಕೆಲಸದ ಜತೆಗೆ ಮಕ್ಕಳನ್ನು 9 ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡು ಜನ್ಮ ನೀಡುವ ಮಹಿಳೆ ಪುರುಷರಿಗಿಂತ ಮೂರು ಪಟ್ಟು ಹೆಚ್ಚು ಕೆಲಸ ಮಾಡುತ್ತಾಳೆ. ಆದರೆ, ಸಮಾಜದಲ್ಲಿ ಹೆಣ್ಣನ್ನು ನೋಡುವ ದೃಷ್ಟಿಕೋನ ಮಾತ್ರ ಬದಲಾಗಿಲ್ಲ. ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಉನ್ನತ ಹುದ್ದೆ ಪಡೆದು ಪುರುಷರಿಗೆ ಸಮಾನವಾಗಿ ಹೆಜ್ಜೆ ಹಾಕುತ್ತಿದ್ದಾರೆ. ಮಹಿಳೆಯರ ಬಗ್ಗೆ ಮನೋಭಾವ ಬದಲಾಗಬೇಕಾದ ಅಗತ್ಯವಿದೆ ಎಂದರು.
Related Articles
ಕಲಬುರಗಿ ನಿವೃತ್ತ ಪ್ರಾಧ್ಯಾಪಕಿ ಡಾ| ಮೀನಾಕ್ಷಿ ಬಾಳಿ ಉಪನ್ಯಾಸಕರಾಗಿ ಮಾತನಾಡಿ, ಪುರುಷ ಸಮಾಜವು ಮಹಿಳೆ ತನ್ನ ಹಿಡಿತದಲ್ಲಿಡಲು ಅವಳಿಗೆ ಮೈಲಿಗೆ ಎಂದು ಸೃಷ್ಟಿ ಮಾಡಿದ್ದಾರೆ. ಸಮಾಜದಲ್ಲಿರುವ ಕನಿಷ್ಟ ಎಂಬ ನಂಬಿಕೆ ಕಿತ್ತೂಗೆಯಬೇಕು. ಇದಕ್ಕಾಗಿ ಕಳೆದ 40 ವಷಗಳ ಹಿಂದೆ ಜನವಾದಿ ಮಹಿಳಾ ಸಂಘಟನೆ ಜನ್ಮ ತಾಳಿದ್ದು ಈಗ ಕರ್ನಾಟಕ ಸೇರಿ ದೇಶಾದ್ಯಂತ ಸುಮಾರು 1.60 ಕೋಟಿ ಸದಸ್ಯತ್ವ ಹೊಂದಿದೆ ಎಂದು ಹೇಳಿದರು.
ಸಂಗಮ ಸಂಸ್ಥೆ ಸಂಯೋಜಕಿ ಶೀಲಾ ಕಾರ್ಯಕ್ರಮ ಉದ್ಘಾಟಿಸಿದರು. ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮೀ ಗಡ್ಡೆ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಹಿರಿಯ ಚಿಂತಕರಾದ ಲೀಲಾವತಿ ಚಾಕೋತೆ, ಲೀಲಾ ಸಂಗ್ರಾಮ, ಅಬಕಾರಿ ಪಿಎಸೈ ಕೌಶಲ್ಯ ಸಂದೀಪ ಕಾಸರೆ, ತೃತೀಯ ಲಿಂಗಿ ಅಧ್ಯಕ್ಷರಾದ ಭೂಮಿಕಾ, ಹುಮನಾಬಾದಿನ ಸಮುದಾಯ ಸಂಘಟನಾ ಅಧಿಕಾರಿ ಮೀನಾ ಬೋರಾಳಕರ್, ಸಂಘಟನೆಯ ಬಸವಕಲ್ಯಾಣ ಅಧ್ಯಕ್ಷೆ ಸಂಗೀತಾ ಬಿರಾದಾರ ಹಾಗೂ ರೇಷ್ಮಾ ಹಂಸರಾಜ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಗುಲ್ಬರ್ಗಾ ವಿವಿಯಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ| ಗುರಮ್ಮ ಸಿದ್ದಾರೆಡ್ಡಿ ಹಾಗೂ ರಾಜ್ಯ ಮಟ್ಟದ ಮಹಿಳಾ ಕುಸ್ತಿಯಲ್ಲಿ ದ್ವಿತೀಯ ಸ್ಥಾನ ಪಡೆದ ಔರಾದನ ರೇಣುಕಾ ಔರಾದೆ ಅವರನ್ನು ಸನ್ಮಾನಿಸಲಾಯಿತು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ “ಅಗ್ನಿಪಥ’ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಳ ಮಾಡುವ ಯೋಜನೆಯಾಗಿದೆ. ಹೀಗಾಗಿ ಅದನ್ನು ನಾವು ವಿರೋಧಿಸುತ್ತೇವೆ. ರಾಜ್ಯ ಸರ್ಕಾರ ಹೊಸ ಪಠ್ಯ ಪುಸ್ತಕಕ್ಕೆ ಕೈ ಹಾಕಿದ್ದು ಕೋಮುವಾದಕ್ಕೆ ಪ್ರಚೋದನೆ ನೀಡಿದಂತಾಗಿದೆ. ಹೀಗಾಗಿ ಹೊಸ ಪಠ್ಯಪುಸ್ತಕಗಳನ್ನು ರದ್ದುಗೊಳಿಸಬೇಕು. –ಕೆ. ನೀಲಾ, ರಾಜ್ಯ ಉಪಾಧ್ಯಕ್ಷೆ, ಜನವಾದಿ ಮಹಿಳಾ ಸಂಘಟನೆ