Advertisement
ಗುರುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ನೇತೃತ್ವದ ನಿಯೋಗ ಸಂಧಾನ ಮಾತುಕತೆ ನಂತರ, ಏಪ್ರಿಲ್ 19ಕ್ಕೆ ಬದಲಾಗಿ ಏಪ್ರಿಲ್ 10ರಂದೇ ಸಭೆ ನಡೆಸಿ ಬೇಡಿಕೆಗಳ ಬಗ್ಗೆ ಪರಿಶೀಲಿಸುವ ಭರವಸೆ ದೊರೆತ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪ್ರತಿಭಟನೆ ವಾಪಸ್ ಪಡೆಯಲಾಗಿದೆ.
Related Articles
ಪ್ರತಿಭಟನೆ ನಾಲ್ಕನೇ ದಿನವೂ ಮುಂದುವರಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಸಂಜೆ ಸಂಧಾನದ ಪ್ರಯತ್ನವಾಗಿ ಮತ್ತೂಮ್ಮೆ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಹಾಗೂ ಸಿಐಟಿಯು ಅಧ್ಯಕ್ಷ ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಜಯಣ್ಣ, ಶಿವಣ್ಣ , ಗಿರಿಜಾ, ವಿ.ಜೆ.ಕೆ.ನಾಯರ್, ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಹಾಗೂ ಸುನಂದ ಅವರನ್ನು ಕರೆಸಿ ಮಾತನಾಡಿದರು.
Advertisement
ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು, ರಾಜ್ಯ ಸರ್ಕಾರ ಮಹಿಳೆಯರ, ಹಿಂದುಳಿದವರ, ದಲಿತರ ಪರವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಂತ ಹಂತವಾಗಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗೌರವ ಧನ ಹೆಚ್ಚಿಸಿದೆ. ಈಗಲೂ ಕೂಡ ಸರ್ಕಾರ ಕಾರ್ಯಕರ್ತರ ಪರವಾಗಿದ್ದು, ಏ.19 ರ ಬ್ಲಾಗಿ ಏಪ್ರಿಲ್ 10ರಂದು ನಡೆಸಲು ನಿರ್ಧರಿಸಲಾಗಿದ್ದು ಅಂದಿನ ಸಭೆಯಲ್ಲಿ ನಿಮ್ಮ ಪರವಾದ ತೀರ್ಮಾನ ಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿದರು.
ಹೋರಾಟಗಾರರು ಶಾಂತಿಯಿಂದ ವರ್ತಿಸಿ ಪ್ರತಿಭಟನೆ ಹಿಂಪಡೆಯಬೇಕು. ನಾನು ನಿಮ್ಮಪರವಾಗಿದ್ದು, ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಏ.10ರಂದು ಸಭೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಸರ್ಕಾರದ ಮೇಲೆ ನಂಬಿಕೆಯಿಟ್ಟಿದ್ದೇವೆ. ಒಂದು ವೇಳೆ ಕೊಟ್ಟ ಮಾತು ಈಡೇರಿಸದಿದ್ದಲ್ಲಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಾಗುವುದು. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಹೋರಾಟಕ್ಕೆ ಕೊನೆಗೂ ಯಶಸ್ವಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಗಿದೆ ಎಂದು ಘೋಷಿಸಿದರು.
ಕಾರ್ಯಕರ್ತರ ವಿರೋಧಈ ಮಧ್ಯೆ, ಪ್ರತಿಭಟನೆ ಹಿಂದಕ್ಕೆ ಪಡೆಯುವ ಅಂಗನವಾಡಿ ನೌಕರರ ರಾಜ್ಯ ಕಾರ್ಯಕಾರಣಿ ಸಭೆ ನಿರ್ಧಾರಕ್ಕೆ ಹಲವು ಪ್ರತಿಭನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು. ಸಚಿವರು 10 ಸಾವಿರ ಗೌರವ ಧನ ಕೊಡುವುದಾಗಿ ಘೋಷಿಸಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯಬಾರದು ಎಂದು ಆಗ್ರಹಿಸಿ ನಾವು ಧರಣಿ ಮುಂದುವರಿಸುತ್ತೇವೆ ಎಂದು ಪಟ್ಟು ಹಿಡಿದರು. ಆಗ ವರಲಕ್ಷ್ಮಿ ಅವರು ಅವರ ಜತೆ ಮಾತನಾಡಿ ಸರ್ಕಾರದ ಭರವಸೆ ಬಗ್ಗೆ ವಿವರಿಸಿ ಮನವೊಲಿಸಿದರು. ನಂತರ ಪ್ರತಿಭಟನೆ ವಾಪಸ್ ಪಡೆಯಲು ಅವರೂ ಒಪ್ಪಿದರು. ಜೈಕಾರ ಹಾಕಿದವರೇ ಧಿಕ್ಕಾರ ಅಂದ್ರು
ಸಂಘದ ಅಧ್ಯಕ್ಷೆ ವರಲಕ್ಷ್ಮಿ, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಹೋರಾಟಗಾರರಿಗೆ ಜಯವಾಗಿದೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸಲಿದೆ. ಈ ವಿಚಾರ ಖುದ್ದು ಸಚಿವೆ ಉಮಾಶ್ರೀ ಘೋಷಣೆ ಮಾಡಲಿದ್ದಾರೆ ಎಂದರು. ಆಗ ಪ್ರತಿಭಟನಾನಿರತರು ಅಂತೂ, ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಸಚಿವೆ ಉಮಾಶ್ರೀಗೆ ಜೈಕಾರ ಹಾಕಿದರು. ಆದರೆ, ಸಚಿವೆ ಉಮಾಶ್ರೀ ಯಾವುದೇ ಖಚಿತ ಘೋಷಣೆ ಮಾಡದೆ, ಏ.10ರ ಸಭೆಯಲ್ಲಿ ತೀರ್ಮಾನಿಸುತ್ತೇವೆ ಎಂದಾಗ ಈಗಲೇ ವೇತನ ನಿಗದಿಪಡಿಸಬೇಕು ಎಂದು ಪಟ್ಟು ಹಿಡಿದ ಕಾರ್ಯಕರ್ತರು ಸಚಿವೆ ಉಮಾಶ್ರೀಗೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿ ಆಕ್ರೋಶ ವ್ಯಕ್ತಪಡಿಸಿದವರನ್ನು ಸಂಘದ ಪದಾಧಿಕಾರಿಗಳು ಸಮಾಧಾನ ಪಡಿಸಿದರು.