Advertisement

ಮೊಳಹಳ್ಳಿ ಕೃಷ್ಣ ನಾಯ್ಕಗೆ ಸಮ್ಮಾನ

06:36 PM Dec 05, 2019 | Team Udayavani |

ನಡುತಿಟ್ಟು ಪರಂಪರೆಯ ಹಿರಿಯ ಸ್ತ್ರೀವೇಷದಾರಿ ಮೊಳಹಳ್ಳಿ ಕೃಷ್ಣ ನಾಯ್ಕರಿಗೆ ಅವರ ಹುಟ್ಟೂರು ಮೊಳಹಳ್ಳಿಯಲ್ಲಿ ಹುಟ್ಟೂರ ಅಭಿಮಾನಿಗಳು ಡಿ.7ರಂದು ಸಾರ್ವಜನಿಕ ಸಮ್ಮಾನ ಹಾಗೂ ನಿಧಿ ಅರ್ಪಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಬಳಿಕ ಅಮೃತೇಶ್ವರಿ ಮೇಳದವರಿಂದ ಸುಧನ್ವ ಕಾಳಗ ಮತ್ತು ಕನಕಾಂಗಿ ಕಲ್ಯಾಣ ಪ್ರಸಂಗಗಳ ಪ್ರದರ್ಶನ ನೆರವೇರಲಿದೆ.

Advertisement

ಕೃಷ್ಣ ನಾಯ್ಕರು ನಡುತಿಟ್ಟಿನ ವಿವಿಧ ರೀತಿಯ ನೃತ್ಯ ವೈವಿಧ್ಯತೆಯಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವೀರಭದ್ರ ನಾಯ್ಕರ ಶಿಷ್ಯರಾಗಿ ಮಾರ್ಗೋಳಿ ಗೋವಿಂದ ಸೇರೆಗಾರ್‌ ಮತ್ತು ರಾಮನಾಯರಿಯವರ ಖಚಿತವಾದ ಹೆಜ್ಜೆಗಾರಿಕೆ ಇವರಲ್ಲಿ ಗುರುತಿಸಲ್ಪಡಬಹುದಾಗಿದು,ª ಮಟಪಾಡಿ ಶೈಲಿಯ ಪ್ರಾತಿನಿಧಿಕ ಸ್ತ್ರೀ ವೇಷಧಾರಿಯಾಗಿ ಇವರನ್ನು ಗುರುತಿಸಬಹುದು.ಬಡಗುತಿಟ್ಟಿನ ಗರತಿ ಸ್ತ್ರೀ ವೇಷದ ನಿಲುವು ಹೇಗೆ ಇರಬೇಕೆಂಬುದನ್ನು ಅವರ ರತಿ ಕಲ್ಯಾಣದ ದ್ರೌಪದಿ,ರಾವಣ ವಧೆಯ ಮಂಡೋದರಿ,ಪುನರ್‌ ಸ್ವಯಂವರದ ದಮಯಂತಿ ಮುಂತಾದ ವೇಷಗಳಲ್ಲಿ ನೋಡಬಹುದು.

ಆರನೇ ತರಗತಿಯ ವಿದ್ಯಾಭ್ಯಾಸದ ನಂತರ ಹದಿನೈದರ ಹರೆಯದಲ್ಲಿ ದಶಾವತಾರಿ ಗುರು ವೀರಭದ್ರ ನಾಯಕ್‌ ಮತ್ತು ಹಳ್ಳಾಡಿ ಮಂಜಯ್ಯ ಶೆಟ್ಟಿ,ಕೋಟ ವೈಕುಂಠ ಮುಂತಾದ ಘಟಾನುಘಟಿ ಗುರುಗಳಿಂದ ನೃತ್ಯ ಮತ್ತು ಮಾತುಗಾರಿಕೆ ಕಲಿತು ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು. ಬಳಿಕ ಅಮೃತೇಶ್ವರಿ,ಸಾಲಿಗ್ರಾಮ, ಇಡಗುಂಜಿ, ಮಾರಣಕಟ್ಟೆ ಹೀಗೆ 35 ವರ್ಷ ಕಲಾಯಾತ್ರೆ ನಡೆಸಿ ಸದ್ಯ ಅಮೃತೇಶ್ವರಿ ಮೇಳದ ಪ್ರದಾನ ಸ್ತ್ರೀ ವೇಷಧಾರಿಗಳಲ್ಲಿ ಒಬ್ಬರಾಗಿದ್ದಾರೆ.

ಸೌಮ್ಯ ಹಾಗೂ ಗಂಭೀರ ನಡೆಯ ಸ್ತ್ರೀ ವೇಷಗಳನ್ನು ಸಮಾನ ಸಾಮರ್ಥ್ಯದೊಂದಿಗೆ ಪೋಷಿಸುವ ಇವರು ಕಸೆ ವೇಷಗಳಾದ ಮೀನಾಕ್ಷಿ,ಪದ್ಮಗಂಧಿ, ಪ್ರಮೀಳೆ, ಮದನಾಕ್ಷಿ ತಾರಾವಳಿ, ಭ್ರಮರಕುಂತಳೆ ಮುಂತಾದ ಪಾತ್ರಗಳಿಗೆ ಗರಿಷ್ಟ ಮಟ್ಟದ ನ್ಯಾಯ ಒದಗಿಸಿದ್ದಾರೆ. ಶ್ರುತಿಬದ್ಧವಾದ ಅಪರೂಪದ ಸ್ವರ ಇವರ ಹೆಚ್ಚುಗಾರಿಕೆ.ಗರತಿ ವೇಷಗಳಲ್ಲಿ ಕೋಟ ವೈಕುಂಠ ಮತ್ತು ಎಂ.ಎ. ನಾಯ್ಕರ ಪಡಿಯಚ್ಚಿನಂತಿರುವ ಇವರ ವೇಷಗಳು ನಡುತಿಟ್ಟಿನ ಪ್ರಾತಿನಿಧಿಕ ವೇಷಗಳಾಗಿ ಗುರುತಿಸಲ್ಪಟ್ಟಿವೆ. ಉತ್ತರದ ಇಡಗುಂಜಿ ಮೇಳದಲ್ಲಿ ಇವರ ಹೆಜ್ಜೆಗಾರಿಕೆ ನೋಡಿ ಕೆರೆಮನೆ ಶಂಭು ಹೆಗಡೆ ಮತ್ತು ಮಹಾಬಲ ಹೆಗಡೆಯವರು ಶಹಬ್ಟಾಸ್‌ ಗಿರಿ ನೀಡಿದ್ದು ಅಲ್ಲಿನ ಶ್ರೀ ಮಯ ಯಕ್ಷಗಾನ ಕೇಂದ್ರದಲ್ಲಿ ನೃತ್ಯಗುರುವಾಗಿ ಕೆಲಕಾಲ ಸೇವೆ ಸಲ್ಲಿಸಿದ್ದರು.

ಇವರ ಜೋಡಾಟದ ಮೀನಾಕ್ಷಿ, ಮದನಾಕ್ಷಿ ಮುಂತಾದ ವೇಷಗಳು ಅಪಾರ ಜನ ಮನ್ನಣೆಗೆ ಪಾತ್ರವಾಗಿವೆ.ದ್ರೌಪದಿ,ಶಶಿಪ್ರಭೆ,ಅಂಬೆ, ಚಂದ್ರಮತಿ, ಸೀತೆ, ದಮಯಂತಿ, ದೇವಯಾನಿ ಮೊದಲಾದ ಸ್ತ್ರೀ ಭೂಮಿಕೆಗಳಲ್ಲಿ ಉನ್ನತ ಕಲಾವಂತಿಕೆಯ ಮೆರುಗನ್ನು ನೀಡಿದ್ದಾರೆ.

Advertisement

ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next